ವಿದ್ಯುತ್‌ ಟಿಸಿ ಸುಟ್ಟರೂ ಬದಲಿಸದ ಹೆಸ್ಕಾಂ ವಿರುದ್ಧ ರೈತರ ಆಕ್ರೋಶ

KannadaprabhaNewsNetwork |  
Published : Dec 03, 2025, 02:15 AM IST
2ಎಚ್‌ವಿಆರ್‌2- | Kannada Prabha

ಸಾರಾಂಶ

ರೈತರ ಜಮೀನುಗಳಲ್ಲಿ ಅಳವಡಿಸಿದ್ದ ವಿದ್ಯುತ್ ಟ್ರಾನ್ಸಫಾರ್ಮರ್‌ಗಳು ಸುಟ್ಟು 10 ದಿನ ಕಳೆದರೂ ಬದಲಾಯಿಸದ ಹೆಸ್ಕಾಂ ಅಧಿಕಾರಿಗಳ ವಿರುದ್ಧ ತಾಲೂಕಿನ ವಿವಿಧ ಗ್ರಾಮಗಳ ರೈತರು ಮಂಗಳವಾರ ಕಚೇರಿಗೆ ಆಗಮಿಸಿ ಆಕ್ರೋಶ ವ್ಯಕ್ತಪಡಿಸಿದರು.

