ಕೇಂದ್ರ ಸಚಿವ ಜೋಶಿ ಭರವಸೆ, ಅನಿರ್ದಿಷ್ಟಾವಧಿ ಧರಣಿ ಅಂತ್ಯ

KannadaprabhaNewsNetwork |  
Published : Dec 03, 2025, 02:15 AM IST
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಂಗನವಾಡಿ, ಆಶಾ, ಅಕ್ಷರ ದಾಸೋಹ ಕಾರ್ಯಕರ್ತರ ಆಹೋರಾತ್ರಿ ಧರಣಿ 2ನೇ ದಿನವಾದ ಮಂಗಳವಾರ ಮುಂದುವರೆಯಿತು. | Kannada Prabha

ಸಾರಾಂಶ

ನೂತನ ಕಾರ್ಮಿಕ ಸಂಹಿತೆಗಳ ರದ್ಧತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ, ಆಶಾ ಹಾಗೂ ಅಕ್ಷರ ದಾಸೋಹ ನೌಕರರು ಇಲ್ಲಿನ ಚಿಟಗುಪ್ಪಿ ಆಸ್ಪತ್ರೆ ಆವರಣದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಚೇರಿ ಎದುರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಮಂಗಳವಾರ ಎರಡನೇ ದಿನಕ್ಕೆ ಮುಂದುವರಿದಿತ್ತು.

ಹುಬ್ಬಳ್ಳಿ:

ಅಂಗನವಾಡಿ, ಆಶಾ ಹಾಗೂ ಅಕ್ಷರ ದಾಸೋಹ ನೌಕರರ ವಿವಿಧ ಬೇಡಿಕೆ ಈಡೇರಿಕೆಗೆ ಸಂಬಂಧಿಸಿದಂತೆ ಬುಧವಾರ ಸಂಜೆ ದೆಹಲಿಯಲ್ಲಿ ಸಭೆ ನಡೆಸುವುದಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಅನಿರ್ದಿಷ್ಟಾವಧಿ ಧರಣಿಯನ್ನು ಮಂಗಳವಾರ ಹಿಂಪಡೆಯಲಾಯಿತು. ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಹೋರಾಟ ಅಂತ್ಯಗೊಂಡಿದೆ.

ನೂತನ ಕಾರ್ಮಿಕ ಸಂಹಿತೆಗಳ ರದ್ಧತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ, ಆಶಾ ಹಾಗೂ ಅಕ್ಷರ ದಾಸೋಹ ನೌಕರರು ಇಲ್ಲಿನ ಚಿಟಗುಪ್ಪಿ ಆಸ್ಪತ್ರೆ ಆವರಣದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಚೇರಿ ಎದುರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಮಂಗಳವಾರ ಎರಡನೇ ದಿನಕ್ಕೆ ಮುಂದುವರಿದಿತ್ತು.

ಸಂಜೆ 6.30ಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ದೂರವಾಣಿ ಕರೆ ಮೂಲಕ ಪ್ರತಿಭಟನಾನಿರತ ಮುಖಂಡರೊಂದಿಗೆ ಮಾತನಾಡಿ, ನೌಕರರ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ಕುರಿತು ಕರ್ನಾಟಕದ ನಾಲ್ವರು ಕೇಂದ್ರ ಸಚಿವರು ಹಾಗೂ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಮ್ಮುಖದಲ್ಲಿ ಸಭೆ ನಡೆಸಲಾಗುವುದು. ಸಭೆಯಲ್ಲಿ ಭಾಗವಹಿಸಲು ವಿವಿಧ ಸಂಘಟನೆಯ 10 ಜನ ರಾಜ್ಯ ಮುಖಂಡರನ್ನು ಆಹ್ವಾನಿಸಲಾಗಿದೆ. ಅವರು ಬುಧವಾರ ಬೆಳಗ್ಗೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಸಭೆಯಲ್ಲಿ ತಾವು ಸಹ ಖುದ್ದು ಹಾಜರಿರುವುದಾಗಿ ಸಚಿವ ಪ್ರಹ್ಲಾದ ಜೋಶಿ, ಎಚ್.ಡಿ. ಕುಮಾರಸ್ವಾಮಿ, ವಿ. ಸೋಮಣ್ಣ ಹಾಗೂ ಶೋಭಾ ಕರಂದಾಜ್ಲೆ ಲಿಖಿತ ಭರವಸೆ ನೀಡಿದ್ದಾರೆ. ಈ ಬೆಳವಣಿಗೆಯನ್ನು ಪರಿಗಣಿಸಿ, ಅಂಗನವಾಡಿ, ಆಶಾ ಹಾಗೂ ಅಕ್ಷರ ದಾಸೋಹ ನೌಕರರು ತಮ್ಮ ಅನಿರ್ದಿಷ್ಟಾವಧಿ ಧರಣಿಯನ್ನು ಹಿಂಪಡೆದುಕೊಂಡಿದ್ದಾರೆ ಎಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ಸಿಐಟಿಯು ರಾಜ್ಯ ಕಾರ್ಯದರ್ಶಿ ಮಹೇಶ ಪತ್ತಾರ "ಕನ್ನಡಪ್ರಭ "ಕ್ಕೆ ತಿಳಿಸಿದರು.

