ಕನ್ನಡಪ್ರಭ ವಾರ್ತೆ ಹಲಗೂರು
ಪ್ರಗತಿ ಪರಿಶೀಲನಾ ಸಭೆಗೆ ಕೆಲ ಇಲಾಖೆ ಅಧಿಕಾರಿಗಳು ಅನಾವಶ್ಯಕವಾಗಿ ಗೈರಾಗುತ್ತಿರುವುದರಿಂದ ಗ್ರಾಮಗಳ ಸಮಸ್ಯೆ ನಿವಾರಣೆ ಹಾಗೂ ಅಭಿವೃದ್ಧಿಗೆ ತೊಡಕಾಗುತ್ತಿದೆ ಎಂದು ಹಾಡ್ಲಿ ಗ್ರಾಪಂ ಅಧ್ಯಕ್ಷ ಎನ್.ವಿ.ಚಲವರಾಜು ತಿಳಿಸಿದರು.ಹಾಡ್ಲಿ ಸರ್ಕಾರಿ ಪ್ರೌಢಶಾಲೆ ಸಭಾಂಗಣದಲ್ಲಿ ಗ್ರಾಮ ಪಂಚಾಯ್ತಿ ಮಟ್ಟದ ಪ್ರಗತಿ ಪರಿಶೀಲನಾ ಸಭೆ(ಕೆಡಿಪಿ) ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಪಂ ಮಟ್ಟದಲ್ಲಿ ಎಲ್ಲಾ ಅಭಿವೃದ್ಧಿ ಇಲಾಖೆಗಳ ಯೋಜನೆ, ಅನುದಾನ ವಿವರ ಮತ್ತು ಅವುಗಳ ಪ್ರಗತಿಯನ್ನು ಪರಿಶೀಲಿಸುವುದು ಹಾಗೂ ಅನುಷ್ಟಾನಕ್ಕೆ ಸೂಕ್ತ ಮಾರ್ಗದರ್ಶನ ನೀಡುವುದು ಕೆಡಿಪಿ ಸಭೆ ಉದ್ದೇಶವಾಗಿದೆ ಎಂದರು.
ಕೆಲವು ಇಲಾಖೆಗಳ ಅಧಿಕಾರಿಗಳು ಅನಾವಶ್ಯಕವಾಗಿ ಸಭೆಗೆ ಗೈರು ಹಾಜರಾಗಿದ್ದಾರೆ. ಇದು ಅಭಿವೃದ್ಧಿಗೆ ತೊಡಕಾಗಲಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಇಲಾಖಾ ಅಧಿಕಾರಿಗಳನ್ನು ಸಭೆಗೆ ಅಹ್ವಾನಿಸಿ ಸಮನ್ವಯ ಸಾಧಿಸಿ ಅಭಿವೃದ್ಧಿಗೆ ವೇಗ ನೀಡಲಾಗುವುದು ಎಂದರು.ಗ್ರಾಪಂ ವ್ಯಾಪ್ತಿ ಸರ್ಕಾರಿ ಭೂಮಿ ಗುರುತಿಸಿ ಕೊಡುವಂತೆ ತಾಲೂಕು ಕಚೇರಿಗೆ ಮನವಿ ಸಲ್ಲಿಸಿದ್ದರೂ ಇದುವರೆಗೂ ಯಾವುದೇ ಉತ್ತರ ಸಿಕ್ಕಿಲ್ಲ. ಇದರಿಂದ ಖಾಸಗಿಯವರು ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಳ್ಳುತ್ತಿದ್ದರೂ ತಡೆಗಟ್ಟಲು ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಗ್ರಾಪಂ ವ್ಯಾಪ್ತಿಯ ಕೆರೆ, ಕಟ್ಟೆ ಮತ್ತು ಸರ್ಕಾರಿ ಜಾಗ ಗುರುತಿಸಿಕೊಡಬೇಕೆಂದು ಕಂದಾಯ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಗ್ರಾಪಂನಲ್ಲಿ ಕಸ ಸಂಗ್ರಹಣೆಗೆ ಪ್ರತ್ಯೇಕ ವಾಹನ ಇದ್ದರೂ ಸಹ ಕಸ ಸಂಗ್ರಹಣೆ ಮಾಡಲು ವಾಹನ ಚಾಲನೆ ತರಬೇತಿ ಪಡೆಯಲು ಯಾರು ಬರುತ್ತಿಲ್ಲ. ಪರಿಣಾಮವಾಗಿ ಕಸ ವಿಲೇವಾರಿ ಮಾಡಲು ಇದುವರೆಗೂ ಸಾಧ್ಯವಾಗಿಲ್ಲ ಎಂದರು.ಗ್ರಾಪಂ ಸಹಕಾರ ದೊರೆತರೆ ತ್ವರಿತಗತಿಯಲ್ಲಿ ಕಾರ್ಯ ಯೋಜನೆ ರೂಪಿಸಿ ಕಸ ವಿಲೇವಾರಿ ಕಾರ್ಯಕ್ರಮಕ್ಕೆ ಮುಂದಾಗುತ್ತೇವೆ ಎಂದು ಎನ್ ಆರ್ ಎಲ್ ಎಂ ತಾಲೂಕು ಸಂಯೋಜನಾಧಿಕಾರಿ ನಿಂಗರಾಜು ಉತ್ತರಿಸಿದರು.
ನಡಕಲಪುರ ಗೇಟ್ ಬಳಿ ಇರುವ ನಾಡ ಕಚೇರಿಯಲ್ಲಿ ವೃದ್ದರು ಮತ್ತು ಮಹಿಳೆಯರು ಕುಳಿತುಕೊಳ್ಳಲು ಒಂದು ಕುರ್ಚಿ ಇಲ್ಲದಿರುವುದು ದುರಂತ. ಸರ್ಕಾರಿ ಕಚೇರಿಯಲ್ಲಿ ಸಾರ್ವಜನಿಕರಿಗೆ ಅಗತ್ಯವಾದ ಮೂಲ ಸೌಕರ್ಯಗಳನ್ನು ಒದಗಿಸಲು ಕ್ರಮ ವಹಿಸಬೇಕು ಎಂದರು.ಹಾಡ್ಲಿ-ಮೇಗಳಾಪುರ ವೃತ್ತದಲ್ಲಿ ಇರುವ ವೈನ್ಸ್ ನಲ್ಲಿ ಗ್ರಾಹಕರು ಮದ್ಯವನ್ನು ಖರೀದಿ ಮಾಡಲಷ್ಟೇ ಅವಕಾಶವಿದೆ. ಅಲ್ಲೇ ಕುಳಿತು ಮದ್ಯ ಸೇವನೆ ಮಾಡಿ ಗದ್ದಲ ಎಬ್ಬಿಸುವ ಪ್ರಕರಣಗಳು ಸಂಭವಿಸಿವೆ. ಈ ಸಂಬಂಧ ಅಬಕಾರಿ ಇಲಾಖೆ ಅಧಿಕಾರಿಗಳು ಕಠಿಣ ಕ್ರಮ ಜರುಗಿಸಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷೆ ಅಶ್ವಿನಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಲೋಕೇಶ್, ಸದಸ್ಯರಾದ ಶಿವಲಿಂಗೇಗೌಡ, ಮಂಜು ಭೈರೇಶ್, ಮಂಜುಳ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಲಿಂಗರಾಜು, ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.