ಹಿರೇಕೆರೂರು: ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಹಿರೇಕೆರೂರ ಪಟ್ಟಣದಲ್ಲಿ ನಡೆಯುತ್ತಿರುವುದು ತಾಲೂಕಿನ ಕನ್ನಡಾಭಿಮಾನಿಗಳಿಗೆ ಹೆಮ್ಮೆಯ ವಿಷಯ ಎಂದು ಶಾಸಕ ಯು.ಬಿ.ಬಣಕಾರ ಹೇಳಿದರು.
ಪಟ್ಣಣದ ಪ್ರವಾಸಿ ಮಂದಿರದಲ್ಲಿ ಹಾವೇರಿ ಜಿಲ್ಲಾ 14ನೇ ಸಾಹಿತ್ಯ ಸಮ್ಮೇಳನದ ಲಾಂಛನ ಅನಾವರಣಗೊಳಿಸಿ ಮಾತನಾಡಿದರು.ಸಾಹಿತ್ಯ ಕ್ಷೇತ್ರಕ್ಕೆ ಹಿರೇಕೆರೂರ ತಾಲೂಕಿನ ಕನ್ನಡ ಭಾಷಾ ಪ್ರೇಮಿಗಳು ಅಪಾರ ಕೊಡುಗೆ ನೀಡಿದ್ದಾರೆ. ಕನ್ನಡ ಸಾಹಿತ್ಯ ಲೋಕದಲ್ಲಿ ಹೆಮ್ಮೆ ಪಡುವಂತ ಸರ್ವಜ್ಞ ಜನಿಸಿದ ನಾಡು ನಮ್ಮ ತಾಲೂಕು. ಇಂತಹ ಕನ್ನಡ ಸಾಹಿತ್ಯ ಸೊಬಗನ್ನು ಹೊಂದಿರುವ ನಮ್ಮ ತಾಲೂಕಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ತಾಲೂಕಿನ ಜನತೆಯ ಹೆಮ್ಮೆಯ ವಿಷಯ. ತಾಲೂಕಿನ ಕನ್ನಡಪರ ಸಂಘಟನೆಗಳು, ಕನ್ನಡ ಭಾಷಾ ಪ್ರೇಮಿಗಳು, ವಿವಿಧ ಸಂಘಟನೆಗಳು ಹಾಗೂ ಯುವಕರು ತಾಲೂಕಿನಲ್ಲಿ ನಡೆಯುತ್ತಿರುವ ಕನ್ನಡ ಸಮ್ಮೇಳನದಲ್ಲಿ ಸಕ್ರೀಯವಾಗಿ ಭಾಗವಹಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕು. ಸಮ್ಮೇಳನದ ಯಶಸ್ವಿಗೆ ಬೇಕಾಗಿರುವ ಎಲ್ಲ ಸಹಕಾರವನ್ನು ನೀಡಲಾಗುವುದು ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲಿಂಗಯ್ಯ ಹಿರೇಮಠ ಮಾತನಾಡಿ, ಹಿರೇಕೆರೂರ ಪಟ್ಣಣದಲ್ಲಿ ನಡೆಯುವ ಸಮ್ಮೇಳನಕ್ಕೆ ಲಾಂಛನ ಬಿಡುಗಡೆ ಮಾಡುವ ಮೂಲಕ ಚಾಲನೆ ಸಿಕ್ಕಂತಾಗಿದೆ. ಸಮ್ಮೇಳನದ ಕಾರ್ಯಕ್ರಮಗಳು ನಿರಂತವಾಗಿ ನಡೆಯಲಿವೆ. ತಾಲೂಕಿನ ಜನತೆಯ ಸಹಕಾರ, ಸಹಯೋಗದಿಂದ ಕಾರ್ಯಕ್ರಮ ಯಶಸ್ವಿಗೊಳಿಸುವ ಗುರಿ ಹೊಂದಿದ್ದೇವೆ. ಸಮ್ಮೇಳನ ಕೇವಲ ಒಂದು ಕಾರ್ಯಕ್ರಮವಾಗದೇ ಸಮಾಜಕ್ಕೆ ಉತ್ತಮ ಸಂದೇಶ ಸಾರುವ ವೇದಿಕೆಯಾಗಬೇಕು ಎನ್ನುವುದೇ ನಮ್ಮ ಗುರಿಯಾಗಿದೆ ಎಂದರು.ಈ ಸಂದರ್ಭದಲ್ಲಿ ತಹಸೀಲ್ದಾರ ಎಚ್. ಪ್ರಭಾಕರಗೌಡ, ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಎನ್. ಸುರೇಶಕುಮಾರ, ಗೌರವಾಧ್ಯಕ್ಷ ಮಹೇಂದ್ರ ಬಡಳ್ಳಿ, ಪ್ರಧಾನ ಕಾರ್ಯದರ್ಶಿ ಪಿ.ಎಸ್. ಸಾಲಿ, ರಟ್ಟಿಹಳ್ಳಿ ಕಸಾಪ ಅಧ್ಯಕ್ಷ ರಾಘವೇಂದ್ರ ಅಗಸಿಬಾಗಿಲ, ಜಿ.ಪಿ. ಪ್ರಕಾಶ, ಕರವೇ ಅಧ್ಯಕ್ಷ ಗಿರೀಶ ಬಾರ್ಕಿ, ಬಿ.ಎಸ್. ಸಣ್ಣಗೌಡರ, ಮಲ್ಲಿಕಾರ್ಜುನ ಬುರಡಿಕಟ್ಟಿ, ಅಶೋಕ ಗೊಲ್ಲರ, ರಾಮಣ್ಣ ತೆಂಬದ, ಪಿ.ಬಿ. ನಿಂಗನಗೌಡ್ರ, ಮೇಘರಾಜ ಮಾಳಗಿಮನಿ, ಎಂ.ಬಿ. ಕಾಗಿನೆಲ್ಲಿ, ವಿ.ಸಿ. ಪುರದ, ಎಂ.ಎಂ. ಮತ್ತೂರ, ಮಂಜುನಾಥ ಕಳ್ಳಿಹಾಳ, ಡಾ. ಬಸವರಾಜ ಪೂಜಾರ, ಕೆ.ಡಿ. ದಿವಿಗಿಹಳ್ಳಿ, ಸಿ.ಬಿ. ಮಾಳಗಿ, ಎನ್.ಎಸ್. ಚಿಕ್ಕನರಗುಂದ, ಈರಣ್ಣ ಚಟ್ಟೂರ, ಬಿ.ವಿ. ಸೊರಟೂರ ಹಾಗೂ ತಾಲೂಕು ಕಸಾಪ ಸದಸ್ಯರು ಇದ್ದರು.
ಸಮ್ಮೇಳನ ಮುಂದೂಡಿಕೆಈ ಮೊದಲು ಜಿಲ್ಲಾ ಸಮ್ಮೇಳನವನ್ನು ಡಿ. 28, 29ರಂದು ನಿಗದಿ ಪಡಿಸಲಾಗಿತ್ತು. ಈ ಅವಧಿಯಲ್ಲಿ ತಾಲೂಕಿನ ಶಾಲೆಗಳ ಮಕ್ಕಳು ಮತ್ತು ಶಿಕ್ಷಕರು ಶೈಕ್ಷಣಿಕ ಪ್ರವಾಸದಲ್ಲಿ ತೊಡಗಿಕೊಂಡಿರುವ ಹಿನ್ನೆಲೆಯಲ್ಲಿ ಸಮ್ಮೇಳನದ ದಿನಾಂಕವನ್ನು ಮುಂದೂಡಲಾಗಿದೆ. ಸಮ್ಮೇಳನವನ್ನು ಜನವರಿ 10, 11, 2025ರಂದು ನಡೆಸಲು ತೀರ್ಮಾನಿಸಲಾಗಿದೆ.