ಕನ್ನಡಪ್ರಭ ವಾರ್ತೆ ವಿಜಯಪುರ
ನಾನು ಇವತ್ತಿಗೂ-ಯಾವತ್ತಿಗೂ ಬಸವಾದಿ ಶರಣರ ಅನುಯಾಯಿ. ಸಿದ್ದೇಶ್ವರ ಸ್ವಾಮೀಜಿ ಬಸವಣ್ಣನವರ ರೀತಿಯಲ್ಲೇ ಜಾತಿ ಮತ್ತು ವರ್ಗರಹಿತ ಸಮ ಸಮಾಜಕ್ಕಾಗಿ ಶ್ರಮಿಸಿದವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ನಗರದ ಜ್ಞಾನಯೋಗಾಶ್ರಮದಲ್ಲಿ ಸಿದ್ದೇಶ್ವರ ಮಹಾ ಸ್ವಾಮೀಜಿಗಳ ಗುರುನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಧರ್ಮಾತೀತವಾಗಿ ಪ್ರತಿಯೊಬ್ಬರೂ ಬಾಳಬೇಕು ಎನ್ನುವುದು ಸಿದ್ದೇಶ್ವರ ಸ್ವಾಮೀಜಿಗಳ ಆಶಯವಾಗಿತ್ತು. ಸಮಾಜದ ಜಾತಿ ಮೈಲಿಗೆಯನ್ನು ಸೋಕಿಸಿಕೊಳ್ಳದೆ ದೂರ ಉಳಿದಿದ್ದ ದಾರ್ಶಕನಿಕರು ಅವರಾಗಿದ್ದರು. ಸಮಾಜದಲ್ಲಿ ದೂರದರ್ಶಿತ್ವ ಇಟ್ಟುಕೊಂಡು ಮನುಷ್ಯ ಸಮಾಜವನ್ನು ತಿದ್ದುವ ಗುರಿ ಹೊಂದಿದ್ದ ಕಾರಣಕ್ಕೇ ಇವರು ದಾರ್ಶನಿಕರಾಗಿದ್ದರು ಎಂದು ವಿವರಿಸಿದರು.ಸಿದ್ದೇಶ್ವರ ಸ್ವಾಮೀಜಿಗಳ ಬದುಕೇ ನಮಗೆ ಆದರ್ಶ. ಅವರ ಜೀವನದ ಆಶಯದಂತೆ ಬದುಕುವುದೇ ಅವರಿಗೆ ಸಲ್ಲಿಸುವ ದೊಡ್ಡ ಗೌರವ ಎಂದ ಅವರು, ಸಿದ್ದೇಶ್ವರ ಸ್ವಾಮಿಗಳು ಜ್ಞಾನ ಸಂಪಾದಿಸಿದರು. ಆ ಜ್ಞಾನವನ್ನು ಜನಮಾನಸಕ್ಕೆ ಹಂಚಿದರು. ದ್ವೇಷ, ಅಹಂಕಾರದಿಂದ ಬಿಡುಗಡೆ ಹೊಂದಿದ ಅತ್ಯುನ್ನತ ಮನುಷ್ಯತ್ವದ ಸೃಷ್ಟಿಗೆ ಶ್ರಮಿಸಿದವರು. ಇವರ ಬದುಕು ಮತ್ತು ಸಾಧನೆಯನ್ನು ವರ್ಣಿಸಲು ಪದಗಳೇ ಇಲ್ಲ. ಅಷ್ಟು ಸರಳತೆ ಅವರ ಬದುಕು ಮತ್ತು ವ್ಯಕ್ತಿತ್ವದಲ್ಲಿ ಬೆರೆತಿತ್ತು ಎಂದು ವಿವರಿಸಿದರು.
ಜಿಲ್ಲೆಯ ಸಚಿವರು ಮತ್ತು ಸಂತರು ಹೇಳಿದ ರೀತಿಯಲ್ಲಿ ಸಿದ್ದೇಶ್ವರ ಶ್ರೀಗಳ ಬದುಕಿನ ಸಂದೇಶ ಮತ್ತು ಆದರ್ಶಗಳನ್ನು ಕಾಪಾಡುವ ಸ್ಮರಣಾರ್ಥ ಕಾರ್ಯ ಮಾಡಲು ಸರ್ಕಾರ ಸಿದ್ದವಿದೆ ಎಂದು ಭರವಸೆ ನೀಡಿದರು.ಸಿದ್ದೇಶ್ವರ ಸ್ವಾಮಿಗಳಿಗೆ ಗುರುನಮನ ಸಲ್ಲಿಸುವುದಕ್ಕಾಗಿಯೇ ನಾನು ಇಲ್ಲಿಗೆ ಬಂದಿದ್ದೇನೆ. ಸಿದ್ದೇಶ್ವರ ಸ್ವಾಮಿಗಳ ಬಗ್ಗೆ ನನಗೆ ವಿಶೇಷ ಗೌರವ ಮತ್ತು ಪ್ರೀತಿ ಇದೆ ಎಂದರು. ಪ್ರಜಾಪ್ರಭುತ್ವದ ಆಶಯವೇ ಶರಣ ಸಾಹಿತ್ಯ. ಅದರಂತೆ ಬಾಳಿದವರು ಸಿದ್ದೇಶ್ವರ ಶ್ರೀಗಳು. ಶರಣರ ಕನಸನ್ನು ನನಸು ಮಾಡಿದವರು ಶ್ರೀಗಳು. ಅವರದು ಸಾರ್ಥಕ ಜೀವನ. ಅವರೆಂದೂ ಸ್ವಾರ್ಥ ತೋರಲಿಲ್ಲ. ಶ್ರೀಗಳು ತಮ್ಮನ್ನು ತಾವು ಜಗತ್ತಿಗೆ ಸಮರ್ಪಿಸಿಕೊಂಡಿದ್ದರು ಎಂದು ಹೇಳಿದರು.
