ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿಕೆ । ಸುಮಾರು 1 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ । ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ 150ನೇ ಏಕತಾ ಮಾರ್ಚ್ ಅಭಿಯಾನದ ಅಂಗವಾಗಿ ನ.13 ರಂದು ಬೆಳಗ್ಗೆ 7.30 ಕ್ಕೆ ಏಕತಾ ಓಟವನ್ನು ನಗರದ ರತ್ನಗಿರಿ ರಸ್ತೆಯ ಡಿ.ಸಿ ಶ್ರೀಕಂಠಪ್ಪ ವೃತ್ತದಿಂದ ಆರಂಭಿಸಿ, ಎಂ.ಜಿ ರಸ್ತೆ ಮೂಲಕ ಹೊಸಮನೆ ಬಡಾವಣೆಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕದವರೆಗೆ ಆಯೋಜಿಸಲಾಗಿದೆ ಎಂದು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ತಿಳಿಸಿದರು.ಸೋಮವಾರರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿದ್ಯಾರ್ಥಿಗಳು, ನಾಗರಿಕರು, ಸಂಘ-ಸಂಸ್ಥೆಗಳ ಮುಖಂಡರಲ್ಲಿ ಏಕತೆ ಯನ್ನು ಸಾರಲು ಈ ಕಾಲ್ನಡಿಗೆ ಜಾಥಾ ಏರ್ಪಡಿಸಲಾಗಿದೆ. ಶಾಸಕರು, ಶಿಕ್ಷಣ ಇಲಾಖೆ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳ ಸಹಭಾಗಿತ್ವದಲ್ಲಿ ಪಕ್ಷಾತೀತವಾಗಿ ಸುಮಾರು 1 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಲಿದ್ದಾರೆ ಎಂದರು.ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದ ಸಂಯುಕ್ತಾಶ್ರಯದಲ್ಲಿ ಏಕತೆ, ಸಮಗ್ರತೆ ಹಿನ್ನೆಲೆಯಲ್ಲಿ ನ.20 ರಂದು ಮೂಡಿಗೆರೆ ಪಟ್ಟಣದಲ್ಲಿ ಬೆಳಗ್ಗೆ 7.30 ಕ್ಕೆ ಈ ಏಕತಾ ಓಟ ಏರ್ಪಡಿಸಲಾಗಿದ್ದು, ಇದರಲ್ಲಿ ಸರ್ವರೂ ಭಾಗವಹಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.ಈ ಸಂಬಂಧ ಸ್ಥಳೀಯ ಸಮುದಾಯಗಳಲ್ಲಿ ಜಾಗೃತಿ ಮತ್ತು ಉತ್ಸಾಹ ಬೆಳೆಸಲು ಶಾಲಾ-ಕಾಲೇಜುಗಳಲ್ಲಿ ವಿವಿಧ ಪೂರ್ವ ಕಾರ್ಯಕ್ರಮ ಚಟುವಟಿಕೆಗಳನ್ನು ರಾಷ್ಟ್ರೀಯ ಸೇವಾ ಯೋಜನೆಯಿಂದ ಆಯೋಜಿಸಲಾಗುತ್ತಿದೆ. ಇಲ್ಲಿ ಪ್ರಬಂಧ ಮತ್ತು ಚರ್ಚಾಸ್ಪರ್ಧೆಗಳು ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜೀವನದ ಕುರಿತು ವಿಚಾರ ಸಂಕಿರಣ, ಬೀದಿನಾಟಕಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಅ.6 ರಂದು ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವರಾದ ಡಾ. ಮನ್ಸುಖ್ ಮಾಂಡವೀಯ ಮೈ ಭಾರತ್ ಪೋರ್ಟಲ್‌ನಲ್ಲಿ ಡಿಜಿಟಲ್ ಅಭಿಯಾನ ಪ್ರಾರಂಭಿಸಿದರು. ಇದರಿಂದ ಈ ಉಪಕ್ರಮ ರಾಷ್ಟ್ರೀಯ ಹೆಮ್ಮೆ ಬೆಳೆಸಲು ನಾಗರಿಕ ಸಂಬಂಧ ಗಾಢವಾಗಿಸಲು ಮತ್ತು ಸರ್ದಾರ್ ಪಟೇಲ್ ಸ್ಮರಣಾರ್ಥ ಯುವಕರಲ್ಲಿ ಏಕತೆ ಮನೋಭಾವ ಬಲಪಡಿಸಲು ವಿನ್ಯಾಸಗೊಳಿಸಲಾಗಿದೆ ಎಂದು ಹೇಳಿದರು.