ಬಾಲಕಾರ್ಮಿಕರ ರಕ್ಷಣೆಗೆ ಅನಿರೀಕ್ಷಿತ ದಾಳಿ, ತಪಾಸಣೆ ಹೆಚ್ಚಿಸಲು ಜಿಲ್ಲಾಧಿಕಾರಿ ಸೂಚನೆ

KannadaprabhaNewsNetwork |  
Published : Jun 08, 2026, 03:45 AM IST
ಜಿಲ್ಲಾಧಿಕಾರಿ ದರ್ಶನ್‌ | Kannada Prabha

ಸಾರಾಂಶ

ಅಂಗಡಿಗಳು, ಕಾರ್ಖಾನೆಗಳಿಗೆ, ತೋಟಗಳು, ಇತರೆ ಕೃಷಿ ಸೇರಿದಂತೆ ಅಥವಾ ಅಪಾಯಕಾರಿ ಕೆಲಸಗಳಲ್ಲಿ ಬಾಲಕಾರ್ಮಿಕರನ್ನು ತೊಡಗಿಸಿಕೊಳ್ಳದಂತೆ ನಿಯಮಿತ ದಾಳಿ ನಡೆಸಿ, ತಪಾಸಣೆಯನ್ನು ಹೆಚ್ಚಿಸಿ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಸೂಚಿಸಿದ್ದಾರೆ.

ಮಂಗಳೂರು: ಅಂಗಡಿಗಳು, ಕಾರ್ಖಾನೆಗಳಿಗೆ, ತೋಟಗಳು, ಇತರೆ ಕೃಷಿ ಸೇರಿದಂತೆ ಅಥವಾ ಅಪಾಯಕಾರಿ ಕೆಲಸಗಳಲ್ಲಿ ಬಾಲಕಾರ್ಮಿಕರನ್ನು ತೊಡಗಿಸಿಕೊಳ್ಳದಂತೆ ನಿಯಮಿತ ದಾಳಿ ನಡೆಸಿ, ತಪಾಸಣೆಯನ್ನು ಹೆಚ್ಚಿಸಿ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಸೂಚಿಸಿದ್ದಾರೆ. ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಕಾರ್ಯಕಾರಿ ಸಮಿತಿ ಹಾಗೂ ಟಾಸ್ಕ್ ಫೋರ್ಸ್ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬಾಲಕಾರ್ಮಿಕ ಪದ್ಧತಿ ಕುರಿತು ಕಾನೂನು ಅರಿವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನಜಾಗೃತಿ ಮೂಡಿಸಬೇಕು. ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಟಾಸ್ಕ್ ಫೋರ್ಸ್ ಸಮಿತಿ ಸಭೆಯನ್ನು ನಿಯಮಿತವಾಗಿ ನಡೆಸಲು ಅವರು ಸೂಚಿಸಿದರು.

18 ವರ್ಷದೊಳಗಿನ ಮಕ್ಕಳನ್ನು ಬಾಲಕಾರ್ಮಿಕರು ಅಥವಾ ಕಿಶೋರಕಾರ್ಮಿಕರನ್ನಾಗಿ ಕೆಲಸಕ್ಕೆ ನೇಮಿಸಿಕೊಳ್ಳದಂತೆ, ಬಾಲಕಾರ್ಮಿಕ ನಿಷೇಧದ ಬಗ್ಗೆ ಲೋಗೋವನ್ನು ರಚಿಸಿ, ಎಲ್ಲಾ ಸಂಸ್ಥೆಗಳಲ್ಲಿ ಸಾರ್ವಜನಿಕವಾಗಿ ಪ್ರದರ್ಶಿಸಲು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.

ಎಲ್ಲ ಕಾರ್ಖಾನೆ, ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಕಾಯ್ದೆಯ ಸಾರಾಂಶವನ್ನು ಕಡ್ಡಾಯವಾಗಿ ಪ್ರದರ್ಶಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಪತ್ತೆ ಹಚ್ಚಿದ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರನ್ನು ನೇಮಿಸಿಕೊಂಡ ತಪ್ಪಿತಸ್ಥ ಮಾಲೀಕರ ವಿರುದ್ಧ ಮೊಕದ್ದಮೆ ಹೂಡಿರುವ ಪ್ರಕರಣಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಲು ಕ್ರಮ ವಹಿಸುವಂತೆ ತಿಳಿಸಿದರು.

ಬಾಲಕಾರ್ಮಿಕ ಕಾಯ್ದೆ, ತಂಬಾಕು ನಿಯಂತ್ರಣ ಕಾಯ್ದೆ, ಮಾದಕ ವಸ್ತುಗಳ ದುಷ್ಪರಿಣಾಮ ಮತ್ತು ಮಾನವ ಕಳ್ಳ ಸಾಗಾಣಿಕೆ ತಡೆ ಕಾಯ್ದೆ ಹಾಗೂ ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ಶಾಲಾ ಕಾಲೇಜು, ಕಾರ್ಖಾನೆಗಳು ಹಾಗೂ ಕಟ್ಟಡ ನಿರ್ಮಾಣ ಪ್ರದೇಶಗಳಲ್ಲಿ ಸಂಬಂಧಿಸಿದ ಇಲಾಖೆಗಳ ಸಹಕಾರದೊಂದಿಗೆ ಒಟ್ಟು 72 ಕಾನೂನು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಂಡು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗಿದೆ. 2025-26ನೇ ಸಾಲಿನಲ್ಲಿ ದ.ಕ ಜಿಲ್ಲೆಯಾದ್ಯಂತ ಒಟ್ಟು 1,487 ಅನಿರೀಕ್ಷಿತ ತಪಾಸಣೆ ನಡೆಸಿದ್ದು, 5 ಬಾಲಕಾರ್ಮಿಕರು ಹಾಗೂ 23 ಕಿಶೋರ ಕಾರ್ಮಿಕರು ಪತ್ತೆಯಾಗಿದ್ದಾರೆ. ಒಟ್ಟು 28 ಪ್ರಕರಣಗಳಲ್ಲಿ 3 ಬಾಲಕಾರ್ಮಿಕ ನಿಷೇಧ ಕಾಯ್ದೆಯಡಿ ಹಾಗೂ 1 ಕಿಶೋರ ಕಾರ್ಮಿಕ ಅಪಾಯಕಾರಿ ಉದ್ದಿಮೆಯಲ್ಲಿ ಮತ್ತು 13 ಕಿಶೋರ ಕಾರ್ಮಿಕ ನಿಯಂತ್ರಣ ಕಾಯ್ದೆಯಡಿ (ಅಪಾಯಕಾರಿ ಅಲ್ಲದ) ಸಂಸ್ಥೆಗಳಲ್ಲಿ ಮಕ್ಕಳನ್ನು ರಕ್ಷಿಸಲಾಗಿದೆ ಮತ್ತು 5 ಪ್ರಕರಣಗಳಲ್ಲಿ ತಪ್ಪಿತಸ್ಥ ಮಾಲೀಕರಿಂದ 1 ಲಕ್ಷ ರು. ಕಾರ್ಪಸ್ ನಿಧಿ ವಸೂಲಾತಿ ಆಗಿರುವ ಬಗ್ಗೆ ಹಾಗೂ ನ್ಯಾಯಾಲಯ 2 ಪ್ರಕರಣದಲ್ಲಿ 11 ಸಾವಿರ ರು. ದಂಡ ವಿಧಿಸಿರುತ್ತದೆ ಎಂದು ಕಾರ್ಮಿಕ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ಯಾಸ್ ಗೀಸರ್ ಸೋರಿಕೆ: ಪ್ರವಾಸಿ ಯುವತಿ ಸಾವು
ಜಿಲ್ಲೆಯ ಗೌರವ ಹೆಚ್ಚಿಸುವ ಕಾರ್ಯ ಮಾಡುವೆ: ಸಚಿವ ಖಾದರ್