ಅಸ್ಪೃಶ್ಯತೆ ಆಚರಣೆ ಮಾನವ ಕುಲಕ್ಕೆ ಕಂಟಕ: ಪ್ರೊ.ಸೋಮಶೇಖರ್

KannadaprabhaNewsNetwork |  
Published : Jun 10, 2024, 12:32 AM IST
೯ಕೆಎಂಎನ್‌ಡಿ-೨ಮಂಡ್ಯದ ಪರಿಶಿಷ್ಟ ಜಾತಿ, ವರ್ಗಗಳ ನೌಕರರ ಸಂಘದ ಆವರಣದಲ್ಲಿ ಮಂಡ್ಯ ಜಿಲ್ಲಾ ಮಟ್ಟದ ಪ್ರಥಮ ಬೌದ್ಧ ಸಮ್ಮೇಳನದ ಪೂರ್ವಭಾವಿಯಾಗಿ ಬುದ್ಧ, ಅಂಬೇಡ್ಕರ್, ಕುವೆಂಪು ಅನುಯಾಯಿಗಳ ಸಭೆಯಲ್ಲಿ ಟೀ-ಶರ್ಟ್‌ಗಳನ್ನು ಬಿಡುಗಡೆ ಮಾಡಲಾಯಿತು. | Kannada Prabha

ಸಾರಾಂಶ

ಭಾರತ ಸಂವಿಧಾನದ ಅನುಚ್ಚೇದ ೧೭ ಇಡೀ ಭಾರತದಲ್ಲಿ ಅಸ್ಪೃಶ್ಯತೆ ಆಚರಣೆ ನಿಷೇಧಿಸಿದೆ. ಆದರೆ, ಭಾರತದಲ್ಲಿ ಇಂದಿಗೂ ಸುಮಾರು ೮೨ ರೀತಿಯ ಅಸ್ಪಶ್ಯತೆ ಆಚರಣೆ ಮಾಡಲಾಗುತ್ತಿದೆ. ಅದು ನವ ನಾಗರೀಕತೆಯ ಬೇರೆ ಬೇರೆ ಮಗ್ಗುಲುಗಳಿಂದಲೇ ಹೊರ ಬರುತ್ತಿದೆ. ಈ ಬಗ್ಗೆ ಮೂಲ ಭಾರತೀಯರೆಲ್ಲರೂ ಹಿಂದೂ ಧರ್ಮ ತೊರೆದು ತುರ್ತಾಗಿ ಬುದ್ಧನ ಕಡೆ ಮತ್ತು ಆತನ ಧಮ್ಮದ ಕಡೆ ಮುಖ ಮಾಡಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಭಾರತದಲ್ಲಿ ನಡೆಯುತ್ತಿರುವ ಅಸ್ಪಶ್ಯತೆ ಆಚರಣೆ ಮಾನವ ಕುಲಕ್ಕೆ ಕಳಂಕವಾದುದು ಎಂದು ಮೈಸೂರು ವಿಶ್ವ ವಿದ್ಯಾಲಯದ ಪ್ರೊ.ಸೋಮಶೇಖರ್ ಕಳಕಳಿ ವ್ಯಕ್ತಪಡಿಸಿದರು.

ನಗರದ ಪರಿಶಿಷ್ಟ ಜಾತಿ, ವರ್ಗಗಳ ನೌಕರರ ಸಂಘದ ಆವರಣದಲ್ಲಿ ಮಂಡ್ಯದಲ್ಲಿ ಜು.೧೮ರಂದು ನಡೆಯುವ ಮಂಡ್ಯ ಜಿಲ್ಲಾ ಮಟ್ಟದ ಪ್ರಥಮ ಬೌದ್ಧ ಸಮ್ಮೇಳನದ ಹಿನ್ನೆಲೆಯಲ್ಲಿ ಬುದ್ಧ ಅನುಯಾಯಿಗಳು, ಅಂಬೇಡ್ಕರ್ ಅನುಯಾಯಿಗಳು ಹಾಗೂ ಕುವೆಂಪು ಅನುಯಾಯಿಗಳು ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಭಾರತ ಸಂವಿಧಾನದ ಅನುಚ್ಚೇದ ೧೭ ಇಡೀ ಭಾರತದಲ್ಲಿ ಅಸ್ಪೃಶ್ಯತೆ ಆಚರಣೆ ನಿಷೇಧಿಸಿದೆ. ಆದರೆ, ಭಾರತದಲ್ಲಿ ಇಂದಿಗೂ ಸುಮಾರು ೮೨ ರೀತಿಯ ಅಸ್ಪಶ್ಯತೆ ಆಚರಣೆ ಮಾಡಲಾಗುತ್ತಿದೆ. ಅದು ನವ ನಾಗರೀಕತೆಯ ಬೇರೆ ಬೇರೆ ಮಗ್ಗುಲುಗಳಿಂದಲೇ ಹೊರ ಬರುತ್ತಿದೆ ಎಂದು ವಿಷಾದಿಸಿದರು.

