ರೈತರ ಸಾಂಪ್ರದಾಯಿಕ ಕೃಷಿಜ್ಞಾನಕ್ಕೆ ವಿವಿ ಸರ್ಟಿಫಿಕೆಟ್

KannadaprabhaNewsNetwork |  
Published : Jul 04, 2026, 01:30 AM IST
ಸಿಕೆಬಿ-1 ಮುದ್ದೇನಹಳ್ಳಿಯಲ್ಲಿ ನಡೆದ ರಾಗಿ ರೈತರ ಸಮಾವೇಶದಲ್ಲಿ ಸದ್ಗುರು ಶ್ರೀ ಮಧುಸೂದನ ಸಾಯಿ ಮಾತನಾಡಿದರು.  | Kannada Prabha

ಸಾರಾಂಶ

ಸಾಂಪ್ರದಾಯಿಕ ಕೃಷಿ ಜ್ಞಾನ ಮತ್ತು ಪ್ರಾಯೋಗಿಕ ಕೌಶಲ್ಯವನ್ನು ಆಧರಿಸಿ ರಾಜ್ಯದ ರೈತರಿಗೆ ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಮೂಲಕ ಪ್ರಮಾಣಪತ್ರ ನೀಡುವ ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ ನೀಡಲಾಗುತ್ತಿದೆ ಎಂದು ಒಂದು ಜಗತ್ತು ಒಂದು ಕುಟುಂಬ ಮಾನವೀಯ ಸೇವಾ ಅಭಿಯಾನದ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಘೋಷಿಸಿದರು.

ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ:

ಸಾಂಪ್ರದಾಯಿಕ ಕೃಷಿ ಜ್ಞಾನ ಮತ್ತು ಪ್ರಾಯೋಗಿಕ ಕೌಶಲ್ಯವನ್ನು ಆಧರಿಸಿ ರಾಜ್ಯದ ರೈತರಿಗೆ ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಮೂಲಕ ಪ್ರಮಾಣಪತ್ರ ನೀಡುವ ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ ನೀಡಲಾಗುತ್ತಿದೆ ಎಂದು ಒಂದು ಜಗತ್ತು ಒಂದು ಕುಟುಂಬ ಮಾನವೀಯ ಸೇವಾ ಅಭಿಯಾನದ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಘೋಷಿಸಿದರು.

ತಾಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಶುಕ್ರವಾರ ಸುಭಿಕ್ಷಾ ಆರ್ಗಾನಿಕ್ ಫಾರ್ಮರ್ಸ್ ಸೊಸೈಟಿ ಮತ್ತು ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ಸಂಯುಕ್ತವಾಗಿ ಆಯೋಜಿಸಿದ್ದ ಸಾವಯವ ರಾಗಿ ಬೆಳೆಗಾರರ ವಾರ್ಷಿಕ ಸಮಾವೇಶದಲ್ಲಿ ಮಾತನಾಡಿ, ಇದೇ ಜು.29ರ ಗುರುಪೂರ್ಣಿಮೆಯಂದು ಮೊದಲ ಹಂತದಲ್ಲಿ 140 ರೈತರಿಗೆ ಪ್ರಮಾಣಪತ್ರ ವಿತರಿಸಲಾಗುವುದು. ಇಂತಹದೊಂದು ಪ್ರಯೋಗ ದೇಶದಲ್ಲಿ ಇದೇ ಮೊದಲು. ಅನ್ನದಾತನಿಗೆ ಗೌರವ ನೀಡುವುದೇ ಈ ಯೋಜನೆಯ ಉದ್ದೇಶ ಎಂದು ಹೇಳಿದರು.ತಲತಲಾಂತರಗಳಿಂದ ಬಂದ ಕೃಷಿ ಜ್ಞಾನದ ಮೂಲಕ ದೇಶಕ್ಕೆ ಅನ್ನ ನೀಡುತ್ತಿರುವ ರೈತರನ್ನು ಸಮಾಜ ಗೌರವಿಸುವ ಕಾಲ ಬಂದಿದೆ. ವೈದ್ಯರು, ಶಿಕ್ಷಕರು, ಎಂಜಿನಿಯರ್‌ಗಳನ್ನು ನಾಲೆಜ್ ಎಕಾನಮಿಯ ಭಾಗವಾಗಿ ಪರಿಗಣಿಸುವ ಸಮಾಜ, ರೈತರನ್ನು ಮಾತ್ರ ಲೇಬರ್ ಎಕಾನಮಿಯ ದೃಷ್ಟಿಯಿಂದ ನೋಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.ರೈತರಿಗೆ ಜ್ಞಾನವಿಲ್ಲವೇ? ಅವರ ಸಾಂಪ್ರದಾಯಿಕ ಜ್ಞಾನ ಮತ್ತು ಕೌಶಲ್ಯಕ್ಕೆ ಬೆಲೆ ಇಲ್ಲವೇ ಎಂಬ ಪ್ರಶ್ನೆಗೆ ಉತ್ತರವಾಗಿ ಈ ಯೋಜನೆ ರೂಪಿಸಲಾಗಿದೆ. ದೇಶದಲ್ಲಿಯೇ ಮೊದಲ ಬಾರಿಗೆ ರೈತರ ಜ್ಞಾನ ಮತ್ತು ಅನುಭವಕ್ಕೆ ಮಾನ್ಯತೆ ನೀಡುವ ಪ್ರಯತ್ನ ಇದಾಗಿದೆ. ಈಗಾಗಲೇ 180 ರೈತರಿಗೆ ಪರೀಕ್ಷೆ ನಡೆಸಲಾಗಿದ್ದು, ಅವರಲ್ಲಿ 140 ಮಂದಿ ಅರ್ಹತೆ ಪಡೆದಿದ್ದಾರೆ. ರೈತರ ಪಾರಂಪರಿಕ ಕೃಷಿಜ್ಞಾನ ಮತ್ತು ಪ್ರಾಯೋಗಿಕ ಕೌಶಲ್ಯದ ಮೌಲ್ಯಮಾಪನದ ಆಧಾರದ ಮೇಲೆ ಪ್ರಮಾಣಪತ್ರ ನೀಡಲಾಗುವುದು. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ರೈತರನ್ನು ಈ ಯೋಜನೆಯ ವ್ಯಾಪ್ತಿಗೆ ತರಲಾಗುವುದು. ಇತರ ವಿಶ್ವವಿದ್ಯಾಲಯಗಳಲ್ಲಿ 3-4 ವರ್ಷಗಳ ಕೋರ್ಸ್ ಪೂರ್ಣಗೊಳಿಸಿದ ಬಳಿಕ ಪ್ರಮಾಣಪತ್ರ ಸಿಗುತ್ತದೆ. ಆದರೆ ನಾವು ರೈತರಲ್ಲಿ ಈಗಾಗಲೇ ಇರುವ ಜ್ಞಾನವನ್ನು ಗುರುತಿಸಿ ಗೌರವಿಸುತ್ತಿದ್ದೇವೆ. ಇದರಿಂದ ರೈತರಿಗೆ ತಕ್ಕ ಸ್ಥಾನಮಾನ ಮತ್ತು ಆತ್ಮವಿಶ್ವಾಸ ದೊರೆಯಲಿದೆ ಎಂದು ಹೇಳಿದರು.ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ಮೂಲಕ ರಾಜ್ಯದ ಒಂದು ಕೋಟಿ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಪೌಷ್ಟಿಕ ಆಹಾರ ಸಾಯಿ ಶ್ಯೂರ್‌ ವಿತರಿಸಲಾಗುತ್ತಿದ್ದು, ಇದರ ತಯಾರಿಕೆಗೆ ಸಾವಯವ ಪದ್ಧತಿಯಲ್ಲಿ ಬೆಳೆದ ರಾಗಿಯನ್ನು ರೈತರು ಪೂರೈಸುತ್ತಿರುವುದು ಹೆಮ್ಮೆಯ ಸಂಗತಿ.ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ಎರಡು ಕೋಟಿ ಮಕ್ಕಳಿಗೆ ವಿಸ್ತರಿಸುವ ಗುರಿ ಹೊಂದಲಾಗಿದ್ದು, ಇದಕ್ಕಾಗಿ ಪ್ರತ್ಯೇಕ ಕಾರ್ಖಾನೆ ಸ್ಥಾಪಿಸುವ ಯೋಜನೆಯೂ ಇದೆ ಎಂದು ತಿಳಿಸಿದರು.

