ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಬಿಡುಗಡೆಯಾಗದ ಅನುದಾನ

KannadaprabhaNewsNetwork |  
Published : Dec 29, 2025, 03:00 AM IST
ಪೊಟೋ27ಎಸ್.ಆರ್‌.ಎಸ್‌1 (ತಾಲೂಕಿನ ದೇವನಳ್ಳಿ ಗ್ರಾಪಂ ವ್ಯಾಪ್ತಿಯ ದೇವನಮನೆಯ ಶಿಥಿಲಗೊಂಡ ಅಂಗನವಾಡಿ ಕೇಂದ್ರ) | Kannada Prabha

ಸಾರಾಂಶ

ದೇವಮನೆ ಅಂಗನವಾಡಿ ಕೇಂದ್ರದ ಹಳೆಯ ಕಟ್ಟಡ ಶಿಥಿಲಗೊಂಡ ಪರಿಣಾಮ ಹೊಸ ಕಟ್ಟಡಕ್ಕೆ ₹20 ಲಕ್ಷ ಅನುದಾನ ಮಂಜೂರಿ ಆಗಿತ್ತು. ಆದರೆ, ನರೇಗಾ ಯೋಜನೆಯ ಹಣ ಬಿಡುಗಡೆಗೆ ತಡೆಯಾಗಿದ್ದರಿಂದ ಹೊಸ ಕಟ್ಟಡ ನಿರ್ಮಾಣ ಕನಸಾಗಿ ಉಳಿದಿದೆ.

ನರೇಗಾದ ₹8 ಲಕ್ಷ ಬಿಡುಗಡೆಯಾಗದಿರುವುದರಿಂದ ಆರಂಭವಾಗದ ಕಾಮಗಾರಿಪ್ರವೀಣ ಹೆಗಡೆ ಕರ್ಜಗಿ

ಕನ್ನಡಪ್ರಭ ವಾರ್ತೆ ಶಿರಸಿ

ದೇವಮನೆ ಅಂಗನವಾಡಿ ಕೇಂದ್ರದ ಹಳೆಯ ಕಟ್ಟಡ ಶಿಥಿಲಗೊಂಡ ಪರಿಣಾಮ ಹೊಸ ಕಟ್ಟಡಕ್ಕೆ ₹20 ಲಕ್ಷ ಅನುದಾನ ಮಂಜೂರಿ ಆಗಿತ್ತು. ಆದರೆ, ನರೇಗಾ ಯೋಜನೆಯ ಹಣ ಬಿಡುಗಡೆಗೆ ತಡೆಯಾಗಿದ್ದರಿಂದ ಹೊಸ ಕಟ್ಟಡ ನಿರ್ಮಾಣ ಕನಸಾಗಿ ಉಳಿದಿದೆ.

ತಾಲೂಕಿನ ಗಡಿ ಪ್ರದೇಶದಲ್ಲಿರುವ ದೇವನಳ್ಳಿ ಗ್ರಾಪಂ ವ್ಯಾಪ್ತಿಯ ದೇವನಮನೆ ಅಂಗನವಾಡಿ ಕೇಂದ್ರದಲ್ಲಿ ಸುಮಾರು 7 ಮಕ್ಕಳಿದ್ದು, ಕಟ್ಟಡ ಸಂಪೂರ್ಣ ಜೀರ್ಣಾವಸ್ಥೆ ತಲುಪಿದ ಪರಿಣಾಮ ಬಾಡಿಗೆ ಕಟ್ಟಡದಲ್ಲಿ ಸದ್ಯ ಕಾರ್ಯನಿರ್ವಹಣೆ ಮಾಡುತ್ತಿದೆ. ಹೊಸ ಕಟ್ಟಡ ನಿರ್ಮಾಣಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ₹12 ಲಕ್ಷ ಹಾಗೂ ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯಲ್ಲಿ ₹8 ಲಕ್ಷ ಅನುದಾನ ಮೀಸಲಿಡಲಾಗಿತ್ತು. ಕಳೆದ ಎಪ್ರಿಲ್‌ ತಿಂಗಳಿನಲ್ಲಿ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿತ್ತು. ನರೇಗಾದ ಅನುದಾನ ಬಿಡುಗಡೆಗೆ ಸಮಸ್ಯೆಯಾಗಿರುವುದರಿಂದ ಕಟ್ಟಡ ನಿರ್ಮಾಣ ವಿಳಂಬಗೊಂಡಿದೆ. ನರೇಗಾದಲ್ಲಿರುವ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸಲು ಅಧಿಕಾರಿಗಳು ಇಚ್ಛಾಶಕ್ತಿ ವಹಿಸಿ, ಈ ಭಾಗದ ಹಲವು ದಶಕದ ಬೇಡಿಕೆಯಾದ ಅಂಗನವಾಡಿಗೆ ನೂತನ ಕಟ್ಟಡ ಕಾಮಗಾರಿ ಶೀಘ್ರ ಆರಂಭಿಸಬೇಕಿದೆ.

