ಬೆಳೆವಿಮೆ ಅವೈಜ್ಞಾನಿಕ ನಿರ್ವಹಣೆಯಿಂದ ಬೆಳೆಗಾರರಿಗೆ ಅನ್ಯಾಯ

KannadaprabhaNewsNetwork |  
Published : Dec 10, 2025, 12:15 AM IST
ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು | Kannada Prabha

ಸಾರಾಂಶ

ಅಡಕೆ ಬೆಳೆಗಾರರಿಗೆ ವೈಜ್ಞಾನಿಕವಾಗಿ ವಿಮಾ ಪರಿಹಾರ ಮೊತ್ತವನ್ನು ಪಾವತಿಸುವಂತೆ ಒತ್ತಾಯಿಸಿ ಮಂಗಳವಾರ ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ವತಿಯಿಂದ ಉಪವಿಭಾಗಾಧಿಕಾರಿಗಳ ಕಚೇರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಸಾಗರ

ಅಡಕೆ ಬೆಳೆಗಾರರಿಗೆ ವೈಜ್ಞಾನಿಕವಾಗಿ ವಿಮಾ ಪರಿಹಾರ ಮೊತ್ತವನ್ನು ಪಾವತಿಸುವಂತೆ ಒತ್ತಾಯಿಸಿ ಮಂಗಳವಾರ ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ವತಿಯಿಂದ ಉಪವಿಭಾಗಾಧಿಕಾರಿಗಳ ಕಚೇರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ವೈಜ್ಞಾನಿಕವಾಗಿದ್ದರೂ ಅವೈಜ್ಞಾನಿಕ ನಿರ್ವಹಣೆಯಿಂದ ಬೆಳಗಾರರಿಗೆ ಅನ್ಯಾಯವಾಗುತ್ತಿದೆ. ಅಧಿಕಾರಿಗಳು ಕಂಪನಿಯೊಂದಿಗೆ ಶಾಮೀಲಾಗಿ ವಿಮಾ ಪರಿಹಾರ ನೀಡುವಲ್ಲಿ ತಾರತಮ್ಯ ಮಾಡುತ್ತಿದ್ದಾರೆ. ೨೦೨೨-೨೩ರಲ್ಲಿ ಕಡಿಮೆ ಮಳೆಯಾಗಿದ್ದರೂ ಸಮಾಧಾನಕರ ರೀತಿಯಲ್ಲಿ ವಿಮಾ ಪರಿಹಾರ ಬಂದಿತ್ತು. ಆದರೆ ೨೦೨೩-೨೪ರಲ್ಲಿ ಅತಿಹೆಚ್ಚು ಮಳೆಯಾಗಿ ಅಡಕೆ ಫಸಲು ಸಂಪೂರ್ಣ ನಾಶವಾಗಿದ್ದರೂ ಅತ್ಯಲ್ಪ ಪರಿಹಾರ ಬಂದಿದೆ. ಅದರಲ್ಲಿಯೂ ಎಲ್ಲ ಪ್ರದೇಶಗಳಿಗೂ ಒಂದೇ ರೀತಿಯಾದ ಪರಿಹಾರ ಸಿಕ್ಕಿಲ್ಲ. ಸರ್ಕಾರಕ್ಕೆ ಇಚ್ಚಾಶಕ್ತಿ ಇದ್ದಿದ್ದರೆ ಬೆಳೆಗಾರರಿಗೆ ಸರಿಯಾದ ಪರಿಹಾರ ಸಿಗುತ್ತಿತ್ತು. ಜನಪ್ರತಿನಿಧಿಗಳ ಜನಪರವಾದ ಮಾತನ್ನು ಅಧಿಕಾರಿಗಳು ಕೇಳುತ್ತಿಲ್ಲ. ತಮ್ಮ ಮೂಗಿನ ನೇರಕ್ಕೆ ಕೆಲಸ ಮಾಡಿ ಬೆಳೆಗಾರರಿಗೆ ಅನ್ಯಾಯ ಮಾಡುತ್ತಿರುವ ಅಧಿಕಾರಿಗಳ ಸಂಬಳವನ್ನು ಕಡಿತ ಮಾಡಬೇಕು. ಮಳೆಮಾಪನ ಯಂತ್ರಗಳು ಹಾಳಾಗಿರುವ ಬಗ್ಗೆ ಹಿಂದೆಯೇ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ವಿಮಾ ಪರಿಹಾರ ನಿಗದಿಗೆ ಮಳೆಮಾಪನದ ಬದಲು ಉಪಗ್ರಹಗಳಿಂದ ಮಳೆ ಪ್ರಮಾಣದ ಮಾಹಿತಿ ಪಡೆದು ವಿಮಾ ಪರಿಹಾರವನ್ನು ನಿಗದಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದ ಅಧಿಕಾರಿಗಳು ಈಗ ಮೋಸ ಮಾಡಿದ್ದಾರೆ. ವಿಮಾ ಕಂಪನಿ ಮೋಸದ ಜಾಲವಾಗಿದ್ದು, ಇದರಿಂದ ಬೆಳೆಗಾರರಿಗೆ ನ್ಯಾಯ ಸಿಗುತ್ತದೆ ಎನ್ನುವ ಭರವಸೆ ಇಲ್ಲ ಎನ್ನುವ ಮಾತುಗಳು ಕೇಳಿಬಂತು.

