ಕೊಪ್ಪಳ: ಅಳವಂಡಿ–ಭೈರಾಪುರ ರಸ್ತೆಗೆ ಅವೈಜ್ಞಾನಿಕ ಸೇತುವೆ ನಿರ್ಮಿಸಿದ್ದರಿಂದ ಹಳ್ಳದ ನೀರು ರೈತರ ಜಮೀನುಗಳಿಗೆ ನುಗ್ಗಿ ಅಪಾರ ಹಾನಿ ಸಂಭವಿಸಿದೆ. ಭಾರಿ ಮಳೆಯಿಂದ ಹಳ್ಳದಲ್ಲಿ ನೀರಿನ ಹರಿವು ಹೆಚ್ಚಾದ ಪರಿಣಾಮ ಈ ಘಟನೆ ನಡೆದಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ನೀರಿನ ರಭಸಕ್ಕೆ ರೈತ ಚೌಡಪ್ಪ ಅವರ ಕಬ್ಬಿನ ಗದ್ದೆಗೆ ನೀರು ನುಗ್ಗಿದ್ದು, ಜಮೀನಿನ ಮಣ್ಣು ಕೊಚ್ಚಿಹೋಗುವ ಜತೆಗೆ ಕಬ್ಬಿನ ಬೆಳೆಯೂ ಹಾನಿಗೊಳಗಾಗಿದೆ. ಇದರಿಂದ ಸುಮಾರು ₹25ರಿಂದ ₹30 ಲಕ್ಷ ನಷ್ಟವಾಗಿದೆ ಎಂದು ಚೌಡಪ್ಪ ತಿಳಿಸಿದ್ದಾರೆ.
ಹಲವು ಬಾರಿ ಮನವಿ, ಕ್ರಮವಿಲ್ಲ: ಸೇತುವೆ ನಿರ್ಮಾಣದಲ್ಲಿನ ಸಮಸ್ಯೆಯಿಂದ ಈ ಹಿಂದೆಯೂ ಇದೇ ರೀತಿಯ ಘಟನೆಗಳು ಸಂಭವಿಸಿವೆ. ಈ ಕುರಿತು ಸ್ಥಳೀಯ ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ಹಲವು ಬಾರಿ ತಂದಿದ್ದರೂ ಯಾವುದೇ ಶಾಶ್ವತ ಪರಿಹಾರ ಕಲ್ಪಿಸಿಲ್ಲ ಎಂದು ಚೌಡಪ್ಪ ಆರೋಪಿಸಿದ್ದಾರೆ.ಮಳೆಯಿಂದ ಉಂಟಾಗಿರುವ ಬೆಳೆ ಹಾಗೂ ಜಮೀನಿನ ಹಾನಿಯ ಕುರಿತು ಅಧಿಕಾರಿಗಳು ತಕ್ಷಣ ಸಮೀಕ್ಷೆ ನಡೆಸಿ, ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.