ಯಡ್ರಾಮಿ ಪಟ್ಟಣದಲ್ಲಿ ರಾತ್ರಿ ಬೆಳಗದ ಬೀದಿ ದೀಪಗಳು

KannadaprabhaNewsNetwork | Published : Apr 9, 2024 12:50 AM

ಸಾರಾಂಶ

ಬೀದಿ ದೀಪಗಳು ಚಾಲ್ತಿಯಲ್ಲಿರದೇ ಕೆಟ್ಟುಹೋದ ಪರಿಣಾಮ ಪಟ್ಟಣ ಕಗ್ಗತ್ತಲಲ್ಲಿ ಮುಳುಗುವಂತಾಗಿದೆ. ರಾತ್ರಿಯಾದರೆ, ಮಹಿಳೆಯರು, ಮಕ್ಕಳು, ವೃದ್ಧರು ರಸ್ತೆಗೆ ಬರಲು ಭಯಪಡುವಂತಹ ವಾತಾವರಣ ನಿರ್ಮಾಣವಾಗಿದೆ.

ಕನ್ನಡಪ್ರಭ ವಾರ್ತೆ ಯಡ್ರಾಮಿ

ಪಟ್ಟಣದ ಬೀದಿ ದೀಪಗಳು ಚಾಲ್ತಿಯಲ್ಲಿರದೇ ಕೆಟ್ಟುಹೋದ ಪರಿಣಾಮ ಪಟ್ಟಣ ಕಗ್ಗತ್ತಲಲ್ಲಿ ಮುಳುಗುವಂತಾಗಿದೆ. ರಾತ್ರಿಯಾದರೆ, ಮಹಿಳೆಯರು, ಮಕ್ಕಳು, ವೃದ್ಧರು ರಸ್ತೆಗೆ ಬರಲು ಭಯಪಡುವಂತಹ ವಾತಾವರಣ ನಿರ್ಮಾಣವಾಗಿದೆ. ಪಟ್ಟಣದ ಯಾವುದೇ ಭಾಗಕ್ಕೆ ಹೋದರೂ ಕೆಟ್ಟುನಿಂತಿರುವ ಬೆಳಕು ನೀಡದ ಬೀದಿ ದೀಪಗಳನ್ನು ಕಾಣಬಹುದು. ಅಷ್ಟರಮಟ್ಟಿಗೆ ಬೀದಿ ದೀಪಗಳ ಸಮಸ್ಯೆ ಇದೆ ಎಂದು ಸಾರ್ವಜನಿಕರು ಹೇಳುತ್ತಾರೆ.

ಹೃದಯ ಭಾಗದಲ್ಲೇ ಕತ್ತಲು: ಪಟ್ಟಣದ ಹೃದಯ ಭಾಗ ಎನಿಸಿಕೊಂಡಿರುವ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ, ಟಿಪ್ಪು ಸುಲ್ತಾನ್ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಸರ್ದಾರ್ ಶರಣಗೌಡ ವೃತ್ತ, ಪೊಲೀಸ್ ಠಾಣೆಯ ಪ್ರದೇಶ ರಾತ್ರಿಯಾಗುತ್ತಿದ್ದಂತೆ ಕತ್ತಲಲ್ಲಿ ಭಾಗಗಳಲ್ಲಿರುವ ಬಹುತೇಕ ಬೀದಿ ದೀಪಗಳು ರಾತ್ರಿಯ ಹೊತ್ತು ಉರಿಯುವುದಿಲ್ಲ. ಹೆಸರಿಗಷ್ಟೇ ಬೀದಿ ದೀಪದ ಕಂಬಗಳು ಎಂಬ ಹಣೆಪಟ್ಟಿ ಕಟ್ಟಿಕೊಂಡು ನಿಂತಿವೆ. ಪ್ರತಿನಿತ್ಯ ಈ ಭಾಗದಲ್ಲಿ ನೂರಾರು ವಾಹನಗಳು ಓಡಾಡುತ್ತವೆ.

