ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಹುಲಿಕೆರೆ ಗ್ರಾಪಂ ವ್ಯಾಪ್ತಿಗೆ ಬರುವ ಜುವಾರಿ ಗಾರ್ಡ್‌ನ್ ಸಿಟಿ ಮುಖ್ಯಸ್ಥರು ಮೂಲ ನಕ್ಷೆಯಲ್ಲಿರುವ ಬಂಡಿದಾರಿ ಒತ್ತುವರಿ ಮಾಡಿಕೊಂಡು ಉದ್ಯಾನವನದ ರಸ್ತೆಯಲ್ಲಿ ಸಾರ್ವಜನಿಕರು ತಿರುಗಾಡದಂತೆ ಕಾಂಪೌಂಡ್ ನಿರ್ಮಿಸಿಕೊಂಡಿದ್ದಾರೆ. ಅಲ್ಲದೇ, ಗಾರ್ಡನ್ ಸಿಟಿ ಡೆವಲಪ್ ಮಾಡುವ ವೇಳೆ ಕೆಳಭಾಗದಲ್ಲಿ ಗ್ರಾಮಸ್ಥರ ಮನೆಗಳಿದ್ದು, ಮೇಲಿನಿಂದ ಚರಂಡಿಯನ್ನು ಅವೈಜ್ಞಾನಿಕವಾಗಿ ನಿರ್ಮಿಸಿರುವ ಕಾರಣ ಚರಂಡಿ ಮತ್ತು ಮಳೆ ನೀರು ಸರಾಗವಾಗಿ ಹೊರಹೋಗದೆ ಮನೆಗಳಿಗೆ ನುಗ್ಗಿ ಅವಾಂತರ ಉಂಟು ಮಾಡುತ್ತಿರುವುದಾಗಿ ಗ್ರಾಮಸ್ಥರು ದೂರಿದ್ದರು.
ಇದಲ್ಲದೇ, ಮೂಲ ನಕ್ಷೆಯಲ್ಲಿನ ಬಂಡಿದಾರಿಯನ್ನು ಒತ್ತುವರಿ ಮಾಡಿಕೊಂಡು ಕಾಮಗಾರಿ ನಡೆಸುತ್ತಿದ್ದಾರೆ. ಇದರಿಂದ ಶಾಲೆ ಹಾಗೂ ೨-೩ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಬಂಡಿದಾರಿ ರಸ್ತೆ ಮುಚ್ಚಿಹೋಗಿದೆ ಎಂದು ದೂರಿರುವ ಗ್ರಾಮಸ್ಥರು, ಮನೆಗಳಿಗೆ ಚರಂಡಿ ನೀರು ತುಂಬಿಕೊಂಡು ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಸ್ಥಳೀಯರು ನಾನಾ ರೀತಿಯ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇದರ ನಡುವೆ ಮತ್ತೊಂದು ಕಾಮಗಾರಿಗೆ ಜುವಾರಿ ಗಾರ್ಡನ್ ಸಿಟಿ ಅವರು ಮುಂದಾಗಿರುವುದಾಗಿ ಸ್ಥಳೀಯ ನಿವಾಸಿಗಳು ಗ್ರಾಪಂಗೆ ದೂರು ನೀಡಿದ್ದರು.ಈ ದೂರಿನ ಆಧಾರದ ಮೇಲೆ ಗ್ರಾಪಂ ಪಿಡಿಒ ನಟೇಶ್, ಸ್ಥಳಿಯ ನಿವಾಸಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿದ ಅವರು, ಕಾಮಗಾರಿ ಸ್ಥಗಿತಗೊಳಿಸುವಂತೆ ಸೂಚನೆಗಳ ನೀಡಿದರು. ಒತ್ತುವರಿಯಾಗಿರುವ ಬಂಡಿದಾರಿ ತೆರವುಗೊಳಿಸಿ ಸಾರ್ವಜನಿಕರ ಮುಕ್ತ ಓಡಾಟಕ್ಕೆ ಅನುವು ಮಾಡಿಕೊಡಬೇಕು. ಇದೀಗ ನಡೆಯುತ್ತಿರುವ ಕಾಮಗಾರಿ ಕಾನೂನಿಗೆ ವಿರೋಧವಾಗಿರುವುದು ದಾಖಲೆಗಳ ಪ್ರಕಾರ ಮೇಲ್ನೋಟಕ್ಕೆ ಕಂಡುಬರುತ್ತಿದೆ ತಕ್ಷಣ ಕಾಮಗಾರಿ ಸ್ಥಗಿತಗೊಳಿಸುವಂತೆ ಸಂಸ್ಥೆಯವರಿಗೆ ತಿಳಿಸಿದರು.
ಈ ವೇಳೆ ಜುವಾರಿ ಗಾರ್ಡನ್ ಸಿಟಿ ಡೆವಲಪರ್ಸ್ ಅವರೊಂದಿಗೆ ಮಾತಿನ ಚಕಮಕಿ ನಡೆಯಿತು. ನಂತರ ಪಿಡಿಒ ಮೂಲ ನಕ್ಷೆಯಲ್ಲಿರುವಂತೆ ಕಾನೂನು ಪ್ರಕಾರ ಬಂಡಿದಾರಿಯಲ್ಲಿ ಯಾವುದೇ ಅನುಮತಿ ಪಡೆಯದೆ ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಿಸುವುದು ಅಪರಾಧ. ಕೂಡಲೇ ಕಾಮಗಾರಿ ಸ್ಥಗಿತಗೊಳಿಸಿ ನಿಮ್ಮಲ್ಲಿರುವ ಎಲ್ಲಾ ದಾಖಲೆಗಳನ್ನು ತಂದು ನೀಡಿ ಪರಿಶೀಲಿಸುತ್ತೇನೆ. ದಾಖಲೆಗಳು ಸರಿಯಿದ್ದರೆ ಕಾಮಗಾರಿ ನಡೆಸಲು ಅವಕಾಶ ಮಾಡಿಕೊಡುವುದಾಗಿ ಎಂದು ಪಿಡಿಒ ನಟೇಶ್ ಅವರು ತಿಳಿಸಿದರು.
ಈ ವೇಳೆ ಗ್ರಾಪಂ ಮಾಜಿ ಅಧ್ಯಕ್ಷ ಸಿದ್ದರಾಜು, ಮಾಜಿ ಉಪಾಧ್ಯಕ್ಷ ಚಲುವರಾಜು, ಹೋರಾಟಗಾರ ಶ್ರೀನಿವಾಸ್, ಕುಂಟೇಗೌಡ, ರಘು ಹುಲಿಕೆರೆ ಹಾಗೂ ಎಂಎನ್‌ಪಿಎಂ ಕಾಲೋನಿ ನಿವಾಸಿಗಳು ಇದ್ದರು.
- ನಟೇಶ್, ಪಿಡಿಒ, ಹುಲಿಕೆರೆ ಗ್ರಾಪಂ