ಸೋಮವಾರ ಇಡೀ ದಿನ ಸ್ಥಳದಲ್ಲಿಯೇ ಕುಳಿತು ಧರಣಿ ನಡೆಸಿದ ಕಾರ್ಯಕರ್ತರು,ಊಟ-ಉಪಹಾರ ಮಾಡಿದ ನಂತರ ರಾತ್ರಿ ಅಲ್ಲಿಯೇ ಮಲಗಿಕೊಂಡರು. ಮಂಗಳವಾರ ಬೆಳಗ್ಗೆ ಕೇಂದ್ರ ಸಚಿವರಿಂದ ಯಾವುದೇ ಸಕಾರಾತ್ಮಕ ಭರವಸೆ ಸಿಗದ ಕಾರಣಕ್ಕೆ ಧರಣಿ ಮುಂದುವರಿಸಲಾಗಿತ್ತು. ಸಂಜೆ ಸಚಿವರ ಭರವಸೆ ನೀಡಿದ ಹಿನ್ನೆಲೆಯಲ್ಲಿ ಎಲ್ಲ ನೌಕರರು ಜಯಘೋಷಣೆ ಕೂಗುತ್ತಾ ಮನೆಯತ್ತ ಹೆಜ್ಜೆ ಹಾಕಿದರು.

ಅಕ್ಷರದಾಸೋಹ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಮಾಲಿನಿ ಮೇಸ್ತಾ, ಸಿಐಟಿಯು ರಾಜ್ಯ ಕಾರ್ಯದರ್ಶಿ ಮಹೇಶ ಪತ್ತಾರ, ಅಂಗನವಾಡಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷೆ ಯಮುನಾ ಗಾಂವಕರ, ಮುಖಂಡರಾದ ಲಕ್ಷ್ಮೀದೇವಮ್ಮ, ಸಿದ್ದಮ್ಮ ಕಲ್ಗುಡಿ, ಚನ್ನಮ್ನ ಡೊಳ್ಳಿನ, ದೊಡ್ಡವ್ವ ಪೂಜಾರ, ಶಾರದಾ ರೋಣದ, ಮಹೇಶ ಹಿರೇಮಠ, ಯಶೋದಾ ಬೇಟಗೇರಿ, ವಿದ್ಯಾ ವೈದ್ಯ, ಗಂಗಾ ನಾಯ್ಕ, ಜಯಶ್ರೀ ಹಿರೇಕರ, ಕಲಾವತಿ ಸೇರಿದಂತೆ ಸಾವಿರಾರು ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.

ಚಳಿಯಲ್ಲೇ ಮಲಗಿದ ಮಹಿಳೆಯರು

ಧರಣಿಯಲ್ಲಿ ಸಾವಿರಾರು ಧರಣಿ ನಿರತ ಮಹಿಳೆಯರು ರಾತ್ರಿಯಿಡಿ ಚಳಿಯಿಂದ ಪರದಾಡುವಂತಾಯಿತು. ಮೊದಲ ದಿನವಾದ ಸೋಮವಾರ ಸಾವಿರಾರು ಕಾರ್ಯಕರ್ತೆಯರು ಊಟದೊಂದಿಗೆ ಧರಣಿಯಲ್ಲಿ ಪಾಲ್ಗೊಂಡಿದ್ದರು. ಹಲವರು ಸೋಮವಾರ ರಾತ್ರಿ, ಮಂಗಳವಾರ ಊಟಕ್ಕಾಗಿ ಪರದಾಡುವಂತಾಯಿತು. ಕೊರೆಯುವ ಚಳಿಯಿಂದಾಗಿ ಕೆಲವರು ಇಲ್ಲಿನ ಶ್ರೀಸಿದ್ಧಾರೂಢರ ಮಠ, ಮೂರುಸಾವಿರ ಮಠದ ಆವರಣ, ಬಸ್‌ ನಿಲ್ದಾಣಗಳಲ್ಲಿ ಆಶ್ರಯ ಪಡೆದಿದ್ದರೆ ಇನ್ನು ಕೆಲವರು ಧರಣಿ ನಿರತ ಸ್ಥಳದಲ್ಲಿಯೇ ಮಲಗಿದರು. ಹಲವಾರು ಕಾರ್ಯಕರ್ತೆಯರು ಪುಟ್ಟ ಮಕ್ಕಳೊಂದಿಗೆ ಧರಣಿಯಲ್ಲಿ ಪಾಲ್ಗೊಂಡಿದ್ದು, ಮಕ್ಕಳೊಂದಿಗೆ ಕೊರೆಯುವ ಚಳಿಯಲ್ಲಿ ನಡಗುತ್ತಾ ಮಲಗಿದ್ದು ಕಂಡುಬಂದಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಣಸೆ, ಹಲಸು, ನೇರಳೆಗೆ ಮಂಡಳಿ ರಚಿಸಿ: ದೇವೇಗೌಡ
ಗುಮ್ಮ ಬಂದ ಗುಮ್ಮ, ಮಕ್ಕಳಿಗೆ ಹೊಡೆಯೋ ಗುಮ್ಮ!