ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ಕಳೆದ ನಾಲ್ಕು ದಿನಗಳಿಂದ ಪುಷ್ಯ ಮಳೆ ಈ ಭಾಗದಲ್ಲಿ ಭರ್ಜರಿಯಾಗಿ ಬರುತ್ತಿದೆ. ಶನಿವಾರ ತನ್ನ ಅಬ್ಬರ ಮುಂದುವರಿಸಿದೆ. ಶನಿವಾರ ಇಡೀ ದಿನ ಎಡೆಬಿಡದೆ ಧಾರಾಕಾರ ಮಳೆ ಸುರಿದು ಜನರು ಮನೆಯಿಂದ ಆಚೆ ಬರಲು ಯೋಚಿಸುವಂತಾಗಿತ್ತು. ನಿರಂತರ ಗಾಳಿ, ಮಳೆಯಿಂದ ಅಂಗನವಾಡಿ, ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಿಸಿದ್ದು, ಮಳೆಯ ಪ್ರಮಾಣ ಹೆಚ್ಚಾದ ಕಾರಣ ಕಾಫಿ ತೋಟಗಳಲ್ಲೂ ಸಹ ಹಲವು ಕಡೆಗಳಲ್ಲಿ ಕಾರ್ಮಿಕರಿಗೆ ರಜೆ ಘೋಷಣೆ ಮಾಡಲಾಗಿತ್ತು.
ಬಾಳೆಹೊನ್ನೂರು ಭಾಗದಲ್ಲಿ ಮಾತ್ರವಲ್ಲದೆ ಭದ್ರಾ ನದಿ ಉಗಮ ಸ್ಥಾನ ಗಂಗಾಮೂಲ, ಕುದುರೆಮುಖ, ಕಳಸ, ಬಾಳೆಹೊಳೆ, ಮಾಗುಂಡಿ ಮುಂತಾದ ಕಡೆಗಳಲ್ಲಿ ಸಹ ನಿರಂತರ ಮಳೆಯಾಗುತ್ತಿರುವ ಕಾರಣ ಭದ್ರಾನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ರೌದ್ರಾವತಾರ ತಾಳಿ ಹರಿಯುತ್ತಿರುವ ಭದ್ರಾನದಿಯಲ್ಲಿ ಬಾರೀ ಪ್ರಮಾಣದಲ್ಲಿ ಕಸಕಡ್ಡಿ ಗಳೊಂದಿಗೆ ಬೃಹತ್ ಗಾತ್ರದ ಒಣಗಿದ ಮರಗಳು ತೇಲಿ ಬರುತ್ತಿದೆ.ಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿದಂತೆ ಪ್ರವಾಹದ ಆತಂಕ ಎದುರಾಗಿದೆ. ನದಿಪಾತ್ರದ ನಿವಾಸಿಗಳಿಗೆ ಎಚ್ಚರಿಕೆ ವಹಿಸುವಂತೆ ಕಂದಾಯ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ. ನದಿಯಲ್ಲಿ ನೀರಿನ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ನದಿ ದಡದ ಕೆಲವು ತೋಟ, ಗದ್ದೆಗಳಿಗೆ ಸ್ವಲ್ಪ ಪ್ರಮಾಣದಲ್ಲಿ ಪ್ರವಾಹದ ನೀರು ನುಗ್ಗಿದೆ.
ಬಾಳೆಹೊನ್ನೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಭದ್ರಾನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.