ಗೋಕರ್ಣ: ಮಳೆಗಾಗಿ ಇಂದ್ರದೇವನನ್ನು ಮೆಚ್ಚಿಸಲು ಅನಾದಿ ಕಾಲದಿಂದ ಹಾಲಕ್ಕಿ ಒಕ್ಕಲಿಗ ಮಹಿಳೆಯರು ನಡೆಸಿಕೊಂಡು ಬಂದಿರುವ ದಾದುಮ್ಮನ ಮದುವೆ ತಾರಮಕ್ಕಿಯಲ್ಲಿ ಭಾನುವಾರ ಸಂಜೆ ವಿಜೃಂಭಣೆಯಿಂದ ನಡೆಯಿತು.
ವರನ ಸ್ಥಾನದಲ್ಲಿ ಮಹಿಳೆಯರೇ ಕಾರ್ಯನಿರ್ವಹಿಸುವುದು ಈ ಮದುವೆಯ ವಿಶಿಷ್ಟ. ಅದರಂತೆ ಆಷಾಢ ಬಹುಳ ಏಕಾದಶಿಯಂದು ನಡೆದ ನಿಶ್ಚಿತಾರ್ಥದಲ್ಲಿ ವಧು- ವರರು ಎಂಬ ಮಹಿಳೆಯರು ತೀರ್ಮಾನಿಸಿದಂತೆ ಸುಮಂಗಲೆಯರು ವಧು- ವರರಾಗಿದ್ದರು. ಆಷಾಢ ಅಮಾವಾಸ್ಯೆ ಸಂಧ್ಯಾಕಾಲದಲ್ಲಿ ಕೇತಕಿ ವಿನಾಯಕ ಮತ್ತು ಕರಿದೇವರ ಸನ್ನಿಧಿಯಲ್ಲಿ ಅಲ್ಲಿ ಹರಿಯುತ್ತಿರುವ ತೊರೆಯ ಆಚೆ ಈಚೆ ವಧು ಮತ್ತು ವರನ ಕಡೆಯವರು ನಿಂತು ಹೆಣ್ಣು ಕೇಳುವ ಶಾಸ್ತ್ರ ಪೂರೈಸಿ ಎರಡೂ ಬದಿಯವರು ತಮ್ಮ ತಮ್ಮ ಹೆಚ್ಚುಗಾರಿಕೆಯನ್ನು ಜಾನಪದ ಹಾಡಿನ ಮೂಲಕ ಪ್ರದರ್ಶಿಸಿ ಹೆಣ್ಣು- ಗಂಡು ಒಪ್ಪಿತವಾದ ಮೇಲೆ ದೇವರ ಎದುರು ಇಬ್ಬರಿಗೂ ಮಾಲೆ ಹಾಕಿಸಿ ಮದುವೆ ನೆರವೇರಿಸಿದರು. ವಿವಾಹ ವಿಧಿಯಲ್ಲಿನ ಮಂತ್ರ, ತಂತ್ರಗಳ ಸ್ಥಾನವನ್ನು ಇಲ್ಲಿ ಜಾನಪದ ಹಾಡು ತುಂಬಿಕೊಂಡಿದ್ದು ವಿಶೇಷವಾಗಿತ್ತು.ನಂತರ ನವ ವಿವಾಹಿತರನ್ನು ಅದ್ಧೂರಿ ಮೆರವಣಿಗೆಯಲ್ಲಿ ಹುಳಸೇಕೇರಿ ಗೌಡರ ಮನೆಗೆ ಕರೆತರಲಾಯಿತು. ಮುಖ್ಯ ಗೌಡರ ಸಮ್ಮುಖದಲ್ಲಿ ಧಾರೆ ಶಾಸ್ತ್ರ ನಡೆದು ವಧು- ವರರಿಗೆ ಉಡುಗೊರೆ ನೀಡಿ ಸಿಹಿ ಹಂಚಿಕೆ ಮತ್ತು ಪಾನೀಯ ವಿತರಣೆಯೊಂದಿಗೆ ದಾದುಮ್ಮನ ಮದುವೆ ಸಂಪನ್ನಗೊಂಡಿತು. ಮಳೆಗೆ ವಿರಾಮ: ಶಾಲೆಗಳು ಪ್ರಾರಂಭ
ಗೋಕರ್ಣ: ಕಳೆದ ಹಲವು ದಿನಗಳಿಂದ ಅಬ್ಬರಿಸಿದ ಮಳೆ ವಿರಾಮ ಪಡೆದು ಬಿಡುವು ನೀಡಿದ ಹಿನ್ನೆಲೆ ಸೋಮವಾರ ವಿದ್ಯಾರ್ಥಿಗಳು ಶಾಲೆಯತ್ತ ಮುಖ ಮಾಡಿದರು.ಖಾಸಗಿ ಹಾಗೂ ಸರ್ಕಾರಿ ಶಾಲೆಗಳಲ್ಲಿ ಬೆಳಗ್ಗೆ ಶಿಕ್ಷಕರು ಉತ್ಸಾಹದಿಂದ ಬಂದು ಕೊಠಡಿ ಸ್ವಚ್ಛಗೊಳಿಸುವುದು ಸೇರಿದಂತೆ ಮತ್ತಿತರ ಕಾರ್ಯ ಮಾಡಿ ಮಕ್ಕಳನ್ನು ಆತ್ಮೀಯವಾಗಿ ತರಗತಿಗೆ ಬರಮಾಡಿಕೊಂಡು ಪಾಠ ಮಾಡಿದರು.