ಹಾವೇರಿ: ರೈತರ ಜಮೀನುಗಳಲ್ಲಿ ಅಳವಡಿಸಿದ್ದ ವಿದ್ಯುತ್ ಟ್ರಾನ್ಸಫಾರ್ಮರ್‌ಗಳು ಸುಟ್ಟು 10 ದಿನ ಕಳೆದರೂ ಬದಲಾಯಿಸದ ಹೆಸ್ಕಾಂ ಅಧಿಕಾರಿಗಳ ವಿರುದ್ಧ ತಾಲೂಕಿನ ವಿವಿಧ ಗ್ರಾಮಗಳ ರೈತರು ಮಂಗಳವಾರ ಕಚೇರಿಗೆ ಆಗಮಿಸಿ ಆಕ್ರೋಶ ವ್ಯಕ್ತಪಡಿಸಿದರು. ನಗರದ ಕೆಇಬಿ ಕಚೇರಿಯಲ್ಲಿ ತಾಲೂಕಿನ ಕುರುಬಗೊಂಡ, ಹನುಮನಹಳ್ಳಿ, ನೆಲೋಗಲ್ಲ, ಭರಡಿ, ಬೂದಗಟ್ಟಿ, ಚಿಕ್ಕಲಿಂಗದಹಳ್ಳಿ, ಹೆಡಿಗ್ಗೊಂಡ, ಕನಕಾಪುರ ಸೇರಿದಂತೆ ಹಲವು ಗ್ರಾಮಗಳ ರೈತರು ಆಗಮಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮುಂಗಾರಿನಲ್ಲಿ ಸಾಲಸೋಲ ಮಾಡಿ ಅತಿವೃಷ್ಟಿ ಪರಿಣಾಮದಿಂದ ಬೆಳೆ ಬಾರದೆ ಕೈಸುಟ್ಟುಕೊಂಡಿದ್ದೇವೆ. ಹಿಂಗಾರು ಬೆಳೆಯಾದರೂ ಕೈಹಿಡಿಯುತ್ತೆ ಎಂದು ಬಿತ್ತನೆ ಮಾಡಿದ್ದೇವೆ. ಸಾಲು ಮಾಡುವ ಹಂತದಲ್ಲಿ, ಮತ್ತೆ ಕೆಲವೆಡೆ ಮೊಳಕೆಯೊಡೆಯುವ ಹಂತದಲ್ಲಿ ಬೆಳೆ ಇದೆ. ಆದರೆ ಕೆಇಬಿಯವರು ಸಮಯಕ್ಕೆ ಸರಿಯಾಗಿ ಕರೆಂಟ್ ಕೊಡುತ್ತಿಲ್ಲ. ಹೆಸ್ಕಾಂ ಇಲಾಖೆ ಅಧಿಕಾರಿಗಳು ರೈತರ ಜತೆ ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕುರುಬಗೊಂಡ, ಹನುಮನಹಳ್ಳಿ ಗ್ರಾಮದ ರೈತರು ಮಾತನಾಡಿ, ವಿದ್ಯುತ್ ಟ್ರಾನ್ಸಫಾರ್ಮರ್ (ಟಿಸಿ) ಸುಟ್ಟು ಹನ್ನೊಂದು ದಿನಗಳು ಕಳೆದವು. ಬೆಳೆಗಳು ನೀರಿಲ್ಲದೆ ಕಮರುತ್ತಿವೆ. ಆದರೂ ಕೂಡ ಟಿಸಿ ಬದಲಾವಣೆ ಮಾಡುತ್ತಿಲ್ಲ. ಹೆಸ್ಕಾಂನವರೇ ಸ್ಥಳಕ್ಕೆ ಬಂದು, ಟಿಸಿ ಇಳಿಸಿ, ಹಾವೇರಿಗೆ ತೆಗೆದುಕೊಂಡು ಬಂದು ರಿಪೇರಿ ಮಾಡಿಸಿ ವಾಪಸ್ ಟಿಸಿ ಹಾಕಬೇಕಾದರೆ ಸಮಯಾವಕಾಶ ವ್ಯರ್ಥ ಆಗುತ್ತದೆ ಎಂದು ರೈತರೇ ಸ್ವತಃ ದುಡ್ಡು ಖರ್ಚು ಮಾಡಿಕೊಂಡು ಟ್ರ್ಯಾಕ್ಟರ್‌ನಲ್ಲಿ ತೆಗೆದುಕೊಂಡು ಬಂದಿದ್ದೇವೆ. ಈಗಾಗಲೇ ಕಳೆದ ಹನ್ನೊಂದು ದಿನಗಳಿಂದ ನೀರು ಹಾಯಿಸದ ಪರಿಣಾಮ ಬೆಳೆಗಳು ಒಣಗುತ್ತಿವೆ. ಅಧಿಕಾರಿಗಳನ್ನು ಕೇಳಿದರೆ ಸಂಜೆ ಬನ್ನಿ, ನಾಳೆ ಬೆಳಗ್ಗೆ ಬನ್ನಿ ಅಂತಾ ಸತಾಯಿಸುತ್ತಿದ್ದಾರೆ. ಜತೆಗೆ ಸೆಕ್ಷನ್ ಆಫೀಸರ್ ಕೂಡ ರೈತರ ಜತೆಗೆ ಸ್ಪಂದಿಸುತ್ತಿಲ್ಲ. ಅವರನ್ನು ಬದಲಾಯಿಸಬೇಕೆಂದು ಆಗ್ರಹಿಸಿದರು. ಈ ವೇಳೆ ಕಾರ್ಯಪಾಲಕ ಎಂಜಿನಿಯರ್‌ ಸಿ.ಬಿ. ಹೊಸಮನಿ ಮಾತನಾಡಿ, ಸಂಬಂಧಿಸಿದ ಸೆಕ್ಷನ್ ಆಫೀಸರ್ ಜತೆಗೆ ಚರ್ಚಿಸಿ ಟಿಸಿಗಳನ್ನು ಅಳವಡಿಕೆ ಅಗತ್ಯ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ರುದ್ರಪ್ಪ ಕದರಮಂಡಲಗಿ, ಅಶೋಕ ಹೆಡಿಯಾಲ, ಪರಮೇಶಪ್ಪ ಮರಡಿ, ಹೇಮನಗೌಡ ಹೊಸಗೌಡ್ರ, ಬಸಪ್ಪ ಕಮತರ, ಶರಣಪ್ಪ ರಿತ್ತಿ, ಶರಣಪ್ಪ ಬಾಲಕ್ಕನವರ, ರಮೇಶ ಚಂದ್ರಾಪಟ್ಟಣ, ಭರಮಗೌಡ ರಾಮಣ್ಣನವರ ಸೇರಿದಂತೆ ಅನೇಕ ರೈತರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಣಸೆ, ಹಲಸು, ನೇರಳೆಗೆ ಮಂಡಳಿ ರಚಿಸಿ: ದೇವೇಗೌಡ
ಗುಮ್ಮ ಬಂದ ಗುಮ್ಮ, ಮಕ್ಕಳಿಗೆ ಹೊಡೆಯೋ ಗುಮ್ಮ!