ಶ್ರೀಗಳಿಗೆ ಯಾವುದೇ ಅಹಂಕಾವಿರಲಿಲ್ಲ. ಅವರು ಸರಳತೆಯ ಸಾಕಾರ ಮೂರ್ತಿಯಾಗಿದ್ದರು. ಅವರ ಬದುಕೇ ಒಂದು ಆದರ್ಶ. ಹೇಗೆ ಹೇಳಿದರೋ ಹಾಗೆಯೇ ಬದುಕಿದವರು ಸಿದ್ದೇಶ್ವರ ಶ್ರೀಗಳು ಎಂದು ಶ್ಲಾಘಿಸಿದರು.ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಮಾತನಾಡಿ, ಸರಳ ಸಜ್ಜನರಾಗಿದ್ದ ಸಿದ್ದೇಶ್ವರ ಶ್ರೀಗಳು ಪ್ರಧಾನಿಯವರನ್ನೂ ಆವರಿಸಿದ್ದರು. ಸಿದ್ದೇಶ್ವರ ಶ್ರೀಗಳು ಈ ಜಗತ್ತಿನಲ್ಲಿನ ಕ್ಷೋಭೆಯನ್ನು ಕಡಿಮೆ ಮಾಡಲು ಯತ್ನಿಸಿದರು. ಅವರು ಸಹಜ ಬದುಕಿನಿಂದ ನಮಗೆಲ್ಲ ಆದರ್ಶವಾಗಿದ್ದರು. ಶ್ರೀಗಳು ನಮ್ಮ ಸನಾತನ ಧರ್ಮದ ಮಹತ್ವ ಎತ್ತಿ ಹಿಡಿದರು. ಅವರ ಧರ್ಮದ ಕುರಿತ ಕಾಳಜಿ ಅನನ್ಯ ಎಂದರು.
ಸಿರಿಗಿರೆಯ ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳು ಮಾತನಾಡಿ, ಸಿದ್ದೇಶ್ವರ ಶ್ರೀಗಳು ಸ್ವಯಂ ಪ್ರಕಾಶನ. ಅವರು ಯಾವುದೇ ವೈಯಕ್ತಿಕ ಆಸೆಗಳಿಲ್ಲದ ಸಂತರಾಗಿದ್ದರು ಎಂದು ಹೇಳಿದರು.ಬೇಡದ ಭಾವನೆ ತೆಗೆದ ಸಂತ ಅವರಾಗಿದ್ದರು. ಅವರ ಸಂದೇಶ ಸಂಜೀವಿನಿಯಾಗಿತ್ತು. ಪೂರ್ವ ಮತ್ತು ಪಾಶ್ಚಿಮಾತ್ಯದ ಜ್ಞಾನ ಹೊಂದಿದವರು ಆವರಾಗಿದ್ದರು. ಇದ್ದೆನಲ್ಲ ಇಲ್ಲದಂತೆ ಎನ್ನವಂತೆ ಶ್ರೀಗಳು ಬದುಕಿದರು. ಅವರು ವೈರಾಗ್ಯ ಮೂರ್ತಿಯಾಗಿದ್ದರು ಎಂದು ಹೇಳಿದರು.
ವಿರಕ್ತಭಾವ ಅವರಲ್ಲಿ ಒಡಮೂಡಿತ್ತು. ಸಾಕ್ರೇಟಿಸ್ ಸೇರಿ ಹಲವರನ್ನು ಅವರು ಅಭ್ಯಸಿಸಿದ್ದರು. ಅವರು ಪರಮ ಪ್ರೇಮವನ್ನು ಕಲಿಸಿ ಹೋದರು ಎಂದು ಸುತ್ತೂರು ಶ್ರೀ ಹೇಳಿದರು.ಕೊಲ್ಲಾಪುರ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಮಹಾ ಸ್ವಾಮೀಜಿಗಳು, ಶಿವಮೂರ್ತಿ ಶಿವಾಚಾರ್ಯ ಮಹಾ ಶ್ರೀಗಳು, ಜ್ಞಾನಯೋಗಾಶ್ರಮದ ಬಸವಲಿಂಗ ಮಹಾಸ್ವಾಮೀಜಿಗಳು ಮತ್ತು ಹಲವು ಸಿದ್ದ ಸಂತರು ಗುರುನಮನ ಕಾರ್ಯಕ್ರಮ ನೆರವೇರಿತು.
ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್, ಸಚಿವರಾದ ಎಚ್.ಕೆ.ಪಾಟೀಲ್, ಶಿವಾನಂದ ಪಾಟೀಲ್, ಮಾಜಿ ಸಚಿವ, ಶಾಸಕ ವಿನಯ್ ಕುಲಕರ್ಣಿ ಮತ್ತು ಶಾಸಕರಾದ ಸಿ.ಎಸ್.ನಾಡಗೌಡ, ಅಶೋಕ್ ಮನಗೂಳಿ, ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.