ತಿಪಟೂರಿನಲ್ಲಿ ಜನಶತಾಬ್ದಿ ರೈಲು ನಿಲುಗಡೆಗೆ ಕೇಂದ್ರ ಸಚಿವ ವಿ.ಸೋಮಣ್ಣ ಹಸಿರು ನಿಶಾನೆ

KannadaprabhaNewsNetwork | Updated : Nov 17 2024, 07:50 AM IST

ಸಾರಾಂಶ

ಕೆ.ಎಸ್.ಆರ್ ಬೆಂಗಳೂರು ಶಿವಮೊಗ್ಗ ಟೌನ್ ಜನಶತಾಬ್ದಿ ಎಕ್ಸ್‌ಪ್ರೆಸ್ ಹಾಗೂ ಕೆ.ಎಸ್.ಆರ್ ಬೆಂಗಳೂರು-ಎಸ್.ಎಸ್.ಎಸ್ ಹುಬ್ಬಳ್ಳಿ ಜನಶತಾಬ್ದಿ ಎಕ್ಸ್‌ಪ್ರೆಸ್ ರೈಲುಗಳಿಗೆ ತಿಪಟೂರು ರೈಲ್ವೆ ನಿಲ್ದಾಣದಲ್ಲಿ ಹೆಚ್ಚುವರಿ ನಿಲುಗಡೆಗೆ ಕೇಂದ್ರ ಸಚಿವ ವಿ.ಸೋಮಣ್ಣ ಹಸಿರು ನಿಶಾನೆ ನೀಡಿದರು.

 ತಿಪಟೂರು : ಕೆ.ಎಸ್.ಆರ್ ಬೆಂಗಳೂರು ಶಿವಮೊಗ್ಗ ಟೌನ್ ಜನಶತಾಬ್ದಿ ಎಕ್ಸ್‌ಪ್ರೆಸ್ ಹಾಗೂ ಕೆ.ಎಸ್.ಆರ್ ಬೆಂಗಳೂರು-ಎಸ್.ಎಸ್.ಎಸ್ ಹುಬ್ಬಳ್ಳಿ ಜನಶತಾಬ್ದಿ ಎಕ್ಸ್‌ಪ್ರೆಸ್ ರೈಲುಗಳಿಗೆ ತಿಪಟೂರು ರೈಲ್ವೆ ನಿಲ್ದಾಣದಲ್ಲಿ ಹೆಚ್ಚುವರಿ ನಿಲುಗಡೆಗೆ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಹಸಿರು ನಿಶಾನೆ ನೀಡಿದರು.

ಈ ವೇಳೆ ಮಾತನಾಡಿದ ಸಚಿವರು, ಈ ಹಿಂದಿನ ಯುಪಿಎ ಅವಧಿಯಲ್ಲಿ ಕರ್ನಾಟಕದ ರೈಲ್ವೆಗೆ ಕೇವಲ 830 ಕೋಟಿ ನೀಡುತ್ತಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ ವಾರ್ಷಿಕ 7750  ಕೋಟಿ ರೂಪಾಯಿಗಳ ಅನುದಾನವನ್ನು ನೀಡಿ ಹೆಚ್ಚು ಪ್ರೋತ್ಸಾಹ ನೀಡಿದ್ದಾರೆ. ಭಾರತ ಸರ್ಕಾರದಲ್ಲಿ ಅನುದಾನಕ್ಕೆ ಕೊರತೆಯಿಲ್ಲ ಅನುದಾನವನ್ನು ಯಾವ ರೀತಿಯಲ್ಲಿ ಲೆಕ್ಕಾಚಾರ ಮಾಡಿ ಕಾರ್ಯಗತವಾಗಿ ತರಬೇಕು ಎಂಬ ನಂಬಿಕೆಯ ಮೇಲೆ ಸಚಿವ ಸ್ಥಾನ ಒಲಿದಿದೆ. 

ದೇಶದ್ಯಾಂತ ನೂತನವಾಗಿ 11 ಕಾಮಗಾರಿಗಳನ್ನು 39000 ಕೋಟಿ ರೂಪಾಯಿಗಳಲ್ಲಿ ಪ್ರಾರಂಭಿಸಿದ್ದು, ಆರು ತಿಂಗಳಲ್ಲಿ ಸಾವಿರ ಕೋಟಿಗೂ ಹೆಚ್ಚು ಅನುದಾನಗಳು ಬಿಡಗಡೆಯಾಗಿದ್ದು ರೈಲ್ವೆ ಕೆಳಸೇತುವೆ, ಮೇಲ್ಸೇತುವೆ ಕಾಮಗಾರಿಗಳು ಕಾರ್ಯಗತವಾಗಿವೆ. ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿಗಳಲ್ಲಿ ಕಾರಣಾಂತರಗಳಿಂದ ವಿಳಂಬ, ಸ್ಥಗಿತಗೊಂಡಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದು ಶ್ರೀಘ್ರದಲ್ಲಿ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಮುಕ್ತಾಯ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಲಾಗುವುದು. 

ಹೊಸ ಕಾಮಗಾರಿಗಳಾದ ಹಾಸನ ಹಿರಿಯೂರು ತಿಪಟೂರು ಗ್ರೀನ್ ಫೀಲ್ಡ್ ಕಾರಿಡಾರ್ ಯೋಜನೆಗೆ ೩೮೦೦ ಕೋಟಿ, ನೆಲಮಂಗಲ ತುಮಕೂರು ಆರು ಪಥದ ರಸ್ತೆಗೆ 2 ಸಾವಿರ ಕೋಟಿ, ತುರವೇಕೆರೆ-ಚಿಂಚೂರು ರಸ್ತೆ ಅಭಿವೃದ್ದಿಗೆ 617ಕೋಟಿಯ ಡಿಪಿಆರ್ ಸಿದ್ದತೆ ಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ತಿಪಟೂರು ನಗರದಲ್ಲಿ ವಂದೇ ಭಾರತ್ ರೈಲು ನಿಲುಗಡೆ ಹಾಗೂ ಅರಳಗುಪ್ಪೆಯಲ್ಲಿ ಚಿಕ್ಕಮಗಳೂರು ರೈಲು ಗಾಡಿ ನಿಲುಗಡೆಗೆ ಅವಕಾಶ ಮಾಡಲಾಗುವುದು. ತುಮಕೂರು ರಾಯದುರ್ಗ, ತುಮಕೂರು ದಾವಣಗೆರೆ, ರೈಲ್ವೆ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು. ತಿಪಟೂರು ತಾಲೂಕಿನ ಹೊನ್ನವಳ್ಳಿ, ಹಾಸನವೃತ್ತದ ಕಾಮಗಾರಿಗಳನ್ನು ಕಾರ್ಯಗತ ಮಾಡಿ, ತಿಪಟೂರು ಯುಜಿಡಿ ನೀರು ಈಚನೂರು ಕೆರೆಗೆ ಮಿಶ್ರಣವಾಗುತ್ತಿರುವ ಬಗ್ಗೆ ನಮ್ಮ ಗಮನಕ್ಕೆ ಬಂದಿದ್ದು ಪ್ರತ್ಯೇಕ ಯೋಜನೆಯನ್ನು ರೂಪಿಸಲಾಗುವುದು.

 ನಗರದಲ್ಲಿ ಬಸವೇಶ್ವರ ಪುತ್ಥಳಿಯ ಬಗ್ಗೆ ಮಾತನಾಡುತ್ತಾ ಕಾನೂನು ತೊಡುಕುಗಳಿದ್ದರೆ ಉಪವಿಭಾಗಧಿಕಾರಿ ಹಾಗೂ ಸರ್ಕಾರದ ಹಂತದಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು. ವಿಮಾನ ನಿಲ್ದಾಣದಲ್ಲಿ ಯಾವ ರೀತಿಯಲ್ಲಿ ಸ್ವಚ್ಚತೆ ಕಂಡು ಬರುತ್ತದೆಯೋ ಅದೇ ರೀತಿಯಲ್ಲಿ ಭಾರತೀಯ ರೈಲ್ವೆ ಹಾಗೂ ನಿಲ್ದಾಣಗಳಲ್ಲಿ ಸ್ವಚ್ಚತೆ ಅಧ್ಯತೆ ನೀಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಮೈಸೂರು ವಿಭಾಗದ ಡಿಅರ್‌ಎಂ ಶಿಲ್ಪಿ ಅಗರವಾಲ್, ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಲೋಹಿತಾಶ್ವ, ಹುಬ್ಬಳ್ಳಿ ವಿಭಾಗೀಯ ಹಿರಿಯ ಅಧಿಕಾರಿ ಅನುಪ್ ದಯಾನಂದ್, ತಾಂತ್ರಿಕ ವಿಭಾಗದ ರಾಘವೇಂದ್ರ, ಚಂದ್ರಶೇಖರ್, ವಿ?ಗೌಡ, ಭರತ್, ಗಿರೀಶ್‌ಕಳಗೊಂಡ, ಹಿರಿಯ ಪೊಲೀಸ್ ಅಧಿಕಾರಿ ಶ್ಯಾಮ್ ಪ್ರಶಾಂತ್, ತೇಜಸ್, ಬೆಂಗಳೂರು ವಿಭಾಗೀಯ ಅಧಿಕಾರಿ ಯೋಗೀಶ್ ಮೋಹನ್, ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿ, ಪ್ರಧಾನ ಕಾರ್ಯದರ್ಶಿ ಗಂಗರಾಜು, ಉಪವಿಭಾಗಾಧಿಕಾರಿ ಸಪ್ತಶ್ರೀ, ತಹಶೀಲ್ದಾರ್ ಪವನ್ ಕುಮಾರ್, ಶಾಸಕ ಜ್ಯೋತಿ ಗಣೇಶ್, ಸುರೇಶ್ ಗೌಡ, ಮಾಜಿ ಶಾಸಕ ಮಸಾಲೆ ಜಯರಾಮ್, ನಿವೃತ್ತ ಎಸಿಪಿ ಲೋಕೇಶ್ವರ, ಜೆಡಿಎಸ್ ಮುಖಂಡ ಶಾಂತಕುಮಾರ್, ನಗರಸಭಾ ಸದಸ್ಯ ರಾಮ್‌ಮೋಹನ್, ಸೊಪ್ಪುಗಣೇಶ್, ಶಶಿಕಿರಣ್, ಮೋಹನ್‌ರಾಜ್, ಭಾರತಿ ಮತ್ತಿತರರಿದ್ದರು.

Share this article