ದೇವನಮನೆ ಅಂಗನವಾಡಿ ಕಟ್ಟಡಕ್ಕೆ ಕಳೆದ ಎಪ್ರಿಲ್‌ ತಿಂಗಳಿನಲ್ಲಿ ಶಾಸಕರು ಸ್ವತಃ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿದ್ದರು. ಗಣಪತಿ ನಾಯ್ಕ ಎಂಬುವವರಿಗೆ ಟೆಂಡರ್‌ ಆಗಿದ್ದು, ಇಲ್ಲಿ ವರೆಗೂ ಕಟ್ಟಡ ಕಾಮಗಾರಿ ಮಾತ್ರ ಪ್ರಾರಂಭವಾಗಿಲ್ಲ. ಕಾಮಗಾರಿ ಯಾಕೆ ವಿಳಂಬವಾಗುತ್ತಿದೆ ಎಂದು ಎಂಜೀನಿಯರ್ ಬಸವರಾಜ ಬಳ್ಳಾರಿ ಅವರನ್ನು ಪ್ರಶ್ನಿಸಿದರೆ ಅವರ ಬಳಿ ಸಮರ್ಪಕ ಉತ್ತರವಿಲ್ಲ. ಅಂಗನವಾಡಿ ನಡೆಸಲು ಕಟ್ಟಡ ಇಲ್ಲದೆ ಗ್ರಾಮಸ್ಥರ ಮನೆಯಲ್ಲಿ ನಡೆಸಲಾಗುತ್ತಿದೆ. ಆದಷ್ಟು ಬೇಗ ಅಂಗನವಾಡಿ ಕಟ್ಟಡದ ಕೆಲಸ ಪ್ರಾರಂಬವಾಗಬೇಕು ಎಂದು ದೇವನಳ್ಳಿ ಗ್ರಾಪಂ ಸದಸ್ಯ ನಾರಾಯಣ ಹೆಡಗೆ ಆಗ್ರಹಿಸಿದ್ದಾರೆ.

ನರೇಗಾದ ₹8 ಲಕ್ಷ ಅನುದಾನದಲ್ಲಿ ಅಡಿಪಾಯ ನಿರ್ಮಾಣವಾಗಬೇಕು. ಗ್ರಾಪಂನಿಂದ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಹಣ ಬಿಡುಗಡೆಗೆ ಬೆಂಗಳೂರು ಮಟ್ಟದಲ್ಲಿ ಸಮಸ್ಯೆ ಬಗೆಹರಿಯಬೇಕಿದೆ. ಇಲಾಖೆಯ ₹12 ಲಕ್ಷ ಅನುದಾನ ಮೀಸಲಿಡಲಾಗಿದ್ದು, ನರೇಗಾ ಸಮಸ್ಯೆ ನಿವಾರಣೆಯಾದರೆ ತಕ್ಷಣ ಕಾಮಗಾರಿ ಆರಂಭಗೊಳ್ಳುತ್ತದೆ. ತಾಪಂ ಮತ್ತು ಜಿಪಂನಿಂದ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದಲೂ ಬೇಗನೆ ಹಣ ಬಿಡುಗಡೆಗೆ ಪತ್ರ ಬರೆಯಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಯೋಜನಾಧಿಕಾರಿ ನಂದಕುಮಾರ ಮಾಹಿತಿ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುಸ್ತಕ ಸಂಸ್ಕೃತಿ ಸಂವೇದನೆಗೆ ಸಂಬಂಧಿಸಿದ್ದು: ಬರಗೂರು
ಜಿಬಿಎ ಚುನಾವಣೆಗೆ ಕಾಂಗ್ರೆಸ್‌ ಅರ್ಜಿಗೆ ₹50 ಸಾವಿರ!