ಕನ್ನಡಪ್ರಭ ವಾರ್ತೆ ಬೆಳಗಾವಿ
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಸುಜಾತಾ ಪೋಳಗೆ ಪಿಎಚ್‌ಡಿ ಪದವಿ ನೀಡಲು ಸಿಂಡಿಕೇಟ್ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಆರ್‌ಸಿಯು ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ ತಿಳಿಸಿದರು.ನಗರದ ವಾರ್ತಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿ ನಿಯಮಗಳಡಿಯೇ ನಾವು ಕಾರ್ಯನಿರ್ವಹಿಸುತ್ತಿದ್ದು, ಘಟಿಕೋತ್ಸವದ ವೇಳೆ ಯಾವ ವಿದ್ಯಾರ್ಥಿಗಳ ಪಿಎಚ್‌ಡಿ ಪದವಿ ಪ್ರದಾನವನ್ನು ತಡೆ ಹಿಡಿದಿಲ್ಲ. ಒಟ್ಟು 28 ಸಂಶೋಧನಾ ವಿದ್ಯಾರ್ಥಿಗಳು ಪಿಎಚ್‌ಡಿ ಪದವಿ ಪಡೆಯಲು ಅರ್ಹರಿದ್ದರು. ಸುಜಾತಾ ಹೊರತುಪಡಿಸಿದರೆ ಎಲ್ಲ ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಜಿ ನಮೂನೆ ಭರ್ತಿ ಮಾಡಿ, ನಿಗದಿತ ಶುಲ್ಕ ಪಾವತಿಸಿದ್ದರು. 27 ವಿದ್ಯಾರ್ಥಿಗಳ ಪೈಕಿ ಒಬ್ಬ ವಿದ್ಯಾರ್ಥಿ ಗೈರಾಗಿದ್ದರು. ಆದರೆ, ಪದವಿ ಸ್ವೀಕರಿಸಲು ಶುಲ್ಕ ಪಾವತಿಸಿ, ಅರ್ಜಿ ನಮೂನೆ ಸಲ್ಲಿಸದ ಕಾರಣ ಸುಜಾತಾ ಅವರಿಗೆ ಪದವಿ ಪ್ರದಾನ ಮಾಡಲಿಲ್ಲ ಎಂದು ಸ್ಪಷ್ಟಪಡಿಸಿದರು.ನಾವು ಈ ಬಗ್ಗೆ ಮಾತನಾಡಲು ಹೋಗಲಿಲ್ಲ. ನಾವು ವಿವಿ ನಿಯಮಗಳ ಮೀತಿಯಲ್ಲೇ ಹೋಗಿದ್ದೇವೆ. ನಿಯಮ ಪಾಲನೆಯಲ್ಲಿ ಯಾವುದೇ ಯಡವಟ್ಟು ಇಲ್ಲ. ಆದರೆ, ಜಾತಿಯತೆ ಮಾಡಲಾಗಿದೆ ಎಂಬ ವಿದ್ಯಾರ್ಥಿನಿ ಹೇಳಿಕೆಯಿಂದ ತುಂಬ ನೋವಾಗಿದೆ. ಆರೋಪಗಳನ್ನು ಮಾಡಿದ್ದರೂ ನಾವು ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸಿ ಈ ಸಂಶೋಧನಾ ವಿದ್ಯಾರ್ಥಿನಿಯನ್ನು ಕ್ಷಮಿಸಿ, ಪಿಎಚ್‌ಡಿ ಪದವಿ ಪ್ರದಾನ ಮಾಡಲು ತೀರ್ಮಾನಿಸಿದ್ದೇವೆ. ಆ ವಿದ್ಯಾರ್ಥಿನಿ ನಿಗದಿತ ಶುಲ್ಕ ಪಾವತಿಸಿ, ಅರ್ಜಿ ನಮೂನೆ ಭರ್ತಿ ಮಾಡಿ ಸಲ್ಲಿಸಿ, ಪದವಿ ಪಡೆಯಬಹುದು ಎಂದು ತಿಳಿಸಿದರು.
ಸಂಶೋಧನಾ ವಿದ್ಯಾರ್ಥಿಗಳಿಗೆ ಪಿಎಚ್‌ಡಿ ಪದವಿ ನೀಡಲು ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಎಲ್ಲ ಸಮುದಾಯದ ವಿದ್ಯಾರ್ಥಿಗಳು ನಮ್ಮಲ್ಲಿದ್ದಾರೆ. ನಾವು ಯಾವುದೇ ಜಾತಿ, ತಾರತಮ್ಯ ಮಾಡಿಲ್ಲ. ಪದವಿ ಪಡೆಯದ ವಿದ್ಯಾರ್ಥಿನಿ ಪರೀಕ್ಷಾ ವಿಭಾಗದ ಕುಲಸಚಿವರನ್ನು ಸಂಪರ್ಕಿಸಿದ್ದರೆ, ಇಂತಹ ಯಾವುದೇ ಘಟನೆ ನಡೆಯುತ್ತಿರಲಿಲ್ಲ. ವಿದ್ಯಾರ್ಥಿಗಳ ಹಿತ ಕಾಪಾಡಲು, ಸಹಾಯ ಮಾಡಲೆಂದೇ ವಿಶ್ವವಿದ್ಯಾಲಯವಿದೆ. ನಮ್ಮಲ್ಲಿ ಯಾವ ಪ್ರಕ್ರಿಯೆಯಲ್ಲಿಯೂ ಲೋಪದೋಷ ಆಗಿಲ್ಲ. ಆ ಸಂಶೋಧನಾ ವಿದ್ಯಾರ್ಥಿನಿಗೆ ₹ 3.86 ಲಕ್ಷ ವಿದ್ಯಾರ್ಥಿ ವೇತನ ನೀಡಲಾಗಿದೆ. ಇದರಲ್ಲಿ ವಿವಿ ಯಾವುದೇ ತಪ್ಪು ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.ಸುದ್ದಿಗೋಷ್ಠಿಯಲ್ಲಿ ಕುಲಸಚಿವರಾದ ಸಂತೋಷ ಕಾಮಗೌಡ, ಪ್ರೊ.ಡಿ.ಎನ್.ಪಾಟೀಲ ಹಾಗೂ ಸಿಂಡಿಕೆಟ್ ಸದಸ್ಯರು ಉಪಸ್ಥಿತರಿದ್ದರು.
-------------ಬಾಕ್ಸ್
ಪ್ರೊ.ಮೂರ್ತಿಗೆ ಕಡ್ಡಾಯ ನಿವೃತ್ತಿ ಶಿಕ್ಷೆವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇತಿಹಾಸ ವಿಭಾಗದ ಪ್ರೊ.ಕೆ.ಎಲ್.ಎನ್. ಮೂರ್ತಿ ಅವರ ಸೇವೆಗೆ ಕಡ್ಡಾಯ ನಿವೃತ್ತಿ ಶಿಕ್ಷೆ ವಿಧಿಸಲು ಸಿಂಡಿಕೇಟ್ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಉಪನ್ಯಾಸಕ ಹುದ್ದೆ ಶ್ರೇಷ್ಠವಾದದ್ದು, ಗುರುವಿನ ಸ್ಥಾನದಲ್ಲಿರುವವರು ನಿಯಮದಡಿ ನಡೆದುಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಯಾವ ರೀತಿ ಮಾರ್ಗದರ್ಶನ ನೀಡಬೇಕು ಎಂಬ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ದುರಾದೃಷ್ಟವಶಾತ್ ಮೂರ್ತಿ ಎಲ್ಲ ನಿಯಮ ಪಾಲನೆ ಮಾಡದಿರುವುದರಿಂದ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ಮುಂದೆ ಯಾರೇ ತಪ್ಪು ಮಾಡಿದರೂ ಅವರಿಗೂ ಇಂತಹದ್ದೆ ಶಿಕ್ಷೆ ಎನ್ನುವ ಎಚ್ಚರಿಕೆ ಸಂದೇಶವನ್ನು ನೀಡಲಾಗಿದೆ ಎಂದು ತಿಳಿಸಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಆಡಳಿತ ಪ್ರಕ್ರಿಯೆ ನಿಯಮಗಳಡಿಯೇ ನಡೆಯುತ್ತಿದೆ. ಎಲ್ಲಿಯೂ ನಾವು ನಿಯಮ ಉಲ್ಲಂಘಿಸಿಲ್ಲ. ಯಾರಿಗೂ ಲೋಪ, ದೋಷ ಎಸಗಿಲ್ಲ ಎಂದು ಸ್ಪಷ್ಟಪಡಿಸಿದರು.