ದುಗ್ಗಳ ಸದಾನಂದ
ಕನ್ನಡಪ್ರಭ ವಾರ್ತೆ ನಾಪೋಕ್ಲುನಾಪೋಕ್ಲು ವ್ಯಾಪ್ತಿಯಲ್ಲಿ ಇತ್ತೀಚೆಗೆ ಸುರಿದ ಮಳೆ ಹಲವು ಬೆಳೆಗಾರರನ್ನು ಕಂಗೆಡಿಸಿದೆ. ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆಯಾದ ಪರಿಣಾಮ ಕಾಫಿ ಕೃಷಿಗೆ ಸಮಸ್ಯೆಯಾಗಿದೆ.
ದಿನನಿತ್ಯ ಮೋಡ ಕವಿದ ವಾತಾವರಣವಿದ್ದು, ಇದು ಕಾಫಿ ಫಸಲಿನ ಮೇಲೆ ಪರಿಣಾಮ ಬೀರಿದೆ. ಕಾಫಿ ಹಣ್ಣಾಗಿದ್ದು, ಕೊಯ್ಲು ಕೆಲಸ ಆರಂಭಗೊಂಡಿದೆ. ಕೊಯ್ಲು ಮಾಡಿದ ಕಾಫಿಯನ್ನು ಒಣಗಿಸುವುದು, ಜತೆಗೆ ತೋಟದಲ್ಲಿ ಹಣ್ಣಾಗಿ ನಿಂತಿರುವ ಕಾಫಿ ಉದುರುತ್ತಿರುವುದು ಬೆಳಗಾರರ ಆತಂಕಕ್ಕೆ ಕಾರಣವಾಗಿದೆ.ಕಾಫಿ ಕೊಯ್ಲಿಗೆ ಕೂಲಿ ಕಾರ್ಮಿಕರ ಸಮಸ್ಯೆಯನ್ನು ಎದುರಿಸಿದ್ದ ಬೆಳೆಗಾರರು, ಇತ್ತೀಚೆಗೆ ಕೊಯ್ಲು, ಒಣಗಿಸುವಿಕೆ ಸೇರಿದಂತೆ ಹಲವು ಕೆಲಸಗಳಿಗೆ ಕಾರ್ಮಿಕರನ್ನು ಅವಲಂಬಿಸಿದ್ದಾರೆ. ಕೊಯ್ಲು ಮಾಡಿದ ಕಾಫಿಯನ್ನು ಒಣಗಿಸಲು ಸಾಧ್ಯವಾಗದೆ ಬೆಳೆಗಾರರು ಪರಿತಪಿಸುತ್ತಿದ್ದಾರೆ.
ಕಾರ್ಮಿಕರ ಸಮಸ್ಯೆ ಒಂದೆಡೆಯಾದರೆ ವನ್ಯಜೀವಿಗಳ ಉಪಟಳ, ಬೆಲೆಯಲ್ಲಿನ ಅಸ್ಥಿರತೆ, ನಿರ್ವಹಣಾ ವೆಚ್ಚದ ಹೆಚ್ಚಳದಿಂದಾಗಿ ಬೆಳೆಗಾರರು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ನಡುವೆ ಡಿಸೆಂಬರ್‌ನಲ್ಲಿ ಅಕಾಲಿಕವಾಗಿ ಸುರಿಯುತ್ತಿರುವ ಮಳೆ, ಮಧ್ಯಮ ವರ್ಗದ ಬೆಳೆಗಾರರನ್ನು ಸಮಸ್ಯೆ ಕೂಪಕ್ಕೆ ತಳ್ಳಿದೆ. ಹಣ್ಣಾಗುತ್ತಿರುವ ಕಾಫಿಯನ್ನು ಕೊಯ್ಲು ಮಾಡಲು ಮಳೆಯಿಂದಾಗಿ ಸಾಧ್ಯವಾಗುತ್ತಿಲ್ಲ ಜತೆಗೆ ಕೊಯ್ಲು ಮಾಡಿದ ಕಾಫಿಯನ್ನು ಒಣಗಿಸಲು ಸಾಧ್ಯವಾಗುತ್ತಿಲ್ಲ. ಬಿಸಿಲಿಗೆ ಹಾಕಿದರೂ ದಿಢೀರ್ ಆಗಿ ಬರುವ ಮಳೆಯಿಂದ ಮತ್ತಷ್ಟು ಸಮಸ್ಯೆ ಆಗುತ್ತಿದೆ.ಮಳೆಯಿಂದಾಗಿ ಕೆಲವು ಕಾಫಿಯ ತೋಟದಲ್ಲಿ ಹೂ ಅರಳಿದೆ. ಇದು ಮುಂದಿನ ವರ್ಷದ ಇಳುವರಿಯ ಮೇಲು ಪರಿಣಾಮ ಬೀರುತ್ತದೆ. ಹಲವೆಡೆ ಕಾಫಿ ಒಂದೇ ಸಮನೆ ಹಣ್ಣಾಗುತ್ತಿಲ್ಲ, ಕೆಲವು ತೋಟಗಳಲ್ಲಿ ಕಾಯಿ ಇದ್ದರೆ ಕೆಲವು ಗಿಡಗಳಲ್ಲಿ ಸಂಪೂರ್ಣ ಹಣ್ಣಾಗಿವೆ. ಮತ್ತೆ ಕೆಲವು ಹಣ್ಣಾಗಿ ಕಪ್ಪಾಗಿ ಉದುರುವ ಹಂತಕ್ಕೆ ತಲುಪಿದೆ. ಇದೀಗ ಮಳೆ ಆಗಿರುವುದರಿಂದ ಕಾಫಿ ಹೂಗಳು ಅರಳಿದ್ದು ಮುಂದಿನ ವರ್ಷ ಅಲ್ಪ ಪ್ರಮಾಣದ ಫಸಲು ಬಹುಬೇಗ ಹಣ್ಣಾಗಲಿದೆ. ಉಳಿದಂತೆ ಕಾಯಿ ಉಳಿದು ಕೊಯ್ಲಿಗೆ ತೊಡಕಾಗುತ್ತದೆ.-ಡಾ.ಸಣ್ಣುವಂಡ ಕಾವೇರಪ್ಪ, ನಾಪೋಕ್ಲು, ಭಾರತೀಯ ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ.