ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿತ ಪ್ರಕರಣ ಸಂಬಂಧ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರು ಅಧಿಕಾರಿಗಳ ವಿಚಾರಣೆ ನಡೆಸಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದಲ್ಲಿ ಇತ್ತೀಚೆಗೆ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿದು 7 ಮಂದಿ ದುರ್ಮರಣ ಹೊಂದಿದ ಘಟನೆಗೆ ಕಾಂಪೌಂಡ್ ಬಳಿ ಭೂಮಟ್ಟದಿಂದ 1.8 ಮೀಟರ್ ಎತ್ತರಕ್ಕೆ ಅವೈಜ್ಞಾನಿಕವಾಗಿ ಮಣ್ಣು ತುಂಬಿಸಿರುವುದು, 2.4 ಮೀಟರ್ ಬದಲು 2.8 ಮೀಟರ್ ಎತ್ತರಕ್ಕೆ ಕಾಂಪೌಂಡ್ ನಿರ್ಮಾಣ, ಕಾಂಪೌಂಡ್‌ನಲ್ಲಿ ನೀರು ಹೊರಬರಲು ವೀಪ್ ಹೋಲ್ಸ್‌ಗಳು(ರಂಧ್ರ) ಇಲ್ಲದಿರುವುದು, ಮಳೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಇಲ್ಲದಿರುವುದೇ ಪ್ರಮುಖ ಕಾರಣ ಎಂಬುದು ಲೋಕಾಯುಕ್ತ ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಘಟನೆ ಸಂಬಂಧ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರು ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಸೇರಿದಂತೆ ಸಂಬಂಧಿತ ಅಧಿಕಾರಿಗಳ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಲು ಸೂಚಿಸಿದ್ದರು. ಈ ಸಂಬಂಧ ಲೋಕಾಯುಕ್ತರ ಆದೇಶದಂತೆ ತನಿಖೆ ನಡೆಸಿದ ಲೋಕಾಯುಕ್ತ ಎಸ್ಪಿ ಅವರ ವರದಿಯಲ್ಲಿ ಘಟನೆಗೆ ಹಲವು ಕಾರಣಗಳನ್ನು ಪಟ್ಟಿ ಮಾಡಲಾಗಿದೆ.
2008-09ರಲ್ಲಿ ಲಾರಿ ಕಾಂಪೌಂಡ್‌ಗೆ ಡಿಕ್ಕಿ ಹೊಡೆದು ಕಾಂಪೌಂಡ್‌ನ ಕೆಲ ಭಾಗ ಒಡೆದಿತ್ತು. ಈ ಭಾಗವನ್ನು ಸಿಮೆಂಟ್ ಬ್ಲಾಕ್ ಬಳಸಿ ಮರು ನಿರ್ಮಿಸಲಾಗಿತ್ತು. ಈ ಕಾಂಪೌಂಡ್‌ನ ಪಕ್ಕದಲ್ಲಿ ಗಿಡಗಂಟಿಗಳು ಬೆಳೆದಿವೆ. ಕಟ್ಟಡಗಳ ಅವಶೇಷಗಳನ್ನು ತುಂಬಿಸಲಾಗಿದೆ. ಬೌರಿಂಗ್ ಆಸ್ಪತ್ರೆಯಲ್ಲಿ ಖಾಯಂ ಸಿವಿಲ್ ಇಂಜಿನಿಯರ್ ಹುದ್ದೆ ಇಲ್ಲ. ಕಾಂಪೌಂಡ್‌ಗೆ ಹೊಂದಿಕೊಂಡಿರುವ ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮಾಡಿದ್ದ ವ್ಯಾಪಾರಿಗಳನ್ನು ತೆರವುಗೊಳಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರದ(ಜಿಬಿಎ) ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಪ್ರಕರಣ:
ಪ್ರಕರಣ ಸಂಬಂಧ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ವಿಚಾರಣೆ ನಡೆಸಿದರು. ಈ ವೇಳೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಘಟನೆ ಕುರಿತು ವರದಿ ಸಲ್ಲಿಸಿದರು. ಘಟನೆಗೆ ಕಾರಣರಾದ ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಸಂಬಂಧಿತ ಇಂಜಿನಿಯರ್‌ಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಅವರಿಂದ ಉತ್ತರ ಪಡೆದು ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅವರು ವಿಚಾರಣೆ ಸಂದರ್ಭದಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಅವರಿಗೆ ವಿವರವಾದ ವರದಿ ಸಲ್ಲಿಸಿದರು. ಹೈಕೋರ್ಟ್ ಆದೇಶದಂತೆ ಒಂದು ತಿಂಗಳೊಳಗೆ ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿಯನ್ನು ನೀಡುವುದಾಗಿ ಹೇಳಿದರು.
ಬಳಿಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರು ಇಂತಹ ಘಟನೆಗಳು ಮರುಕಳಿಸಿದಂತೆ ಎಚ್ಚರ ವಹಿಸಬೇಕು. ಬೆಂಗಳೂರಿನ ನಗರದಾದ್ಯಂತ ತೊಂದರೆ ಉಂಟು ಮಾಡಬಹುದಾದ ಕಟ್ಟಡಗಳು, ಕಾಂಪೌಂಡ್‌ಗಳನ್ನು ಗುರುತಿಸಿ, ಅವುಗಳ ಬಗ್ಗೆ ಗಮನ ಹರಿಸುವಂತೆ ಸೂಚಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.