ಪ್ರಧಾನಿ ನರೇಂದ್ರ ಮೋದಿಯವರ ರಾಷ್ಟ್ರ ನಿರ್ಮಾಣದಲ್ಲಿ ಜನ ಭಾಗಿದಾರಿ ಎಂಬ ದೃಷ್ಟಿಕೋನಕ್ಕೆ ಅನುಗುಣವಾಗಿ ಯುವಕರಿಂದ ಅನುಭವಿಗಳವರೆಗೆ ಪ್ರತಿಯೊಬ್ಬ ಪಾಲುದಾರರನ್ನು ಜಂಟಿ ಸ್ಮರಣಾರ್ಥ ಕ್ರಿಯೆಯಲ್ಲಿ ಒಟ್ಟುಗೂಡಿಸುತ್ತದೆ. ರಾಷ್ಟ್ರ ನಿರ್ಮಾಣದಲ್ಲಿ ಯುವಕರ, ವಿಶೇಷವಾಗಿ ಅಮೃತ್ ಪೀಧಿಯ ಪಾತ್ರವನ್ನು ಬಲಪಡಿಸುತ್ತದೆ. ಜೊತೆಗೆ ರಾಷ್ಟ್ರೀಯ ನಾಯಕರ ಕೊಡುಗೆಗಳಿಗೆ ಗೌರವ ಸಲ್ಲುತ್ತದೆ ಎಂದರು.ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಬಂದಿದೆ.ಕಾನೂನು ಸಚಿವರು ಹಿರಿಯತನದವರು ಅವರ ಬಗ್ಗೆ ಗೌರವ ಇದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಕೆಲವರ ಬಳಿ ಮೊಬೈಲ್, ಮದ್ಯಸೇವಿಸಿ ನೃತ್ಯ ಮಾಡುತ್ತಾರೆ. ಗೃಹ ಇಲಾಖೆ ಏನು ಮಾಡುತ್ತಿದೆ ಎಂದು ಪ್ರಶ್ನಿಸಿ, ಇದನ್ನು ಸರಿಪಡಿಸಲು ಗೃಹಸಚಿವರು ಮುಂದಾಗದಿದ್ದರೆ, ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರಲಿದೆ ಎಂದು ಹೇಳಿದರು.ಚಿತ್ತಾಪುರದಲ್ಲಿ ಆರ್.ಎಸ್.ಎಸ್. ಪಥ ಸಂಚಲನಕ್ಕೆ ನಿರ್ಬಂಧವಿಧಿಸಲಾಗಿದೆ. ಭೀಮ್‌ಆರ್ಮಿ ಸಂಘಟನೆಯವರು ಮೆರವಣಿಗೆಗೆ ಅನುಮತಿ ಕೇಳಿದ್ದಾರೆ. ಎಲ್ಲರಿಗೂ ಅವಕಾಶಕೊಡುತ್ತೇವೆ ಎಂದು ಹೇಳಿದ್ದರೆ ಉಂಟಾಗಿರುವ ಗೊಂದಲಕ್ಕೆ ತೆರೆ ಎಳೆಯಬಹುದಾಗಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಕಾನೂನು ಸುವ್ಯವಸ್ಥೆ ಸರಿಪಡಿಸಲಾಗದಷ್ಟು ದುರ್ಬಲರ ಎಂದು ಕೇಳಿದರು.ಪತ್ರಿಕಾಗೋಷ್ಠಿಯಲ್ಲಿ ಎನ್‌ವೈಕೆ ಅಧಿಕಾರಿ ಅಖಿಲ್, ಬಿಜೆಪಿ ಮುಖಂಡರಾದ ಎಚ್.ಸಿ. ಕಲ್ಮರುಡಪ್ಪ, ರವೀಂದ್ರ ಬೆಳವಾಡಿ, ಎಚ್.ಎಸ್ ಪುಟ್ಟಸ್ವಾಮಿ, ಪುಷ್ಪರಾಜ್, ಸಂತೋಷ್ ಕೊಟ್ಯಾನ್, ರಾಜು, ಮಣಿಕಂಠ, ಶಶಿ ಮತ್ತಿತರರು ಉಪಸ್ಥಿತರಿದ್ದರು.ಫೋಟೊ:
ಚಿಕ್ಕಮಗಳೂರು ನಗರದ ಪ್ರಸ್‌ಕ್ಲಬ್‌ನಲ್ಲಿ ಸೋಮವಾರ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಏಕತಾ ಮಾರ್ಚ್ ಅಭಿಯಾನದ ಅಂಗವಾಗಿ ಏಕತಾ ಓಟದ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿದರು.