ಕನ್ನಡಪ್ರಭ ವಾರ್ತೆ ಬೀದರ್
ಅಖಿಲ ಭಾರತ ದಾಸ ಸಾಹಿತ್ಯ ಪರಿಷತ್ತು ವತಿಯಿಂದ ಸೆ.28ರಂದು ಬೆಳಗ್ಗೆ ನಗರದ ಓಂ ಸಿದ್ಧಿವಿನಾಯಕ ಪದವಿ ಮಹಾ ವಿದ್ಯಾಲಯದಲ್ಲಿ ‘ದಾಸ ಶ್ರೇಷ್ಠ ಕನಕದಾಸರು ಮತ್ತು ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವೇಶ್ವರರು’ ಕುರಿತು ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶರಣರು, ಸಂತರು ಮತ್ತು ದಾಸರು ಮಾನವನ ಬದುಕಿನಲ್ಲಿ ಆತ್ಮಬಲವನ್ನು ಹೆಚ್ಚಿಸಿ, ಸುಂದರ ಬದುಕು ಕಟ್ಟಿಕೊಳ್ಳಲು ಮೌಲಿಕ ಸಂದೇಶ ವಾಣಿಯನ್ನು ನೀಡಿ ಸಾಹಿತ್ಯ ಶ್ರೀಮಂತಗೊಳಿಸಿದ್ದಾರೆ ಎಂದರು.
ಬೀದರ್ ಉಪ ನಿರ್ದೇಶಕರ ಕಚೇರಿಯ ಶಿಕ್ಷಣಾಧಿಕಾರಿ ಗುಂಡಪ್ಪ ಹುಡಗೆ ಅವರು ‘ದಾಸ ಶ್ರೇಷ್ಠ ಕನಕದಾಸರು ಮತ್ತು ಸಾಂಸ್ಕೃತಿಕ ನಾಯಕ ಬಸವೇಶ್ವರರು’ ಕುರಿತು ಉಪನ್ಯಾಸ ನೀಡಿ, ಬಸವಣ್ಣ ಮತ್ತು ಕನಕದಾಸರು ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಕ್ಷೇತ್ರಗಳ ಶುದ್ಧೀಕರಣದ ಹರಿಕಾರರು. ಇಬ್ಬರ ಕಾಲ ಘಟ್ಟಗಳು ಬೇರೆಯಾದರೂ ಬಹುತೇಕ ಸಮಾನತೆ, ವೈಚಾರಿಕತೆ ಮತ್ತು ವೈಜ್ಞಾನಿಕತೆ ಸಾರುವ ಸಂದೇಶಗಳು ಒಂದೆಯಾಗಿವೆ ಎಂದರು.ಬಸವೇಶ್ವರರ ಸಾಮಾಜಿಕ ಚಿಂತನೆಗಳು ಕನಕದಾಸರ ಸಾಹಿತ್ಯದಲ್ಲಿ ಸದೃಶ್ಯಗೊಂಡಿರುವದನ್ನು ಕಾಣುತ್ತೇವೆ. ಇಬ್ಬರ ಚಿಂತನೆಗಳು ಜನರಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತಿ, ವೈಚಾರಿಕತೆಯ ತಳಹದಿಯಲ್ಲಿ ಸಮೃದ್ಧ ಮತ್ತು ಸಮ ಸಮಾಜವನ್ನು ಕಟ್ಟುವ ಸಂದೇಶಗಳ ಹೊತ್ತಿಗೆಗಳಾಗಿವೆ ಎಂದು ಹೇಳಿದರು.
ಅಖಿಲ ಭಾರತ ದಾಸ ಸಾಹಿತ್ಯ ಪರಿಷತ್ತು, ರಾಷ್ಟ್ರೀಯ ಅಧ್ಯಕ್ಷ ಡಾ.ರವೀಂದ್ರ ಲಂಜವಾಡಕರ ಅಧ್ಯಕ್ಷತೆ ವಹಿಸಿ ಮಾತನಾಡಿ ಧರ್ಮ, ನೀತಿ, ಕೌಟುಂಬಿಕ, ಜೀವನ ಮತ್ತು ಮಾನವೀಯ ಮೌಲ್ಯಗಳು ಹಾಸುಹೊಕ್ಕಿರುವ ಹರಿದಾಸ ಸಾಹಿತ್ಯವನ್ನು ನಿರಂತರ ಪ್ರಚಾರ ಮಾಡಲಾಗುವುದು ಎಂದರು.
ದೇವಿಕಾ ಸ್ವಾಗತಿಸಿ ಸುಹಾಸಿನಿ ನಿರೂಪಿಸಿದರೆ ಸುಷ್ಮಾ ವಂದಿಸಿದರು.