ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ರಾಜ್ಯದಲ್ಲಿಯೇ ಮೊದಲ ಬಾರಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾದ ಯುಪಿಐ ಪಾವತಿ ವ್ಯವಸ್ಥೆಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಈ ವ್ಯವಸ್ಥೆಯನ್ನು ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ಎಲ್ಲ ಬಸ್ ಗಳಿಗೆ ಅಳವಡಿಸಲಾಗಿದ್ದು, ಶೀಘ್ರವಾಗಿ ಸಂಸ್ಥೆಯ ಎಲ್ಲ ಬಸ್ಸುಗಳಿಗೂ ವಿಸ್ತರಿಸಲಾಗುತ್ತಿದೆ ಎಂದು ಸಾರಿಗೆ ವ್ಯವಸ್ಥಾಪಕ ನಿರ್ದೇಶಕ ಭರತ್ ತಿಳಿಸಿದ್ದಾರೆ.
ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಆರಾಮದಾಯಕ ಹಾಗೂ ಪ್ರಯಾಣಿಕ ಸ್ನೇಹಿಯಾಗಿಸುವ ನಿಟ್ಟಿನಲ್ಲಿ ಸಂಸ್ಥೆಯಲ್ಲಿ ಹಲವಾರು ಉಪಕ್ರಮಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನಗದು ರಹಿತ ವ್ಯವಹಾರಕ್ಕೆ ಉತ್ತೇಜನ ನೀಡುತ್ತಿವೆ. ಈ ಹಿನ್ನೆಲೆಯಲ್ಲಿ ಫೋನ್ ಪೇ ಕಂಪನಿಯ ಸಹಯೋಗದಲ್ಲಿ ಯುಪಿಐ ಮೂಲಕ ಹಣ ಸ್ವೀಕೃತಿ ವ್ಯವಸ್ಥೆಯನ್ನು ಹುಬ್ಬಳ್ಳಿ ಗ್ರಾಮಾಂತರ 3ನೇ ಘಟಕದ ಬಸ್ಸುಗಳಲ್ಲಿ ಸೆ. 1ರಿಂದ ಪ್ರಾಯೋಗಿಕವಾಗಿ ಆರಂಭಿಸಲಾಗಿತ್ತು. ಈ ನೂತನ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ನಿರ್ವಾಹಕರಿಗೆ ಪ್ರತ್ಯೇಕ ಸ್ಟ್ಯಾಟಿಕ್ ಕ್ಯೂ ಆರ್ ಕೋಡ್ ನೀಡಲಾಗಿದೆ. ನಿರ್ವಾಹಕರ ಟಿಕೆಟ್ ವಿತರಣೆ ಯಂತ್ರದಲ್ಲಿ ಅವಶ್ಯಕ ಮಾರ್ಪಾಡುಗಳನ್ನು ಮಾಡಲಾಗಿದೆ ಹಾಗೂ ನಿರ್ವಾಹಕರಿಗೆ ಅಗತ್ಯ ತರಬೇತಿ ನೀಡಲಾಗಿದೆ. ಪ್ರಯಾಣಿಕರು ಫೋನ್ ಪೇ, ಗೂಗಲ್ ಪೇ ಮತ್ತಿತರ ಯಾವುದೇ ಯುಪಿಐ ಅಪ್ಲಿಕೇಷನ್ ಮೂಲಕ ಹಣ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.ಚಿಲ್ಲರೆ ಸಮಸ್ಯೆ ಪರಿಹಾರ, ನಗದು ರಹಿತ ಪ್ರಯಾಣ ಹಾಗೂ ಸಮಯದ ಉಳಿತಾಯ ಮುಂತಾದ ಪ್ರಯೋಜನಗಳಿಂದಾಗಿ ಯುಪಿಐ ವ್ಯವಸ್ಥೆಗೆ ಸಾರ್ವಜನಿಕರಿಂದ ಹಾಗೂ ಸಿಬ್ಬಂದಿಗಳಿಂದ ನಿರೀಕ್ಷೆಗೂ ಮೀರಿದ ಸ್ಪಂದನೆ ವ್ಯಕ್ತವಾಗಿದೆ. ಇಲ್ಲಿ ವರೆಗೆ 27,498 ಯುಪಿಐ ಪಾವತಿ ವಹಿವಾಟುಗಳು ನಡೆದಿದ್ದು ₹71,60,337 ಮೊತ್ತವು ಪಾವತಿಯಾಗಿದೆ. ಪ್ರಸ್ತುತ ಫೊನ್ ಪೇ ಕಂಪನಿಯ ಸಹಯೋಗದಲ್ಲಿ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ಎಲ್ಲ 452 ಬಸ್ಸುಗಳಿಗೆ ವಿಸ್ತರಿಸಲಾಗಿದೆ.