ಹೂವಿನಹಡಗಲಿ: ಆಧುನಿಕ ಭರಾಟೆಯಲ್ಲಿ ಮಧ್ಯೆ ಬಂಜಾರ ಜನಾಂಗವು ದೀಪಾವಳಿ ಹಬ್ಬದ ಸಾಂಪ್ರದಾಯಿಕ ಆಚರಣೆ ಮರೆಯದೇ, ಇಡೀ ರಾತ್ರಿ ಬಂಜಾರ ಮಹಿಳೆಯರು ತಮ್ಮ ವಿಶೇಷ, ಉಡುಗೆ-ತೊಡುಗೆಗಳನ್ನು ತೊಟ್ಟುಕೊಂಡು ಸಾಮೂಹಿಕ ನೃತ್ಯ ಮಾಡಿದ್ದು ಎಲ್ಲರ ಗಮನ ಸೆಳೆಯಿತು.
ಹಿರಿಯರು ಹಾಕಿಕೊಟ್ಟ ಸಂಸ್ಕೃತಿ, ಪರಂಪರೆಯನ್ನು ಮರೆತು ಹೋಗದಂತೆ, ದೀಪಾವಳಿ ಆಚರಣೆಗೆ ಒಂದು ತಿಂಗಳು ಮೊದಲು ತಾಂಡಾದಲ್ಲಿನ ಹಿರಿಯ ಮಹಿಳೆಯರು, ಕಿರಿಯರಿಗೆ ತಮ್ಮ ಪಾರಂಪರಿಕ ಕಸೂತಿ ಕಲೆ, ಹಾಡುಗಾರಿಕೆ, ನೃತ್ಯ, ತರಬೇತಿ ನೀಡುತ್ತಾರೆ, ನಿತ್ಯ ತಾಂಡಾಗಳ ಸೇವಾಲಾಲ್ ದೇಗುಲ ಬಳಿ ಎಲ್ಲ ಮಹಿಳೆಯರು ಸೇರಿಕೊಂಡು ಹಾಡು ಹೇಳುವುದು, ನೃತ್ಯ ಮಾಡುವ ಅಭ್ಯಾಸ ಮಾಡುತ್ತಾರೆ. ದೀಪಾವಳಿ ಹಬ್ಬಕ್ಕಾಗಿ ತಾವೇ ತಯಾರಿಸಿದ ಕಸೂತಿ ಕಲೆಯ ವಸ್ತುಗಳನ್ನು ತೊಟ್ಟು ಸಂಭ್ರಮಿಸುತ್ತಾರೆ, ಅಮವಾಸ್ಯೆ ದಿನ ಸಂಜೆ ವೇಳೆ ತಾಂಡಾದ ನಾಯಕನ ಮನೆಯಿಂದ ಹಣತೆಯನ್ನು ಪಡೆದು, ಎಲ್ಲರ ಮನೆ ಎದುರು ಜೋಡಿಸಿ ಇಟ್ಟಿರುವ ದೀಪಗಳನ್ನು ಬೆಳಗಿಸುವುದು ಪದ್ದತಿ ಇಂದಿಗೂ ಇದೆ.
ಹಣತೆ ತಟ್ಟೆಯ ಹಿಡಿದು ಹಾಡು ಹೇಳುತ್ತಾ ಮನೆ ಮನೆಗೆ ತೆರಳುವ ಯುವತಿಯರನ್ನು ಹಿರಿಯರು ಸ್ವಾಗತಿಸುತ್ತಾರೆ, ತಡ ರಾತ್ರಿ ವರೆಗೂ ತಾಂಡಾದ ಮುಖ್ಯ ಸ್ಥಳವಾಗಿರುವ ಸೇವಾಲಾಲ್ ದೇಗುಲ ಎದುರು ಯುವತಿಯರು, ಮಹಿಳೆಯರು ಜತೆಗೂಡಿ ಹಾಡಿನ ತಾಳಕ್ಕೆ ತಕ್ಕಂತೆ ನೃತ್ಯ ಮಾಡಿದರು.ಪಾಡ್ಯದಿನ ಎಲ್ಲ ಮನೆಯ ಮುಂದೆ ಸರಣಿಯಿಂದ ಬೂದುಗಳನ್ನು ತಯಾರಿಸಿ ಇಡುತ್ತಾರೆ, ಅವುಗಳನ್ನು ಹೊನ್ನರಕಿ ಹೂವು ಸೇರಿದಂತೆ ಇತರೆ ಹೂವುಗಳಿಂದ ಅಲಂಕಾರ ಮಾಡುತ್ತಾರೆ. ಮನೆಯ ಬಾಗಿಲಿಗೆ ದೀಪ ಬೆಳಗಿ ಪೂಜೆ ಮಾಡುತ್ತಾರೆ. ಬಳಿಕ ಮದುವೆ ಖಾಯಂಗೊಂಡಿರುವ ಯುವತಿಯರು ತಮ್ಮ ಸ್ನೇಹಿತೆಯರನ್ನು ತಬ್ಬಿಕೊಂಡು ಹಾಡುವುದು, ಮನಸೋ ಇಚ್ಛೆ ಅಳುವ ಸಂಪ್ರದಾಯ ರೂಢಿಯಲ್ಲಿದೆ. ಈ ಸಮುದಾಯದಲ್ಲಿ ಮದುವೆಯಾಗಿ ತೆರಳಿದ ಮಹಿಳೆಯರು ತವರು ಮನೆಗೆ ಬರುವುದು, ಅಪರೂಪವೆಂದು ಮಹಿಳೆಯರು ನಂಬುತ್ತಾರೆ. ಮದುವೆ ಖಾಯಂ ಆಗಿರುವ ಮಹಿಳೆ ತನ್ನ ಗೆಳೆತಿಯರು ಹಾಗೂ ಬಾಲ್ಯದ ದಿನಗಳನ್ನು ನೆನೆಯುತ್ತಾ, ದುಃಖದಲ್ಲಿ ಕಾಡಿನಲ್ಲಿನ ಹೂಗಳನ್ನು ತಂದು ತಾಂಡಾದ ಪ್ರತಿ ಮನೆಯ ಮಂಭಾಗದ ಬೂದುಗಳಿಗೆ, ಹೂಗಳನ್ನು ಹಾಕಿ ನಮಸ್ಕರಿಸುತ್ತಾರೆ. ನಂತರ ಎಲ್ಲರೂ ಒಟ್ಟುಗೂಡಿ ಹಾಡುತ್ತಾ ಕುಣಿದು ಕುಪ್ಪಳಿಸಿ ಸಂಭ್ರಮದಿಂದ ದೀಪಾವಳಿ ಆಚರಿಸುತ್ತಾರೆ.