ಬೆಳೆಗಾರರ ಸಂಘದ ಅಧ್ಯಕ್ಷ ವ.ಶಂ.ರಾಮಚಂದ್ರ ಭಟ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಆಪ್ಸ್ಕೋಸ್ ಅಧ್ಯಕ್ಷ ಇಂದೂದರ ಗೌಡ, ತೋಟಗರ್ಸ್ ಅಧ್ಯಕ್ಷ ಕೆ.ಸಿ.ದೇವಪ್ಪ, ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಸಿರಿವಾಳ, ಎಪಿಎಂಸಿ ಮಾಜಿ ಅಧ್ಯಕ್ಷ ಚೇತನರಾಜ್ ಕಣ್ಣೂರು, ಲಕ್ಮ್ಷೀನಾರಾಯಣ ಕೊಳಕಿ, ಅ.ಪು.ನಾರಾಯಣಪ್ಪ, ಎಸ್.ವಿ.ಹಿತಕರ ಜೈನ್ ಮೊದಲಾದವರು ಮಾತನಾಡಿ, ಅಧಿಕಾರಿಗಳು ಹಾಗೂ ವಿಮಾ ಕಂಪನಿಯಿಂದ ಅಡಕೆ ಬೆಳೆಗಾರರಿಗೆ ಆಗಿರುವ ಅನ್ಯಾಯವನ್ನು ತೀವ್ರವಾಗಿ ಖಂಡಿಸಿದರು. ಕೂಡಲೆ ವೈಜ್ಞಾನಿಕವಾಗಿ ವಿಮಾ ಪರಿಹಾರ ಮೊತ್ತವನ್ನು ಪಾವತಿಸದಿದ್ದರೆ ಉಗ್ರವಾದ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು. ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಆಗಮಿಸಿ ತಮ್ಮ ಅಹವಾಲು ಕೇಳಿ ಅನ್ಯಾಯ ಸರಿಪಡಿಸುವ ಭರವಸೆ ನೀಡಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಅಂತಿಮವಾಗಿ ಡಿಸೆಂಬರ್ ೨೬ರೊಳಗೆ ಸರಿಯಾದ ರೀತಿಯಲ್ಲಿ ವಿಮಾ ಪರಿಹಾರ ನೀಡಬೇಕು. ಈ ನಡುವೆ ಕಾನೂನು ಹೋರಾಟವನ್ನು ನಡೆಸಬೇಕೆಂದು ತೀರ್ಮಾನಿಸಿ ಪ್ರತಿಭಟನೆಯನ್ನು ಕೈಬಿಡಲಾಯಿತು. ಬೆಳೆಗಾರರ ಸಂಘದ ಕಾರ್ಯದರ್ಶಿ ರಾಜೇಂದ್ರ ಖಂಡಿಕಾ, ರವಿಕುಮಾರ್ ಎಚ್.ಎಂ., ಆನೆಗುಳಿ ಸುಬ್ರಾವ್, ದೇವು ಆಲಳ್ಳಿ, ಮಂಜಪ್ಪ ಎಂ.ಬಿ., ಹೊಯ್ಸಳ ಗಣಪತಿಯಪ್ಪ, ಆರ್.ಎಸ್.ಗಿರಿ, ದಿನೇಶ್ ಬರದವಳ್ಳಿ, ರಮೇಶ್ ಕೆಳದಿ, ಎಲ್.ಟಿ.ತಿಮ್ಮಪ್ಪ, ರಾಜಶೇಖರ್ ಇನ್ನಿತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಸಿದ ಕರ್ನಾಟಕ ಕ್ರಿಕೆಟ್‌ ಗುಣಮಟ್ಟ - ಈ ಸಲ 7 ಟಿ20ಯಲ್ಲಿ ಗೆದ್ದಿದ್ದು ಕೇವಲ 2
ಬುರುಡೆ ಕೇಸ್‌ ಹಿಂದೆ ಅರ್ಬನ್‌ ನಕ್ಸಲ್‌ : ಬಿಜೆಪಿ