ಹದಗೆಟ್ಟ ರಸ್ತೆ: ಪಟ್ಟಣದ ವಾರ್ಡ್‌ಗಳಲ್ಲಿ ಅತಿ ಜನಸಂದಣಿ ಭಾಗದಲ್ಲೇ ಬೀದಿ ದೀಪಗಳು ಕಂಬಗಳಲ್ಲಿ ವಿದ್ಯುತ್ ದೀಪಗಳು ಇಲ್ಲದ ಕಾರಣ ರಾತ್ರಿ ಹೊತ್ತು ಹದಗೆಟ್ಟ ರಸ್ತೆಯಲ್ಲಿ ಓಡಾಡುವ ಮಹಿಳೆಯರು, ವೃದ್ಧರು ಮತ್ತು ಪಾದಾಚಾರಿಗಳಿಗೆ ತಿರುಗಾಡಲೂ ಭಯ ಪಡುತ್ತಿದ್ದಾರೆ. ಬಲ್ಟ್ ಉರಿಯದ ಕಾರಣ ಕಣ್ಣಿಗೆ ಕತ್ತಲು ಗ್ಯಾರಂಟಿ, ಬೀಳುವ ತವಕದಲ್ಲಿ ನಾವು ತಿರುಗಾಡುವ ಪರಿಸ್ಥಿತಿ ಎದುರಾಗಿದೆ ಎಂದು ಸಾರ್ವಜನಿಕರು ಪಟ್ಟಣ ಪಂಚಾಯಿತಿ ವಿರುದ್ಧ ಹಿಡಿ ಶಾಪಹಾಕುತ್ತಿದ್ದಾರೆ.

ಕಳ್ಳತನ ಹೆಚ್ಚಾಗುವ ಆತಂಕ: ಜನವಸತಿ ಪ್ರದೇಶಗಳಲ್ಲಿ ಬೀದಿ ದೀಪಗಳು ಕೆಟ್ಟಿರುವುದರಿಂದ ರಾತ್ರಿಯಾಗುತ್ತಿದ್ದಂತೆ ಮಹಿಳೆಯರು ಮಕ್ಕಳು ಹೊರಗೆ ಬರಲು ಭಯಪಡುತ್ತಿದ್ದಾರೆ. ವಸತಿ ವಿರಳ ಪ್ರದೇಶದಲ್ಲಿ ಬೀದಿ ದೀಪಗಳು ಚಾಲ್ತಿ ಇಲ್ಲದೇ ಇರುವುದು ಕಳ್ಳರಿಗೆ ಅನುಕೂಲ ಮಾಡಿಕೊಟ್ಟಂತಾಗಿದೆ. ತಕ್ಷಣ ಸ್ಥಳೀಯ ಆಡಳಿತ ಬೀದಿ ದೀಪಗಳ ದುರಸ್ಥಿಗೆ ಕ್ರಮ ಕೈಗೊಳ್ಳಬೇಕು. ಪಟ್ಟಣದಲ್ಲಿ ಮನೆ ಕಳ್ಳತನ ಆಗಿರುವ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.ಇಡೀ ಪಟ್ಟಣದಲ್ಲಿ ಒಂದು ಕಡೆ ಬಲ್ಬ ಉರಿಯುತ್ತೇ ಇನ್ನೊಂದೆಡೆ ಉರಿಯುವುದೇ ಇಲ್ಲ ಈ ಅವ್ಯವಸ್ಥೆಯಲ್ಲಿ ರಾಷ್ಟ್ರೀಯ ಪಕ್ಷಗಳು ಕತ್ತಲಿನಲ್ಲಿ ಕಾರ್ಯಕರ್ತರ ಸಭೆ ಮಾಡಿ, ಮತಯಾಚನೆ ಮಾಡುತ್ತಿದ್ದಾರೆ.

- ಗಿರೀಶ ಗುತ್ತೇದಾರ್, ನಿವಾಸಿ, ಯಡ್ರಾಮಿ

Share this article