ಡಾಂಬರು ಕಾಣದ ಉಪನೊಂದಣಾಧಿಕಾರಿಗಳ ಕಚೇರಿ ರಸ್ತೆ

KannadaprabhaNewsNetwork | Published : Jul 15, 2024 1:49 AM

ಸಾರಾಂಶ

ರಸ್ತೆಯು ಸಂಪೂರ್ಣ ಹಾಳಾಗಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳು ಸಂಚರಿಸಲು ಕಷ್ಟಕರವಾಗಿದೆ

ಕನ್ನಡಪ್ರಭ ವಾರ್ತೆ ತಿಪಟೂರು

ನಗರದ ಹಾಸನ ಸರ್ಕಲ್‌ನಿಂದ ಉಪನೋಂದಣಾಧಿಕಾರಿಗಳ ಕಚೇರಿ ಹಾಗೂ ಮಾರನಗೆರೆ ರೈಲ್ವೆ ಕೆಳ ಸೇತುವೆಗೆ ಸಂಪರ್ಕ ಕಲ್ಪಿಸುವ ರಸ್ತೆಯು ಸಂಪೂರ್ಣ ಹಾಳಾಗಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳು ಸಂಚರಿಸಲು ಕಷ್ಟಕರವಾಗಿದೆ.

ಪ್ರತಿನಿತ್ಯ ಈ ರಸ್ತೆಯಲ್ಲಿ ಒಂದಲ್ಲೊಂದು ಅಪಘಾತಗಳು ಸಂಭವಿಸುತ್ತಿದ್ದರೂ, ನಗರಸಭೆ ಮಾತ್ರ ಜಾಣಕುರುಡು ಪ್ರದರ್ಶಿಸುತ್ತಿರುವುದು ವಾಹನ ಸವಾರರು ಹಾಗೂ ಸ್ಥಳೀಯ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.ಈ ರಸ್ತೆ ಕೇವಲ ಉಪನೊಂದಣಾಧಿಕಾರಿಗಳ ಕಚೇರಿಗೆ ಮಾತ್ರ ಸಂಪರ್ಕ ರಸ್ತೆಯಲ್ಲ. ಈ ರಸ್ತೆಯಿಂದ ನಗರದ ಪೊಲೀಸ್ ಕ್ವಾಟರ್ಸ್‌, ನ್ಯಾಯಾಲಯ ಸಂಕೀರ್ಣ, ಅರಣ್ಯ ಇಲಾಖೆ, ಬೆಸ್ಕಾಂ ವಿಭಾಗೀಯ ಕಚೇರಿ, ಎಲ್‌ಐಸಿ ಕಚೇರಿ, ಪ್ರವಾಸಿ ಮಂದಿರ, ಆಯುರ್ವೇದಿಕ್ ಆಸ್ಪತ್ರೆ, ಅಲ್ಲದೆ ಉಪವಿಭಾಗಾಧಿಕಾರಿಗಳು, ತಹಸೀಲ್ದಾರ್ ವಾಸಿಸುವ ನಿವಾಸಕ್ಕೂ ಇದೇ ರಸ್ತೆಯಲ್ಲಿ ಹೋಗಬೇಕು.

ಈ ಹತ್ತು ಹಲವು ಕಡೆಗಳಿಗೆ ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದ್ದು, ಅಧಿಕಾರಿಗಳು ಸೇರಿದಂತೆ ಈ ರಸ್ತೆಯಲ್ಲಿ ಸಾವಿರಾರು ಸಾರ್ವಜನಿಕರು ಓಡಾಡುತ್ತಾರೆ. ವಿವಿಧ ಕೆಲಸ ಕಾರ್ಯಗಳಿಗಾಗಿ ರೈತರು, ಸಾರ್ವಜನಿಕರು ಸಂಬಂಧಿಸಿದ ಕಚೇರಿಗಳಿಗೆ ಬಂದು ಹೋಗಲು ಇದೇ ರಸ್ತೆ ಅವಲಂಬಿಸಿದ್ದಾರೆ. ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿ ಗೊಟರುಗಳು ಬಿದ್ದಿದ್ದು, ರಸ್ತೆಯ ಅಕ್ಕಪಕ್ಕ ಗಿಡಗೆಂಟೆಗಳು ಬೆಳೆದು ರಸ್ತೆಯನ್ನೇ ಆವರಿಸಿಕೊಂಡಿವೆ.

