ನಾಟಿ ಮಾಡಿದ್ದ ಭತ್ತದ ಬೆಳೆ ವೀಕ್ಷಿಸಿದ ಕೇಂದ್ರ ಸಚಿವ ಕುಮಾರಸ್ವಾಮಿ

KannadaprabhaNewsNetwork |  
Published : Oct 21, 2024, 12:46 AM IST
 ಪಾಂಡವಪುರ | Kannada Prabha

ಸಾರಾಂಶ

ರೈತರಿಗೆ ನ್ಯಾಯಯುತ ಬೆಲೆ ದೊರಕಿಸಿಕೊಡಬೇಕಾಗಿದೆ. ಕೆಲವು ಬೆಳೆಗಳಿಗೆ ಕೇಂದ್ರ ಸರಕಾರ ಎಂಎಸ್‌ಪಿ ಬೆಲೆ ನಿಗದಿಪಡಿಸಿದೆ. ಮುಂದಿನ ದಿನಗಳಲ್ಲಿ ರೈತರ ಪರವಾಗಿ ಸರಕಾರದ ಗಮನ ಸೆಳೆಯುವ ಕೆಲಸ ಮಾಡುತ್ತೇನೆ

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಅರಳಕುಪ್ಪೆ- ಸೀತಾಪುರದ ಹಳೆ ಗದ್ದೆ ಬಯಲು ಪ್ರದೇಶದಲ್ಲಿ ಕಳೆದ ಎರಡೂವರೆ ತಿಂಗಳ ಹಿಂದೆ ಭತ್ತದ ಗದ್ದೆ ನಾಟಿ ಕಾರ‍್ಯಕ್ಕೆ ಚಾಲನೆ ನೀಡಿದ್ದ ಸ್ಥಳಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಭಾನುವಾರ ಭೇಟಿಕೊಟ್ಟು ಬೆಳೆ ವೀಕ್ಷಣೆ ಮಾಡಿ ಮಹಿಳೆಯರೊಂದಿಗೆ ಕುಳಿತು ಸಾಮೂಹಿಕ ಭೋಜನ ಮಾಡಿದರು.

ಭಾನುವಾರ ಮಧ್ಯಾಹ್ನ ೨ ಗಂಟೆಗೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರೊಟ್ಟಿಗೆ ಭೇಟಿಕೊಟ್ಟು ಭತ್ತದ ಗದ್ದೆಗೆ ಆಗಮಿಸಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮಹಿಳೆಯರು ಆರತಿ ಬೆಳಗಿ ಸ್ವಾಗತಿಸಿದರು. ನಂತರ ಎಚ್.ಡಿ.ಕುಮಾರಸ್ವಾಮಿ, ಸಿ.ಎಸ್.ಪುಟ್ಟರಾಜು ಅವರು ಗದ್ದೆಯ ಬಳಿ ಹೋಗಿ ಭತ್ತದ ಬೆಳೆ ವೀಕ್ಷಿಸಿ, ಒಡೆ ಹಂತದಲ್ಲಿರುವ ಭತ್ತದ ಬೆಳೆಯನ್ನು ಕೈಯಿಂದ ಮುಟ್ಟಿ ಖುಷಿಪಟ್ಟರು. ನಂತರ ಗದ್ದೆಯ ಬಳಿಯೇ ಭತ್ತದ ನಾಟಿದ ಮಹಿಳೆಯರು ಹಾಗೂ ರೈತರಿಗಾಗಿ ಆಯೋಜಿಸಿದ್ದ ಸಾಮೂಹಿಕ ಭೋಜನದಲ್ಲಿ ಕುಳಿತು ಊಟ ಮಾಡಿದರು. ಅನಾರೋಗ್ಯದ ಹಿನ್ನೆಲೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಸಸ್ಯಹಾರಿ ಊಟ ಮಾಡಿದರು, ಉಳಿದ ಗಣ್ಯರು ಹಾಗೂ ಮಹಿಳೆಯರು, ರೈತರಿಗೆ ಮಾಂಸಹಾರ ಊಟ ಮಾಡಿಸಲಾಗಿತ್ತು.

ನಂತರ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ತಾಲೂಕಿನ ಅರಳಕುಪ್ಪೆ- ಸೀತಾಪುರ ಗದ್ದೆ ಬಯಲು ಪ್ರದೇಶದಲ್ಲಿ ಕಳೆದ ಎರಡೂವರೆ ತಿಂಗಳ ಹಿಂದೆ ಭತ್ತದ ಗದ್ದೆ ನಾಟಿ ಮಾಡುವ ಕಾರ‍್ಯದಲ್ಲಿ ಭಾಗವಹಿಸಿದ್ದೆ. ಇದೀಗ ಭತ್ತದ ಬೆಳೆ ಚನ್ನಾಗಿ ಬಂದಿದೆ, ಫಸಲು ನೋಡಿ ತುಂಬಾ ಖುಷಿಯಾಗುತ್ತಿದೆ, ಜತೆಗೆ ನಮ್ಮ ಸಂಪ್ರದಾಯದಂತೆ ಗದ್ದೆಯ ಬಯಲಿನಲ್ಲಿಯೇ ಕುಳಿತು ಸಾಮೂಹಿಕ ಊಟಮಾಡಿದ್ದು ಖುಷಿಯಾಗಿದೆ ಎಂದರು.

ಮುಂದಿನ ದಿನಗಳಲ್ಲಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರ ನೇತೃತ್ವದಲ್ಲಿ ಭತ್ತದ ಕಟಾವು ಮಾಡಿಸಿ ರಾಶಿ ಪೂಜೆ ಮಾಡುವ ಕಾರ‍್ಯಕ್ರಮದಲ್ಲಿ ಭಾಗವಹಿಸುತ್ತೇನೆ ಎಂದು ಭರವಸೆ ನೀಡಿದರು.

ರೈತರಿಗೆ ನ್ಯಾಯಯುತ ಬೆಲೆ ದೊರಕಿಸಿಕೊಡಬೇಕಾಗಿದೆ. ಕೆಲವು ಬೆಳೆಗಳಿಗೆ ಕೇಂದ್ರ ಸರಕಾರ ಎಂಎಸ್‌ಪಿ ಬೆಲೆ ನಿಗದಿಪಡಿಸಿದೆ. ಮುಂದಿನ ದಿನಗಳಲ್ಲಿ ರೈತರ ಪರವಾಗಿ ಸರಕಾರದ ಗಮನ ಸೆಳೆಯುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಶಾಸಕ ಎಚ್.ಟಿ.ಮಂಜು, ಎಂಎಲ್‌ಸಿ ವಿವೇಕಾನಂದ, ಜಿಪಂ ಮಾಜಿ ಸದಸ್ಯರಾದ ಸಿ.ಅಶೋಕ್, ಎಚ್.ಮಂಜುನಾಥ್, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ತಾಲೂಕು ಅಧ್ಯಕ್ಷ ಮಲ್ಲೇಶ್, ಚಿನಕುರಳಿ ಡೇರಿ ಅಧ್ಯಕ್ಷ ಸಿ.ಶಿವಕುಮಾರ್, ಮುಖಂಡರಾದ ಮಹದೇವು, ವಿಶ್ವನಾಥ್, ಗವಿಗೌಡ, ಲಕ್ಷಣ ಸೇರಿ ಸುತ್ತಮುತ್ತಲಿನ ಗ್ರಾಮದ ಮುಖಂಡರು, ಗ್ರಾಮಸ್ಥರು ಭಾಗವಹಿಸಿದ್ದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