ಅವೈಜ್ಞಾನಿಕ ರೋಡ್ ಹಂಪ್ಸ್‌ಗಳಿಂದ ಅಪಘಾತಕ್ಕೆ ಆಹ್ವಾನ

KannadaprabhaNewsNetwork |  
Published : Jun 03, 2024, 12:33 AM IST
ತಿಪಟೂರು : ಅವೈಜ್ಞಾನಿಕ ರೋಡ್ ಹಂಪ್ಸ್‌ಗಳು ಅಪಘಾತಕ್ಕೆ ಕಾರಣ, ಸವಾರರ ಆಕ್ರೋಶ | Kannada Prabha

ಸಾರಾಂಶ

ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಅಂಬೇಡ್ಕರ್ ವೃತ್ತ (ಐ.ಬಿ ಸರ್ಕಲ್), ಬಾಲಕಿಯರ ಸರ್ಕಾರಿ ಕಾಲೇಜು, ಸಾಯಿಬಾಬ ರಸ್ತೆ ಸೇರಿದಂತೆ ಇತರೆ ಕಡೆಗಳಲ್ಲಿ, ಒಂದೊಂದು ಹಂಪ್ಸ್ ಹಾಕುವ ಬದಲಾಗಿ ಒಂದೇ ಸ್ಥಳದಲ್ಲಿ ನಾಲ್ಕಕ್ಕೂ ಹೆಚ್ಚು ಹಂಪ್ಸ್‌ ಹಾಕಲಾಗಿದೆ.

ಕನ್ನಡಪ್ರಭ ವಾರ್ತೆ ತಿಪಟೂರು

ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಅಂಬೇಡ್ಕರ್ ವೃತ್ತ (ಐ.ಬಿ ಸರ್ಕಲ್), ಬಾಲಕಿಯರ ಸರ್ಕಾರಿ ಕಾಲೇಜು, ಸಾಯಿಬಾಬ ರಸ್ತೆ ಸೇರಿದಂತೆ ಇತರೆ ಕಡೆಗಳಲ್ಲಿ, ಒಂದೊಂದು ಹಂಪ್ಸ್ ಹಾಕುವ ಬದಲಾಗಿ ಒಂದೇ ಸ್ಥಳದಲ್ಲಿ ನಾಲ್ಕಕ್ಕೂ ಹೆಚ್ಚು ಹಂಪ್ಸ್‌ ಹಾಕಲಾಗಿದೆ. ಇದರಿಂದ ಅಪಘಾತಗಳಾಗುತ್ತಿವೆ. ಒಂದೊಂದೇ ಹಂಪ್ಸ್‌ ಹಾಕಬೇಕೆಂದು ವಾಹನ ಸವಾರ, ಸಾರ್ವಜನಿಕರು ಆಗ್ರಹಿಸಿದ್ದಾರೆ. ನಗರ ಒಳಗಡೆಯೇ ಬೆಂಗಳೂರು-ಹೊನ್ನಾವರ ಹೆದ್ದಾರಿ ಹಾಯ್ದು ಹೋಗಿದ್ದು, ನಗರವೂ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿದ್ದು, ಅಷ್ಟೇ ವೇಗದಲ್ಲಿ ರಸ್ತೆಗಳಲ್ಲಿ ವಾಹನ ಸಂಚಾರವೂ ವಿಪರೀತವಾಗಿರುವುದರಿಂದ ಹಲವು ಕಡೆಗಳಲ್ಲಿ ರೋಡ್ ಹಂಪ್ಸ್ ಹಾಗೂ ರೋಡ್ ರಂಬಲ್ಸ್‌ಗಳ ಅವಶ್ಯಕತೆ ಇದೆ. ನಗರದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಅತಿ ಪ್ರಮುಖ ರಸ್ತೆಯಾಗಿದ್ದು, ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಪಾದಚಾರಿಗಳು, ವಾಹನ ಸವಾರರು ಇದೇ ರಸ್ತೆಯಲ್ಲಿ ಓಡಾಡುತ್ತಾರೆ.

ಮುಖ್ಯವಾಗಿ ಇದೇ ರಸ್ತೆಗೆ ಡಿವೈಡರ್ ಸಹ ಹಾಕಿದ್ದು, ಅವೈಜ್ಞಾನಿಕವಾಗಿ ಹತ್ತಾರು ಕಡೆಗಳಲ್ಲಿ ಯೂಟರ್ನ್‌ಗೆ ಡಿವೈಡರ್ ಕಟ್ ಮಾಡಲಾಗಿದೆ. ಹಾಗಾಗಿ ಯೂಟರ್ನ್ ಇರುವ ಕಡೆಗಳಲೆಲ್ಲಾ ಅಪಘಾತಗಳು ಹೆಚ್ಚಾಗುತ್ತಿದ್ದರಿಂದ ಸಾರ್ವಜನಿಕರ ಒತ್ತಡಕ್ಕೆ ಮಣಿದ ಹೆದ್ದಾರಿಯವರು ಹಲವು ಕಡೆಗಳಲ್ಲಿ ಅವೈಜ್ಞಾನಿಕ ರೋಡ್ ಹಂಪ್ಸ್ ಹಾಕಿದ್ದಾರೆ. ಈ ಹಂಪ್ಸ್‌ಗಳಿಂದ ವೃದ್ಧರು, ಗರ್ಭಿಣಿಯರಿಗೆ ಹೆಚ್ಚಿನ ತೊಂದರೆಯಾಗುತ್ತಿದೆ. ಕಳೆದ ತಿಂಗಳು ಗರ್ಭಿಣಿ ಮಹಿಳೆಯೊಬ್ಬಳು ತನ್ನ ಗಂಡನೊಂದಿಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಈ ಹಂಪ್ಸ್‌ನಿಂದ ಮಗುವನ್ನೇ ಕಳೆದುಕೊಂಡರೆಂದು ಸಾರ್ವಜನಿಕರು ಸಂಬಂಧಿಸಿದ ಇಲಾಖೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದರು.

ಅಪಘಾತಗಳನ್ನು ತಡೆಯುವುದಕ್ಕೆ ಹಂಪ್ಸ್ ಹಾಕಬೇಕಾಗಿದ್ದು, ಆದರೆ ಇಲ್ಲಿ ಅಪಘಾತಗಳಿಗೆ ಆಹ್ವಾನ ಕೊಟ್ಟಂತಾಗಿದೆ. ದ್ವಿಚಕ್ರ ವಾಹನ ಸವಾರರಂತೂ ಹಿಂಭಾಗದಲ್ಲಿ ವೃದ್ಧರು, ವಿದ್ಯಾರ್ಥಿಗಳು, ಚಿಕ್ಕಮಕ್ಕಳು ಹಾಗೂ ಮಹಿಳೆಯರನ್ನು ಕೂರಿಸಿಕೊಂಡು ಹಂಪ್ಸ್ ದಾಟುವುದೇ ಕಷ್ಟವಾಗಿದೆ. ಸಣ್ಣಪುಟ್ಟ ಲಗೇಜ್‌ಗಳನ್ನು ಇಟ್ಟುಕೊಂಡು ಈ ಹಂಪ್ಸ್‌ಗಳನ್ನು ದಾಟುತ್ತಿರುವಾಗ ಹಿಂಬದಿಯಿಂದ ಬರುವ ವಾಹನಗಳು ಡಿಕ್ಕಿ ಹೊಡೆಯುವ ಪ್ರಸಂಗಗಳು ನಿತ್ಯ ನಡೆಯುತ್ತಿವೆ.

ಆಟೋಗಳು, ಚಿಕ್ಕಪುಟ್ಟ ಕಾರುಗಳಿಗೂ ಕಿರಿಕಿರಿಯಾಗುತ್ತಿದೆ. ಕೆಲವು ವಾಹನಗಳ ಇಂಜಿನ್‌ಗಳು ಸಡನ್ ಆಗಿ ಆಫ್ ಆಗುತ್ತಿದ್ದು, ಹಿಂಭಾಗದಲ್ಲಿರುವ ವಾಹನಗಳು ಡಿಕ್ಕಿ ಹೊಡೆಯುತ್ತಿವೆ. ಒಟ್ಟಾರೆ ಅಮಾಯಕ ಜೀವಗಳ ಜೊತೆ ಚಲ್ಲಾಟವಾಡುತ್ತಿರುವ ಈ ಅವೈಜ್ಞಾನಿಕ ರೋಡ್ ಹಂಪ್ಸ್‌ಗಳಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ಬೇಸತ್ತು ಅಧಿಕಾರಿಗಳು ಹಾಗೂ ಪೊಲೀಸರ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಅವೈಜ್ಞಾನಿಕ ಹಂಪ್ಸ್‌ಗಳು ಅಪಘಾತಕ್ಕೆ ಆಹ್ವಾನ ನೀಡಿದಂತಾಗಿದ್ದು, ವೃದ್ಧರು, ಗರ್ಭಿಣಿಯರು, ವಿದ್ಯಾರ್ಥಿಗಳು ಈ ಹಂಪ್ಸ್ ದಾಟಲು ಹರಸಾಹಸ ಪಡುವಂತಾಗಿದೆ. ಪ್ರತಿನಿತ್ಯ ಅಪಘಾತಗಳು ಉಂಟಾಗುತ್ತಿವೆ. ಕೂಡಲೇ ಸಂಬಂಧಿಸಿದ ಅಧಿಕಾರಿ ಹಂಪ್ಸ್‌ಗಳ ಸಂಖ್ಯೆಯನ್ನು ಕಡಿಮೆ ಮಾಡಿ ವಾಹನ ಸವಾರರ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡಬೇಕಿದೆ.

- ರೇಖಾ ಅನೂಫ್, ನಗರಸಭೆ ಮಾಜಿ ಸದಸ್ಯೆ, ತಿಪಟೂರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವಶಂಕರಪ್ಪ ಕರ್ನಾಟಕ ರತ್ನಕ್ಕೆ ಅರ್ಹ : ಶ್ರೀ
ಮೈಸೂರು ಹೀಲಿಯಂ ಸಿಲಿಂಡರ್‌ ಸ್ಫೋಟ : ಎನ್‌ಐಎ ಭೇಟಿ