- ಜನವರಿ ತಿಂಗಳಲ್ಲಿ ಎಲ್ಲ ಬಸ್ಸುಗಳಲ್ಲಿ ಯುಪಿಐ ವಹಿವಾಟು ಲಭ್ಯ: ಭರತ್ ಎಸ್
ರಾಜ್ಯದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿಯೇ ಮೊದಲ ಬಾರಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾದ ಯುಪಿಐ ವ್ಯವಸ್ಥೆಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ವಹಿವಾಟುಗಳ ಮೊತ್ತ ₹ 1.50 ಕೋಟಿ ದಾಟಿದ್ದು, ತಿಂಗಳಲ್ಲಿ ಸಂಸ್ಥೆಯ ಎಲ್ಲ ಬಸ್ಸುಗಳಿಗೂ ಈ ವ್ಯವಸ್ಥೆ ವಿಸ್ತರಿಸಲಾಗುತ್ತದೆ ಎಂದು ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್. ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಅವರು, ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಆರಾಮದಾಯಕ ಹಾಗೂ ಪ್ರಯಾಣಿಕ ಸ್ನೇಹಿಯಾಗಿಸುವ ನಿಟ್ಟಿನಲ್ಲಿ ಸಂಸ್ಥೆಯಲ್ಲಿ ಹಲವಾರು ಉಪಕ್ರಮ ಅಳವಡಿಸಿಕೊಳ್ಳಲಾಗುತ್ತಿದೆ. ಸಾರ್ವಜನಿಕರು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಎಲ್ಲ ನಗದು ರಹಿತ ವ್ಯವಹಾರಕ್ಕೆ ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ.ಅದರಂತೆ ಬಸ್ಸುಗಳಲ್ಲಿ ಟಿಕೆಟ್ ಪಡೆಯಲು ಯುಪಿಐ ಪಾವತಿ ವ್ಯವಸ್ಥೆಯನ್ನು ರಾಜ್ಯದಲ್ಲಿಯೇ ಮೊದಲ ಬಾರಿಗೆ ಹುಬ್ಬಳ್ಳಿ ಗ್ರಾಮಾಂತರ 3ನೇ ಘಟಕದ ಬಸ್ಸುಗಳಲ್ಲಿ ಸೆ.1ರಿಂದ ಪ್ರಾಯೋಗಿಕವಾಗಿ ಆರಂಭಿಸಲಾಗಿತ್ತು. ಈ ನೂತನ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ನಿರ್ವಾಹಕರಿಗೆ ಪ್ರತ್ಯೇಕ ಸ್ಟ್ಯಾಟಿಕ್ ಕ್ಯೂ ಆರ್ ಕೋಡ್ ನೀಡಲಾಗಿದೆ. ಪ್ರಯಾಣಿಕರು ಫೋನ್ ಪೇ, ಗೂಗಲ್ ಪೇ ಮತ್ತಿತರ ಯಾವುದೇ ಯುಪಿಐ ಅಪ್ಲಿಕೇಷನ್ ಮೂಲಕ ಹಣ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.
ಪ್ರಸ್ತುತ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ಎಲ್ಲ 452 ಬಸ್ಸುಗಳಿಗೆ ವಿಸ್ತರಿಸಲಾಗಿದೆ. ಇಲ್ಲಿಯ ವರೆಗೆ 71,396 ವಹಿವಾಟುಗಳು ನಡೆದಿದ್ದು ₹1,50,26,815 ಮೊತ್ತ ಪಾವತಿಯಾಗಿರುತ್ತದೆ. ಬಹಳಷ್ಟು ಅನುಕೂಲತೆಗಳಿರುವುದರಿಂದ ಸಾರ್ವಜನಿಕರು ಹಾಗೂ ಸಿಬ್ಬಂದಿಗಳ ಬೇಡಿಕೆಯಂತೆ ಯುಪಿಐ ಪಾವತಿ ವ್ಯವಸ್ಥೆಯನ್ನು ಇತರೆ ಬಸ್ಸುಗಳಿಗೂ ವಿಸ್ತರಿಸಲು ನಿರ್ಧರಿಸಲಾಗಿದೆ.