ಕೆ.ಎಂ.ದೊಡ್ಡಿ:
ಗ್ರಾಮದ ನಾಗರಕಲ್ಲಿನ ಅಂಗನವಾಡಿ ಕೇಂದ್ರದ ಬಳಿ ಇದ್ದ ಅರಳಿ ಮರದ ರೆಂಬೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಿಗಳು ಕುಳಿತುಕೊಳ್ಳುತ್ತಿದ್ದ ಪರಿಣಾಮ ಪಕ್ಷಿಗಳ ಹಿಕ್ಕೆ, ಇತರೆ ಕಲುಷಿತ ವಸ್ತುಗಳಿಂದಾಗಿ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಅನಾರೋಗ್ಯ ಉಂಟಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದರು.
ಅಂಗನವಾಡಿ ಕೇಂದ್ರಕ್ಕೆ ಸುಮಾರು 25 ಮಕ್ಕಳು ಆಗಮಿಸುತ್ತಿದ್ದರು. ಮರದ ರೆಂಬೆಗಳಿಂದ ಪಕ್ಷಿಗಳ ಹಿಕ್ಕೆ ಹಾಗೂ ಇತರ ಕಲುಷಿತ ವಸ್ತುಗಳು ಬೀಳುತ್ತಿದ್ದವು. ಇದರಿಂದ ಮಕ್ಕಳಿಗೆ ಜ್ವರ, ಕೆಮ್ಮು ಸೇರಿದಂತೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿತು. ಮಕ್ಕಳ ಆರೋಗ್ಯದ ಬಗ್ಗೆ ಆತಂಕಗೊಂಡ ಪೋಷಕರು ಒಂದು ವಾರದ ಕಾಲ ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ಕಳುಹಿಸಲಿಲ್ಲ.ಅಂಗನವಾಡಿ ಕೇಂದ್ರದ ಬಳಿ ಸ್ವಚ್ಛತೆ ಕಾಪಾಡಬೇಕು. ಮರದ ರೆಂಬೆಗಳನ್ನು ತೆರವುಗೊಳಿಸಿದ ಬಳಿಕವೇ ಮಕ್ಕಳನ್ನು ಕಳುಹಿಸುವುದಾಗಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ರೇಣುಕಾ ಅವರು ಗ್ರಾಪಂ ಪಿಡಿಒ ಹರೀಶ್ ಅವರಿಗೆ ಮನವಿ ಸಲ್ಲಿಸಿದ್ದರು.
ಮರಗಳ ಮೇಲೆ ಪಕ್ಷಿಗಳು ಕುಳಿತು ಕಲುಷಿತ ವಾತಾವರಣ ಉಂಟಾಗಿ ಅಂಗನವಾಡಿ ಮಕ್ಕಳು ಹಾಗೂ ಅಕ್ಕಪಕ್ಕದ ನಿವಾಸಿಗಳಿಗೆ ಆರೋಗ್ಯ ಸಮಸ್ಯೆ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುನ್ನೆಚ್ಚರಿಕೆ ಕ್ರಮವಾಗಿ ಮಕ್ಕಳ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಮರದ ರೆಂಬೆಗಳನ್ನು ತೆರವುಗೊಳಿಸಲಾಗಿದೆ ಎಂದು ಪಿಡಿಒ ಹರೀಶ್ ತಿಳಿಸಿದರು.