ಈ ಬಗ್ಗೆ ಮೂಲ ಭಾರತೀಯರೆಲ್ಲರೂ ಹಿಂದೂ ಧರ್ಮ ತೊರೆದು ತುರ್ತಾಗಿ ಬುದ್ಧನ ಕಡೆ ಮತ್ತು ಆತನ ಧಮ್ಮದ ಕಡೆ ಮುಖ ಮಾಡಬೇಕು ಎಂದರು.

ಭಾರತದಲ್ಲಿ ಇಂದಿಗೂ ಅಸ್ಪೃಶ್ಯತೆ ಆಚರಣೆ, ಜಾತೀಯತೆ, ಮತೀಯವಾದ, ಕೋಮುವಾದ, ಮೇಲು-ಕೀಳಿನ ತಾರತಮ್ಯ, ಮನುಷ್ಯ ಮನುಷ್ಯರ ನಡುವೆ ಬೇಧ-ಭಾವವಿದೆ. ಇದನ್ನು ಹೋಗಲಾಡಿಸಲು ಅಂಬೇಡ್ಕರ್ ಕೊಟ್ಟಿರುವ ಅಸ್ತ್ರ ಎಂದರೆ, ನಾವುಗಳೆಲ್ಲರೂ ಬುದ್ಧ ಧಮ್ಮದ ಕಡೆ ಮುಖ ಮಾಡುವುದಾಗಿದೆ ಎಂದರು.

ಬಳಿಕ ಚಿಕ್ಕರಸಿಕೆರೆ ಶಿವಲಿಂಗಯ್ಯ ಮಾತನಾಡಿ, ಸರ್ವ ಬೌದ್ಧರು, ಅಂಬೇಡ್ಕರ್ ಅನುಯಾಯಿಗಳು, ಕುವೆಂಪು ಅನುಯಾಯಿಗಳು ಎಲ್ಲರನ್ನೂ ಸಭೆ ಕರೆದಿದ್ದರು. ನಮ್ಮ ಮುಂದೆ ವಿವಿಧ ರೀತಿಯ ಸಾಮಾಜಿಕ ಅನಿಷ್ಟಗಳಿದ್ದು, ಈ ಎಲ್ಲಾ ಅನಿಷ್ಟಗಳನ್ನು ಹೋಗಲಾಡಿಸಲು ನಮಗೆ ಬುದ್ಧ ಮಾರ್ಗವೊಂದೇ ಉಳಿದಿರುವುದು ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ಅಸ್ಪೃಶ್ಯತೆ ಆಚರಣೆ ವಿರೋಧಿ ಅಭಿಯಾನ ಸಂಬಂಧ ಟಿ-ಶರ್ಟ್‌ಗಳನ್ನು ಬಿಡುಗಡೆ ಮಾಡಿ, ನೂರಾರು ಜನರಿಗೆ ವಿತರಿಸಲಾಯಿತು.

ಸಭೆಯಲ್ಲಿ ವಿಚಾರವಾದಿಗಳಾದ ಕೆ.ಮಾಯಿಗೌಡ, ಅನ್ನದಾನಿ, ಅಭಿಗೌಡ ಹನಕೆರೆ, ನಾಗರಾಜ ಅಂಬೇಡ್ಕರ್, ಪ್ರಗತಿಪರ ಚಿಂತಕರಾದ ಜೆ.ರಾಮಯ್ಯ, ಡಾ.ಯೋಗೇಂದ್ರ ಕುಮಾರ್, ಮೋಹನ್ ಪ್ರಭುದ್ಧಿ ಮತ್ತು ವಿವಿಧ ತಾಲೂಕುಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

PREV

Recommended Stories

ಶ್ರೀ ಶ್ರೀ ರವಿಶಂಕರ್‌ಗೆ ವರ್ಲ್ಡ್ ಲೀಡರ್ ಫಾರ್ ಪೀಸ್ ಆ್ಯಂಡ್‌ ಸೆಕ್ಯೂರಿಟಿ ಪ್ರಶಸ್ತಿ
ಹಾಡಹಗಲೇ ಮನೆಗೆ ನುಗ್ಗಿ ಚಹಾ ವ್ಯಾಪಾರಿಯ ಕತ್ತು ಕೊಯ್ದು ಹತ್ಯೆ