ಒಕ್ಕಲುತನ ದೇಶದ ಹೃದಯ ಬಡಿತವಿದ್ದಂತೆ: ತಿಮ್ಮಣ್ಣ ಚವಡಿ

KannadaprabhaNewsNetwork |  
Published : Sep 30, 2024, 01:24 AM IST
ಪೋಟೊ29ಕೆಎಸಟಿ1: ಕುಷ್ಟಗಿ ಪಟ್ಟಣದಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ವಿಚಾರ ಸಂಕಿರಣ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ಕಳೆದ 3 ವರ್ಷಗಳ ಹಿಂದೆ ದೇಶದಲ್ಲಿ ಕೊರೋನಾ ಸೋಂಕು ಹರಡಿದಾಗ ಎಲ್ಲ ಉದ್ದಿಮೆಗಳು ಸ್ಥಗಿತಗೊಂಡಿದ್ದವು. ಆದರೆ ಕೃಷಿಯ ಕೆಲಸಗಳು ಮಾತ್ರ ನಿಂತಿಲ್ಲ, ದೇಶದ ಹೃದಯದ ಬಡಿತವೇ ಕೃಷಿ ರಂಗವಾಗಿದೆ.

ಕೃಷಿ, ತೋಟಗಾರಿಕೆ ಬೆಳೆಗಳ ವಿಚಾರ ಸಂಕಿರಣ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಕುಷ್ಟಗಿ

ಒಕ್ಕಲುತನ ಎನ್ನುವುದು ದೇಶದ ಹೃದಯ ಬಡಿತವಿದ್ದಂತೆ ಎಂದು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ವ್ಯವಸ್ಥಾಪಕ ಮಂಡಳಿ ಸದಸ್ಯ ತಿಮ್ಮಣ್ಣ ಚವಡಿ ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್‌, ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ರಾಯಚೂರು, ಕುವೆಂಪು ರೈತ ಉತ್ಪಾದಕರ ಸಂಸ್ಥೆ, ಕರುನಾಡು ರೈತ ಉತ್ಪಾದಕರ ಸಂಸ್ಥೆ, ಮಾರುತೇಶ್ವರ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಆಶ್ರಯದಲ್ಲಿ ನಿವೃತ್ತ ಅಭಿಯಂತರ ಎಸ್.ಕೆ. ಪಾಟೀಲ ಪ್ರಥಮ ಪುಣ್ಯಸ್ಮರಣೆಯ ಅಂಗವಾಗಿ ಪಟ್ಟಣದಲ್ಲಿ ನಡೆದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ವಿಚಾರ ಸಂಕಿರಣ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಳೆದ 3 ವರ್ಷಗಳ ಹಿಂದೆ ದೇಶದಲ್ಲಿ ಕೊರೋನಾ ಸೋಂಕು ಹರಡಿದಾಗ ಎಲ್ಲ ಉದ್ದಿಮೆಗಳು ಸ್ಥಗಿತಗೊಂಡಿದ್ದವು. ಆದರೆ ಕೃಷಿಯ ಕೆಲಸಗಳು ಮಾತ್ರ ನಿಂತಿಲ್ಲ, ದೇಶದ ಹೃದಯದ ಬಡಿತವೇ ಕೃಷಿ ರಂಗವಾಗಿದೆ ಎಂದರು. ಕೃಷಿ ರಂಗದಲ್ಲಿ ಶೇ. 90ರಷ್ಟು ಮಹಿಳೆಯರು ಕೆಲಸ ಮಾಡುತ್ತಿದ್ದು, ಮಹಿಳೆಯರಿಂದ ಕೃಷಿ ಕಾರ್ಯಗಳು ಬಲಗೊಳ್ಳುತ್ತಿವೆ ಎಂದರು.

ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಡೀನ್ ಡಾ. ಗುರುರಾಜ ಸಂಕದ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕೃಷಿ ಕಡೆ ವಾಲುವ ಮನಸ್ಸುಗಳು ಕಡಿಮೆಯಾಗುತ್ತಿವೆ. ಕೇವಲ ರಾಜಕಾರಣ, ವ್ಯಾಪಾರ, ನೌಕರಿ ಕಡೆ ವಾಲುತ್ತಿದ್ದು, ಕೃಷಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ನಮ್ಮ ದೇಶದ ಬೆನ್ನೆಲುಬು ಕೃಷಿಯಾಗಿದ್ದು, ಇದು ವಾತಾವರಣದ ಮೇಲೆ ಅವಲಂಬನೆಯಾಗುತ್ತದೆ. ಇಂದಿನ ದಿನಗಳಲ್ಲಿ ಕೂಲಿಕಾರ್ಮಿಕರ ತೊಂದರೆ, ವಿದ್ಯುತ್ ಸಮಸ್ಯೆ, ನೀರಿನ ತೊಂದರೆಯಾಗುತ್ತಿರುವುದು ಒಂದು ಕಡೆಯಾದರೆ ಮತ್ತೊಂದು ಕಡೆ ಬೆಳೆ ಸಮರ್ಪಕವಾಗಿ ಬಂದರೆ ಅದಕ್ಕೆ ತಕ್ಕಂತೆ ಬೆಲೆಯೂ ಸಿಗುತ್ತಿಲ್ಲ. ಆದ ಕಾರಣ ವಾಣಿಜ್ಯ ಮಾದರಿಯಲ್ಲಿ ಬೆಳೆ ಬೆಳೆಯುವಂತಾಗಬೇಕು. ವೈಜ್ಞಾನಿಕ ಪದ್ದತಿ ಅಳವಡಿಸಿಕೊಳ್ಳಬೇಕು ಎಂದರು.

ಕೃಷಿಯನ್ನು ವ್ಯಾಪಾರಿ ದೃಷ್ಟಿಯಿಂದ ಮಾಡಿದಾಗ ಮಾತ್ರ ಲಾಭ ನಿಶ್ಚಿತವಾಗುತ್ತದೆ. ಮಾರುಕಟ್ಟೆ ಮೌಲ್ಯಗಳನ್ನು ಅರಿತುಕೊಂಡು ವೈಜ್ಞಾನಿಕ ಕೃಷಿ ಮಾಡಬೇಕು. ಕೃಷಿ ಇಲಾಖೆಯ ಅಧಿಕಾರಿಗಳ ಹಾಗೂ ಕೃಷಿ ವಿಜ್ಞಾನಿಗಳ ಸಹಕಾರ ಪಡೆದುಕೊಂಡು ಬೆಳೆ ಬೆಳೆಯಬೇಕು, ಸಮಗ್ರ ಕೃಷಿ ಪದ್ಧತಿ ಮಾಡಲು ಮುಂದಾಗಬೇಕು. ಹೈನುಗಾರಿಕೆ, ಮೀನುಗಾರಿಕೆ, ತೋಟಗಾರಿಕೆ ಬೆಳೆಗಳನ್ನು ಬೆಳೆಯಬೇಕು. ಇಂದಿನ ದಿನಗಳಲ್ಲಿ ನೌಕರಿಗಿಂತ ಕೃಷಿ ಬದುಕು ಶ್ರೇಷ್ಠವಾಗಿದ್ದು, ಕೃಷಿ ಕಡೆ ಗಮನ ಹರಿಸಬೇಕು ಎಂದರು.

ಕೃಷಿ ವಿಸ್ತರಣಾ ಕೇಂದ್ರದ ಪ್ರಾಧ್ಯಾಪಕ ಡಾ. ಎಂ. ರವಿ ಮಾತನಾಡಿ, ಆದಾಯ ದ್ವಿಗುಣವಾಗುವಂತಹ ಬೆಳೆಯನ್ನು ರೈತರಯ ಬೆಳೆಯಬೇಕು. ಕೊಪ್ಪಳ ಜಿಲ್ಲೆಯ ಭೂಮಿಯು ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಉತ್ತಮವಾಗಿದೆ, ಇಲ್ಲಿರುವ ವಾತಾವರಣದಲ್ಲಿ ಎಲ್ಲ ಬೆಳೆ ಬೆಳೆಯಬಹುದು ಎಂದರು.

ಪ್ರಗತಿಪರ ರೈತ ದೇವೇಂದ್ರಪ್ಪ ಬಳೂಟಗಿ ಮಾತನಾಡಿದರು.

ಈ ಸಂದರ್ಭ ಕಸಾಪ ಅಧ್ಯಕ್ಷ ವೀರೇಶ ಬಂಗಾರಶೆಟ್ಟರ, ಎಸ್.ಬಿ. ಶಿವನಗುತ್ತಿ, ನಬಿಸಾಬ ಕುಷ್ಟಗಿ, ಪರಶುರಾಮ, ಶ್ರೀನಿವಾಸ, ಮಲ್ಲಪ್ಪ ಸುಂಕದ, ಲೆಂಕಪ್ಪ ವಾಲಿಕಾರ, ಅಂದಪ್ಪ ಹಾಲಕೇರಿ, ವಿನಾಯಕ ಪಾಟೀಲ, ತಿಪ್ಪಣ್ಣ ತಾವರಗೇರಾ ಸೇರಿದಂತೆ ಅನೇಕರು ಇದ್ದರು.

PREV