ಸರ್ಕಾರಿ ಆಸ್ಪತ್ರೆಯ ನೂತನ ಕಟ್ಟಡ ಶಂಕುಸ್ಥಾಪನೆ ಸಮಾರಂಭದ ವೇದಿಕೆಯಲ್ಲಿ ಮಾಜಿ ಎಂಎಸ್‌ಸಿ ವಿಜಯಸಿಂಗ್‌ ಅವರ ವಿರುದ್ಧ ಬಹಿರಂಗವಾಗಿ ಅಸಭ್ಯ ಪದಬಳಕೆ, ವೈಯಕ್ತಿಕ ನಿಂದನೆ ಹಾಗೂ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ಬಸವಕಲ್ಯಾಣದ ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ ನಗರ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬಸವಕಲ್ಯಾಣ

ಸರ್ಕಾರಿ ಆಸ್ಪತ್ರೆಯ ನೂತನ ಕಟ್ಟಡ ಶಂಕುಸ್ಥಾಪನೆ ಸಮಾರಂಭದ ವೇದಿಕೆಯಲ್ಲಿ ಮಾಜಿ ಎಂಎಸ್‌ಸಿ ವಿಜಯಸಿಂಗ್‌ ಅವರ ವಿರುದ್ಧ ಬಹಿರಂಗವಾಗಿ ಅಸಭ್ಯ ಪದಬಳಕೆ, ವೈಯಕ್ತಿಕ ನಿಂದನೆ ಹಾಗೂ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ಬಸವಕಲ್ಯಾಣದ ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ ನಗರ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಲಾಗಿದೆ.

ಕೆಡಿಪಿ ಸದಸ್ಯ ಹಾಗೂ ಕಾಂಗ್ರೆಸ್‌ ಮುಖಂಡ ಶಿವಕುಮಾರ ಶಾಂತಪ್ಪ ಶೆಟಗಾರ ಎಂಬುವವರು ಶಾಸಕರ ವಿರುದ್ಧ ಈ ದೂರು ಸಲ್ಲಿಸಿದ್ದು, ಸಾರ್ವಜನಿಕ ಸಮಾರಂಭದಲ್ಲಿ ಜನಪ್ರತಿನಿಧಿಯೊಬ್ಬರು ನಡೆದುಕೊಂಡ ರೀತಿಯು ಸಮಾಜದ ಶಾಂತಿ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ಸೆ.16ರಂದು ಬಸವಕಲ್ಯಾಣದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ 250 ಹಾಸಿಗೆಗಳ ನೂತನ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಶರಣು ಸಲಗರ, ಕಾರ್ಯಕ್ರಮದ ಮುಖ್ಯ ವಿಷಯವನ್ನು ಬಿಟ್ಟು, ಆರೋಗ್ಯ ಸಚಿವ ಯು.ಟಿ. ಖಾದರ್‌ ಅವರ ಭಾವಚಿತ್ರವಿಲ್ಲದ ಫ್ಲೆಕ್ಸ್‌ ತೆರವುಗೊಳಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಎಂಎಲ್‌ಸಿ ವಿಜಯಸಿಂಗ್‌ ಅವರ ವಿರುದ್ಧ ತೀವ್ರ ತರಹದ ವೈಯಕ್ತಿಕ ಮತ್ತು ರಾಜಕೀಯ ಹೇಳಿಕೆಗಳನ್ನು ನೀಡಲು ಪ್ರಾರಂಭಿಸಿದರು ಎಂದು ಆರೋಪಿಸಲಾಗಿದೆ.

ಶಾಸಕರು ಅತ್ಯಂತ ಕೀಳುಮಟ್ಟದ ಹಾಗೂ ಸಾರ್ವಜನಿಕವಾಗಿ ಬಳಸಬಾರದಂತಹ ಭಾಷೆಯನ್ನು ಬಳಸಿ ನಿಂದಿಸಿದ್ದಾರೆ. ಅಲ್ಲದೆ ವಿಜಯಸಿಂಗ್‌ ಹಾಗೂ ಅವರ ಕುಟುಂಬದ ಗೌರವಕ್ಕೆ ಧಕ್ಕೆ ತರುವ ನಿಟ್ಟಿನಲ್ಲಿ ಸುಳ್ಳು ಮತ್ತು ಆಧಾರರಹಿತ ಆರೋಪಗಳನ್ನು ಮಾಡಿ, ಜಾತೀಯ ವಿಚಾರಗಳನ್ನು ಪ್ರಸ್ತಾಪಿಸುವ ಮೂಲಕ ಸಮಾಜದಲ್ಲಿ ಅಶಾಂತಿ ಹಾಗೂ ದ್ವೇಷ ವಾತಾವರಣ ಸೃಷ್ಟಿಸಲು ಯತ್ನಿಸಿದ್ದಾರೆ. ಸಾರ್ವಜನಿಕರ ಎದುರಲ್ಲೇ ಮಾಜಿ ಎಂಎಸ್‌ಸಿಯವರಿಗೆ ಬಹಿರಂಗ ಸವಾಲು ಹಾಕಿದ್ದಲ್ಲದೆ ಜೀವ ಬೆದರಿಕೆಯೊಡ್ಡಿದ್ದು, ಬೆಂಬಲಿತ ಕಾರ್ಯಕರ್ತರ ನಡುವೆ ಗಲಾಟೆ ಸೃಷ್ಟಿಯಾಗುವ ಆತಂಕಕಾರಿ ವಾತಾವರಣ ನಿರ್ಮಾಣವಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಪೂರ್ವಾನುಮತಿ ಬೇಕು :

ದೂರನ್ನು ಪರಿಶೀಲಿಸಿದ ಬಸವಕಲ್ಯಾಣ ನಗರ ಠಾಣೆಯ ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್‌ ಅವರು, ಪ್ರಕರಣವು ಅಸಂಜ್ಞೆಯ ಅಪರಾಧದ (Non-Cognizable Report - NCR) ವ್ಯಾಪ್ತಿಗೆ ಬರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಆರೋಪಿತರು ಹಾಲಿ ಶಾಸಕರಾಗಿರುವುದರಿಂದ ಅವರ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ (XLI Addl. CJM Court, Bengaluru) ಪೂರ್ವಾನುಮತಿ ಪಡೆದುಕೊಂಡು ಬರುವಂತೆ ದೂರುದಾರರಿಗೆ ಹಿಂಬರಹ ನೀಡಿ ಕಳುಹಿಸಿದ್ದಾರೆ. ಈ ಸಂದರ್ಭದಲ್ಲಿ ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ನೀಲಕಂಠ ರಾಠೋಡ, ರವಿ ಗಾಯವಾಡ, ತಹಸೀನ್‌ ಅಲಿ ಜಮಾದಾರ, ಸುಧಾಕರ ಗುರಜರ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.