ಉಪ್ಪಿನಂಗಡಿ: ನದಿ ನೀರಿನ ಶುದ್ಧತೆಗಾಗಿ ನದಿಗಳಲ್ಲಿ ಮೀನುಗಳ ಸಂತತಿಯನ್ನು ವೃದ್ಧಿಸುವ ಕಾರ್ಯವಾಗಬೇಕು. ಈ ಮೂಲಕ ಪ್ರಕೃತಿಯ ಸಮತೋಲನ ಕಾಪಾಡಬೇಕಾಗಿದೆ. ಆದ್ದರಿಂದ ಇನ್ನು ಮುಂದೆ ರಸಾಯನಿಕ ಅಥವಾ ಸಿಡಿಮದ್ದು ಬಳಸಿ ಮೀನುಗಳನ್ನು ಹಿಡಿಯುವವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಶಾಸಕ ಅಶೋಕ್ ಕುಮಾರ್ ರೈ ಎಚ್ಚರಿಸಿದರು.ಮೀನುಗಾರಿಕಾ ಇಲಾಖೆ ವತಿಯಿಂದ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ರಾಧಾಕೃಷ್ಣ ನಾಯಕ್ ಅವರ 34 ನೆಕ್ಕಿಲಾಡಿಯಲ್ಲಿರುವ ಜಾಗದ ಬಳಿ ಕುಮಾರಧಾರ ನದಿಗೆ ಐದು ಲಕ್ಷ ಗೌರಿ (ಕಾಮನ್ ಕಾರ್ಪ್) ಮೀನಿನ ಮರಿಗಳನ್ನು ಬಿಟ್ಟು ಅವರು ಮಾತನಾಡಿದರು.ನದಿ, ಪರಿಸರವನ್ನು ರಕ್ಷಿಸಿ ಮುಂದಿನ ಪೀಳಿಗೆಗೂ ಕಾಪಿಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಕೆಲವು ಮೀನು ಹಿಡಿಯುವವರು ರಸಾಯನಿಕ ಹಾಗೂ ಸಿಡಿಮದ್ದು (ತೋಟೆ) ಬಳಸಿ ಮೀನನ್ನು ಹಿಡಿಯುವುದು ಗಮನಕ್ಕೆ ಬಂದಿದೆ. ಇದರಿಂದ ಸಣ್ಣ ಮೀನುಗಳು ನಾಶವಾಗುತ್ತದೆ. ಸಾರ್ವಜನಿಕ ಜಾಗದಲ್ಲಿರುವ ಮಾವಿನ ಮರಗಳ ಮಾವಿನ ಮಿಡಿಗಳನ್ನು ಕೊಯ್ಯುವುದನ್ನು ಹೇಗೆ ನಿರ್ಬಂಧಿಸಲಾಗಿದೆಯೋ ಅದೇ ರೀತಿ ರಸಾಯನಿಕ ಹಾಗೂ ಸಿಡಿಮದ್ದು ಬಳಸಿ ಮೀನಿನ ಸಂತತಿ ನಾಶ ಮಾಡುವವರ ಮೇಲೆಯೂ ಇನ್ನು ಮುಂದೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಪ್ರತಿ ಗ್ರಾ.ಪಂ.ಗೆ ಸೂಚನೆ ನೀಡಲಾಗುವುದು. ಇಲ್ಲಿ ಈ ಬಾರಿ ಐದು ಲಕ್ಷ ಮೀನಿನ ಮರಿಗಳನ್ನು ಬಿಡಲಾಗಿದ್ದು, ಎರಡು ವರ್ಷಕ್ಕೆ ಇದರ ಸಂಖ್ಯೆ 25 ಲಕ್ಷವಾಗಬೇಕು. ಇಲ್ಲಿ ಮೀನಿನ ಮರಿಗಳನ್ನು ಬಿಡಲು 34 ನೆಕ್ಕಿಲಾಡಿ ಗ್ರಾ.ಪಂ. ಕೂಡಾ ಮನವಿ ನೀಡಿದ್ದು, ಅವರಿಗೂ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರಲ್ಲದೆ, ಮುಂದಿನ ವರ್ಷದಿಂದ ನದಿಗಳು ಹಾದು ಹೋಗುವ ಪ್ರತಿ ಗ್ರಾ.ಪಂ.ನಲ್ಲಿಯೂ ನದಿಗೆ ಮೀನುಗಳನ್ನು ಬಿಡುವ ಕಾರ್ಯ ಮಾಡಲಾಗುವುದು ಎಂದರು. ಈ ಸಂದರ್ಭ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ರಾಧಾಕೃಷ್ಣ ನಾಯಕ್, ರೂಪೇಶ್ ರೈ ಅಲಿಮಾರ್, ಮುಹಮ್ಮದ್ ತೌಸೀಫ್ ಯು.ಟಿ., ಡಾ. ರಾಜಾರಾಮ್ ಕೆ.ಬಿ., ಅನಿ ಮಿನೇಜಸ್, ವಿಕ್ರಂ ಶೆಟ್ಟಿ ಅಂತರ, ಗಣೇಶ್‌ರಾಜ್, ವೆಂಕಪ್ಪ ಪೂಜಾರಿ, ಸುಜಾತ ರೈ ಅಲಿಮಾರ್, ಉದಯಕುಮಾರ್ ಉದಯಗಿರಿ, ಅಸ್ಕರ್ ಅಲಿ, ಜತೀಂದ್ರ ಶೆಟ್ಟಿ, ಹಮೀದ್ ಪಿ.ಟಿ., ಜೆರಾಲ್ಡ್ ಮಸ್ಕರೇನಸ್, ಶಬೀರ್ ಅಹಮ್ಮದ್, ಇಸಾಕ್, ಖಾದರ್ ಆದರ್ಶನಗರ, ಉಲ್ಲಾಸ್, ಕೃಷ್ಣಪ್ಪ, ಆನಂದ ಸಾಂತ್ಯಡ್ಕ, ಫೈಝಲ್, ಪುತ್ತೂರು ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಮಂಜುಳಾಶ್ರೀ ಶೆಣೈ, ಮಂಗಳೂರು ಮೀನುಗಾರಿಕಾ ಇಲಾಖೆಯ ಮೇಲ್ವಿಚಾರಕರಾದ ಜಯಂತ ಕುಮಾರ್, ಭೀಮೇಶ್, ಪಿಡಿಒ ರವಿಚಂದ್ರ , ಲೆಕ್ಕ ಸಹಾಯಕ ದೇವಪ್ಪ ನಾಯ್ಕ, ಸಿಬ್ಬಂದಿ ಸಚಿನ್ ಇದ್ದರು.