ಮಳೆ ಬಂದರೆ ಸಾಕು ರಸ್ತೆಯಲ್ಲಿರುವ ಗುಂಡಿ ಕಾಣದೆ ವಾಹನ ಸವಾರರು ಎದ್ದುಬಿದ್ದು, ಹೋಗುತ್ತಿದ್ದಾರೆ. ಇನ್ನೂ ಬೇಸಿಗೆ ಸಮಯದಲ್ಲಿ ಕೆಂದೂಳಿನಲ್ಲಿ ಓಡಾಡಬೇಕು. ರಾತ್ರಿ ವೇಳೆಯಂತೂ ಈ ರಸ್ತೆಯಲ್ಲಿ ಓಡಾಡಲು ಭಯದ ವಾತಾವರಣವಿದೆ. ಅಧಿಕಾರಿ ವರ್ಗದವರು ಇದೇ ರಸ್ತೆಯಲ್ಲಿ ಓಡಾಡುತ್ತಿದ್ದರೂ ನಗರಸಭೆಗೆ ತಿಳಿಸುವ ಗೋಜಿಗೂ ಹೋಗದಿರುವುದು ವಿಪರ್ಯಾಸವೇ ಸರಿ.

ಈ ರಸ್ತೆಗೆ ಡಾಂಬರು ಹಾಕುತ್ತೇವೆಂದು ರಸ್ತೆ ಕಿತ್ತು ಬರೋಬರಿ ಎರಡು ವರ್ಷಗಳೇ ಕಳೆದಿದ್ದರೂ, ಇಲ್ಲಿಯವರೆಗೂ ಡಾಂಬರು ಕಂಡಿಲ್ಲ. ಇರುವ ರಸ್ತೆ ಕಿತ್ತು ಮಣ್ಣಿನ ರಸ್ತೆ ಮಾಡಿ ಸಾರ್ವಜನಿಕರಿಗೆ, ವಾಹನ ಸವಾರರಿಗೆ ಸಂಕಷ್ಟ ತಂದೊಡ್ಡಿದ್ದಾರೆ. ಈಗ ಮಳೆಗಾಲವಾದ್ದರಿಂದ ಮಳೆ ನೀರು ಶೇಖರಣೆಯಾಗಿ ಎಲ್ಲಿ ಗುಂಡಿ ಎಂಬುದೇ ಕಾಣಸಿಗುತ್ತಿಲ್ಲ ಕೆಸರು ಗದ್ದೆಯಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಅಮಾಯಕರು ಎದ್ದು ಬಿದ್ದು ಹೋಗುವ ಸ್ಥಿತಿ ನಿರ್ಮಾಣವಾಗಿದೆ.

ಈಗಾಲದರೂ ಶಾಸಕರು, ನಗರಸಭೆ ಅಧಿಕಾರಿಗಳು ಇತ್ತ ಗಮನಹರಿಸಿ ರಸ್ತೆ ಡಾಂಬರೀಕರಣಗೊಳಿಸಿ ದುರಸ್ತಿಗೊಳಿಸುವ ಕಾರ್ಯಕ್ಕೆ ಮುಂದಾಗಬೇಕೆಂದು ವಾಹನ ಸವಾರರು, ಸಾರ್ವಜನಿಕರು ಪತ್ರಿಕೆಯ ಮೂಲಕ ಒತ್ತಾಯಿಸಿದ್ದಾರೆ.

Share this article