ಇಂದು ಬಳಘಟ್ಟ ಗ್ರಾಮಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಭೇಟಿ: ಸಿ.ಎಸ್.ಪುಟ್ಟರಾಜು

KannadaprabhaNewsNetwork |  
Published : Aug 23, 2026, 01:45 AM IST
22ಕೆಎಂಎನ್ ಡಿ14,15,16 | Kannada Prabha

ಸಾರಾಂಶ

ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿದ್ದಾಗ ಪಾಂಡವಪುರ ತಾಲೂಕಿನ ಮಳೆಯಾಶ್ರಿತ ಪ್ರದೇಶವಾದ ಮೇಲುಕೋಟೆ ಹೋಬಳಿಗೆ ಕಾವೇರಿ ನೀರೊದಗಿಸಲು ಬಳಘಟ್ಟ ಏತನೀರಾವರಿ ಯೋಜನೆಯನ್ನು ನಿರ್ಮಿಸಲು ₹300 ಕೋಟಿ ಅನುದಾನ ಬಿಡುಗಡೆ ಮಾಡಿದ್ದರು ಎಂದರು..

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಬಳಘಟ್ಟ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀರಾಮಮಂದಿರ ಹಾಗೂ ಪುನರ್ ನಿರ್ಮಾಣಗೊಂಡಿರುವ ಶ್ರೀಮಾರಮ್ಮದೇವಿ ದೇವಸ್ಥಾನವನ್ನು ಆ.23ರಂದು ಮಾಜಿ ಸಿಎಂ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಉದ್ಘಾಟಿಸಿದ ಬಳಿಕ ಗ್ರಾಮಸ್ಥರಿಂದ ಅಭಿನಂದನೆ ಸ್ವೀಕರಿಸಲಿದ್ದಾರೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ತಿಳಿಸಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂದು ಬೆಳಗ್ಗೆ 10 ಗಂಟೆಗೆ ಮೇಲುಕೋಟೆ ಶ್ರೀಚೆಲುವನಾರಾಯಣಸ್ವಾಮಿ ದೇವಸ್ಥಾನಕ್ಕೆ ತೆರಳಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಬಳಿಕ ಬಳಘಟ್ಟ ಏತನೀರಾವರಿ ಯೋಜನೆ ವೀಕ್ಷಣೆ ಮಾಡಲಿದ್ದಾರೆ. ನಂತರ ಬಳಘಟ್ಟ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀರಾಮಮಂದಿರ ಹಾಗೂ ಪುನರ್ ನಿರ್ಮಾಣಗೊಂಡಿರುವ ಶ್ರೀಮಾರಮ್ಮದೇವಿ ದೇವಸ್ಥಾನವನ್ನು, ಬಳಿಕ ದೇವಸ್ಥಾನದ ಊಟದ ಹಾಲ್ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.

ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿದ್ದಾಗ ಪಾಂಡವಪುರ ತಾಲೂಕಿನ ಮಳೆಯಾಶ್ರಿತ ಪ್ರದೇಶವಾದ ಮೇಲುಕೋಟೆ ಹೋಬಳಿಗೆ ಕಾವೇರಿ ನೀರೊದಗಿಸಲು ಬಳಘಟ್ಟ ಏತನೀರಾವರಿ ಯೋಜನೆಯನ್ನು ನಿರ್ಮಿಸಲು ₹300 ಕೋಟಿ ಅನುದಾನ ಬಿಡುಗಡೆ ಮಾಡಿದ್ದರು ಎಂದರು.

ಈ ಯೋಜನೆಯಿಂದ ಹಲವು ಗ್ರಾಮಗಳ ಕೆರೆಕಟ್ಟೆಗಳನ್ನು ತುಂಬಿಸುವ ಜತೆಗೆ ಕೃಷಿಗೆ ಅನುಕೂಲ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಬಳಘಟ್ಟ ಗ್ರಾಮಸ್ಥರು ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಅಭಿನಂದನೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ದೇವಸ್ಥಾನ ಉದ್ಘಾಟನಾ ಕಾರ್ಯಕ್ರಮ ಮುಗಿಸಿ ಗ್ರಾಮಸ್ಥರಿಂದ ಅಭಿನಂದನೆ ಸ್ವೀಕರಿಸಲಿದ್ದಾರೆ ಎಂದು ಹೇಳಿದರು.

ಸಮಾರಂಭಕ್ಕೆ ಗಣ್ಯರ ಆಗಮನ:

ಸಮಾರಂಭದಲ್ಲಿ ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಸಾನ್ನಿಧ್ಯದಲ್ಲಿ ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ರಾಮಮಂದಿರ‌ ಉದ್ಘಾಟಿಸಿ ಅಭಿನಂದನೆ ಸ್ವೀಕರಿಸಲಿದ್ದಾರೆ. ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಶಾಸಕ‌ ಸಿ.ಎಸ್.ಪುಟ್ಟರಾಜು ಮಾರಮ್ಮನ ಗುಡಿ ಉದ್ಘಾಟಿಸುವರು. ಬೆಂಗಳೂರಿನ ವಕೀಲರಾದ ವಿನುತ ರಾಘವೇಂದ್ರ ಮತ್ತು ರಾಘವೇಂದ್ರ ಶ್ರೀರಾಮಮಂದಿರ ಗರ್ಭಗುಡಿ ಉದ್ಘಾಟಿಸುವರು.

ಸಮಾಜ ಸೇವಕ ಅರವಿಂದ ರಾಘವನ್, ವಿಧಾನ ಪರಿಷತ್ ಸದಸ್ಯ ವಿವೇಕಾನಂದ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ಚಲುವನಾರಾಯಣಸ್ವಾಮಿ ಮತ್ತು ಯೋಗನರಸಿಂಹಸ್ವಾಮಿ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕನಗೋನಹಳ್ಳಿ ಪರಮೇಶ್ ಗೌಡ, ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್, ಜಿಪಂ ಮಾಜಿ ಸದಸ್ಯರಾದ ಎಚ್.ಮಂಜುನಾಥ್, ಎಚ್.ತ್ಯಾಗರಾಜು, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಚ್.ಸಿ.ಪುಟ್ಟಸ್ವಾಮಿಗೌಡ, ಎ.ವಿಜೇಂದ್ರಮೂರ್ತಿ, ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಗೌಡಗೆರೆ ಜಿ.ಇ.ರವಿಕುಮಾರ್, ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಎಚ್.ಎಸ್.ಮಂಜುನಾಥ್ ಗೌಡ ಸೇರಿದಂತೆ ಇತರರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಾಲೂಕು ಅಭಿವೃದ್ಧಿಗೆ ತಂದೆಯಕನಸು ಸಾಕಾರವೇ ನನ್ನ ಗುರಿ
ಶಾಸಕ ಸುರೇಶ್‌ಗೆ ಮಾಜಿ ಸಚಿವ ಶಿವರಾಂ ಸವಾಲು