ಸದ್ಗುರು ಸಿರಿಧಾನ್ಯ ರಾಯಭಾರಿ: ಕರಂದ್ಲಾಜೆ ಕೇಂದ್ರ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳ ಜೊತೆಗೆ ಸಾವಯವ ಕೃಷಿಯಲ್ಲಿಯೂ ಸದ್ಗುರು ಶ್ರೀ ಮಧುಸೂದನ ಸಾಯಿ ಕ್ರಾಂತಿಕಾರಕ ಕೆಲಸ ಮಾಡುತ್ತಿದ್ದಾರೆ .ಅವರು ಈ ನಾಡಿನ ಆಧ್ಯಾತ್ಮಿಕ ಮತ್ತು ಸಿರಿಧಾನ್ಯಗಳ ರಾಯಭಾರಿಯಾಗಿದ್ದಾರೆ. ಉಚಿತ ವೈದ್ಯಕೀಯ ಶಿಕ್ಷಣ ನೀಡುತ್ತಿರುವ ಏಕೈಕ ಸ್ವಾಮೀಜಿ ಎಂದು ನಾನು ವಿಶ್ವದ ಯಾವುದೇ ವೇದಿಕೆಯಲ್ಲಿ ಹೇಳಬಲ್ಲೆ .

ರೈತರ ಶ್ರಮಕ್ಕೆ ಧಾರ್ಮಿಕತೆಯ ಸ್ಪರ್ಶ ನೀಡುವ ಮೂಲಕ ಸದ್ಗುರುಗಳು ಚಿಕ್ಕ ವಯಸ್ಸಿನಲ್ಲಿಯೇ ಅದ್ಭುತ ಪರಿವರ್ತನೆ ತಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸುಭಿಕ್ಷಾ ಆರ್ಗಾನಿಕ್ ಫಾರ್ಮರ್ಸ್ ಸೊಸೈಟಿಯ ಅಧ್ಯಕ್ಷ ಆನಂದ ಆ.ಶ್ರೀ. ಮಾತನಾಡಿ, ಬೀಜವನ್ನು ಜೀವ ಎಂದು ಕಲಿಸದೇ, ಅದನ್ನು ಕೇವಲ ಸರಕು ಎಂಬಂತೆ ನೋಡುವ ಮನೋಭಾವದಿಂದಲೇ ರಾಸಾಯನಿಕ ಕೃಷಿಗೆ ಉತ್ತೇಜನ ಸಿಕ್ಕಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ತಿಪಟೂರು ತಾಲೂಕಿನ ಕೆರೆಗೋಡಿ ರಂಗಾಪುರ ಮಠದ ಶ್ರೀ ಗುರು ಪರದೇಶಿಕೇಂದ್ರ ಸ್ವಾಮೀಜಿ, ರಾಜ್ಯ ಕೃಷಿ ಇಲಾಖೆ ಕಾರ್ಯದರ್ಶಿ ಕ್ಯಾಪ್ಟನ್ ಡಾ ಕೆ.ರಾಜೇಂದ್ರ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ ಎಸ್.ವಿ. ಸುರೇಶ್ ಹಾಗೂ ಪ್ರಶಾಂತ ಬಾಲಮಂದಿರದ ಅಧ್ಯಕ್ಷ ಬಿ.ಎನ್. ನರಸಿಂಹಮೂರ್ತಿ ಇದ್ದರು.

ಸಿಕೆಬಿ-1 ಮುದ್ದೇನಹಳ್ಳಿಯಲ್ಲಿ ನಡೆದ ರಾಗಿ ರೈತರ ಸಮಾವೇಶದಲ್ಲಿ ಸದ್ಗುರು ಶ್ರೀ ಮಧುಸೂದನ ಸಾಯಿ ಮಾತನಾಡಿದರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತಿತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರದ ಸವವಲತ್ತುಗಳನ್ನು ಶ್ರಮಿಕ ವರ್ಗದವರು ಸದ್ಭಳಕೆ ಮಾಡಬೇಕು: ಡಾ.ಕೆ.ಪಿ.ಅಂಶುಮಂತ್
ಡೇರಿ ಸಿಬ್ಬಂದಿ ಆರೋಗ್ಯ ಕಾಳಜಿ ವಹಿಸಿ: ಬಮೂಲ್‌ ನಿರ್ದೇಶಕ