ಗಜೇಂದ್ರಗಡ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ, ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯನ್ನು ರದ್ದುಪಡಿಸಲು ಆಗ್ರಹಿಸಿ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಹೋರಾಟ ಎಸ್ಎಫ್‌ಐ ಸಂಘಟನೆ ನೇತೃತ್ವದಲ್ಲಿ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಸೋಮವಾರ ಪಟ್ಟಣ ಚನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮೆಗೆ ಆಗ್ರಹಿಸಿದರು.
ಶಿಕ್ಷಣ ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿ ಇರಬೇಕು. ಆದರೆ ಕೇಂದ್ರ ಸರ್ಕಾರ ಸಂಪೂರ್ಣವಾಗಿ ಶಿಕ್ಷಣವನ್ನು ಕೇಂದ್ರೀಕರಿಸಿ ವ್ಯಾಪಾರದ ಸರಕಾಗಿಸಿದ ಪರಿಣಾಮ ಕೋಚಿಂಗ್ ಮಾಫಿಯಾಗಳು ಹೆಚ್ಚಾಗಿದ್ದು, ಪ್ರಶ್ನೆಪತ್ರಿಕೆ ಸೋರಿಕೆ ಘಟನೆಯಿಂದ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರದ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ ರಕ್ಷಣಾ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.ಎಸ್‌ಎಫ್‌ಐ ಮುಖಂಡ ಚಂದ್ರು ರಾಠೋಡ ಮಾತನಾಡಿ, ಅಧಿಕಾರದ ಅಹಂಕಾರಕ್ಕಿಂತ ಪ್ರಜಾಪ್ರಭುತ್ವದ ಧ್ವನಿಗೆ ಬೆಲೆ ನೀಡುವುದು ಸರ್ಕಾರದ ಕರ್ತವ್ಯವಾಗಬೇಕು. ನೀಟ್ ಪರೀಕ್ಷೆ ಅಕ್ರಮ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮೆ ಒತ್ತಾಯಿಸಿ ಪರಿಸರವಾದಿ, ಶಿಕ್ಷಣತಜ್ಞ ಹೋರಾಟಗಾರ ಸೋನಮ್ ವಾಂಗ್ಚೂಕ್ ಅವರು ಕೈಗೊಂಡಿದ್ದು, ಉಪವಾಸ ಸತ್ಯಾಗ್ರಹ ದೇಶದ ಯುವಜನರ ಆತಂಕ ಮತ್ತು ಆಕ್ರೋಶದ ಪ್ರತೀಕವಾಗಿದೆ. ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಬಂಧಿಸಿದ ಗಂಭೀರ ಪ್ರಶ್ನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮೌನ ಮತ್ತು ನಿರ್ಲಕ್ಷ್ಯ ಅತ್ಯಂತ ಖಂಡನಿಯ ಎಂದರು. ಅನಿಲ್ ಆರ್, ಶರಣು ಮಾಟರಂಗಿ, ಗುರು ಶಾಂತಗೌಡರ, ಮೀನಾಕ್ಷಿ, ನೇತ್ರಾವತಿ, ನಿವೇದಿತಾ, ಜಮುನಾ, ಮಧು, ಶ್ರೇಯ, ಸುಮಂಗಲ, ಸುಶ್ಮಿತಾ, ಕಿಶೋರ್, ಆಕಾಶ್, ಅಜಯ್, ಪ್ರಭು, ಹರೀಶ್, ಅನಿಲ್, ದೊಡ್ಡಬಸಪ್ಪ ಇತರರು ಭಾಗವಹಿಸಿದ್ದರು.