ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ತಂಗಡಿ ತಾಲೂಕು ಕಣಿಯೂರು ಗ್ರಾಮದ ಅಡೆಂಜ ಎಂಬಲ್ಲಿ ಖೋಟಾ ನೋಟು ಮುದ್ರಿಸುತ್ತಿದ್ದ ಸ್ಥಳಕ್ಕೆ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕಿ ಬಿಂದು ಮಣಿ ಆರ್. ಎನ್. ನಿರ್ದೇಶನದಂತೆ ನಡೆದ ಕಾರ್ಯಾಚರಣೆಯಲ್ಲಿ ೭ ಮಂದಿ ಆರೋಪಿಗಳ ಸಹಿತ ನೋಟು ಮುದ್ರಣಕ್ಕೆ ಬಳಸಲಾದ ಯಂತ್ರೋಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಉಪ್ಪಿನಂಗಡಿ: ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ತಂಗಡಿ ತಾಲೂಕು ಕಣಿಯೂರು ಗ್ರಾಮದ ಅಡೆಂಜ ಎಂಬಲ್ಲಿ ಖೋಟಾ ನೋಟು ಮುದ್ರಿಸುತ್ತಿದ್ದ ಸ್ಥಳಕ್ಕೆ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕಿ ಬಿಂದು ಮಣಿ ಆರ್. ಎನ್. ನಿರ್ದೇಶನದಂತೆ ನಡೆದ ಕಾರ್ಯಾಚರಣೆಯಲ್ಲಿ ೭ ಮಂದಿ ಆರೋಪಿಗಳ ಸಹಿತ ನೋಟು ಮುದ್ರಣಕ್ಕೆ ಬಳಸಲಾದ ಯಂತ್ರೋಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ದ.ಕ ಜಿಲ್ಲೆಯ ಪುತ್ತೂರು ತಾಲೂಕು ಬಪ್ಪಳಿಗೆ ಮನೆ ನಿವಾಸಿ ಇಬ್ರಾಹಿಂ (೬೦), ಕಾಸರಗೋಡು ಜಿಲ್ಲೆ ಪಾಂಡಿ ಚೆನ್ನಡ್ಕ ಕ್ವಾಟರ್ಸ್ ಮನೆ ಶರೀಫ (೫೧ ), ಉತ್ತರ ಕನ್ನಡ ಜಿಲ್ಲೆ ಹಳಿಯಾಳ ಮರಕವಾಡ ನಿವಾಸಿ ಸಂದೀಪ ಪುಂಡಲಿಕ ಶೋಳಂಬಿ (೩೦ ), ಕಾಸರಗೋಡು ಆಮೂರು ಪೋರ್ಕಡ ಮನೆ ನಿವಾಸಿ ಮಹಮ್ಮದ್ ನಬಾಸ್ (೩೭), ಪುತ್ತೂರು ಕುಂಬ್ರ ಎಂ ಎ ಆರ್ಕೆಡ್ ಬಿಲ್ಡಿಂಗ್ ನಿವಾಸಿ ಸಲ್ಮಾನ್ ಫಾರೀಸ್ (೨೫), ಬೆಳ್ತಂಗಡಿ ನಿನ್ನಿಕಲ್ಲು ಮನೆ ನಿವಾಸಿ ಸಿರಾಜ್ ಆಲಿಯಾಸ್ ಸಿರಾಜುದ್ದೀನ್ (೩೪), ಬೆಳ್ತಂಗಡಿ ಪುತ್ತಿಲ ನಿವಾಸಿ ಇರ್ಷಾದ್ (೩೧) ಬಂಧಿತರು. ಬೆಳ್ತಂಗಡಿ ತಾಲೂಕು ಕಣಿಯೂರು ಗ್ರಾಮದ ಅಡೆಂಜ ಎಂಬಲ್ಲಿ ಮಹಮ್ಮದ್ ಇದ್ರೀಸ್ ಎಂಬವರ ನೂತನವಾಗಿ ನಿರ್ಮಿಸಿದ ವಸತಿ ಕಟ್ಟಡದಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಿಕೊಂಡು ನಕಲಿ ನೋಟುಗಳನ್ನು ಮುದ್ರಿಸುತ್ತಿದ್ದು, ಅವುಗಳನ್ನು ಮಾರುಕಟ್ಟೆಯಲ್ಲಿ ಚಲಾವಣೆ ಮಾಡುತ್ತಿದ್ದಾರೆ ಎಂದು ಕೊಡಗು ಪೊಲೀಸ್ ಅಧೀಕ್ಷಕರು ಮಾಹಿತಿ ಸಂಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾ ಪೊಲೀಸ್ ಸಿಬ್ಬಂದಿ ಯೋಗೀಶ್ ಬಿ, ನಿರಂಜನ್ ಅವರ ತಂಡ ದ.ಕ ಜಿಲ್ಲಾ ವಿಶೇಷ ಘಟಕದ ಪೊಲೀಸ್ ನಿರೀಕ್ಷಕರಾದ ನಂದ ಕುಮಾರ್, ಎಎಸೈ ದೀಪಕ್, ಸಿಬ್ಬಂದಿ ಸತೀಶ್ ಹಾಗೂ ರೌಫ್ ಅವರ ತಂಡ ಉಪ್ಪಿನಂಗಡಿ ಪೊಲೀಸರೊಡಗೂಡಿ ಬುಧವಾರ ತಡ ರಾತ್ರಿ ಕಾರ್ಯಾಚರಣೆ ನಡೆಸಿತ್ತು. ಕಾರ್ಯಾಚರಣೆಯ ವೇಳೆ ೫೦೦ ಮುಖಬೆಲೆಯ 1 ನೋಟು ಮತ್ತು ಎ೪ ಸೈಜ್ ಹಾಳೆಯಲ್ಲಿ ಪ್ರಿಂಟ್ ಮಾಡಲಾದ ೫೦೦ ರು. ಮುಖ ಬೆಲೆಯ ನೋಟುಗಳಂತೆ ಕಾಣುವ -೨೧ ಎ೪ ಸೈಜ್ ಹಾಳೆಗಳು, ಕಂಪ್ಯೂಟರ್, ಸ್ಕ್ಯಾನರ್, ಝೆರಾಕ್ಸ್ ಯಂತ್ರ, ಪ್ರಿಂಟರ್, ಗಾಂಧೀಜಿ ಮುಖ ಚಹರೆ ಸೀಲ್, ಆರ್ ಬಿ ಐ ಹೆಸರಿನ ಸೆಕ್ಯೂರಿಟಿ ಥ್ರೆಡ್ ಹೊಂದಿರುವ ೫ ಬಾಕ್ಸ್ ಪೇಪರ್, ಆರ್‌ಬಿಐ ಭದ್ರತಾ ದಾರದ ಹೋಲುವ ಪ್ಲಾಸ್ಟಿಕ್ ರೋಲ್‌ಗಳು, ಪಿವಿಸಿ ಗ್ಲಾಸ್ ವೈಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ದೇಶದ್ರೋಹದ ಕಾರ್ಯ: ಕಣಿಯೂರು ಗ್ರಾಮದ ಅಡೆಂಜ ಎಂಬಲ್ಲಿ ಪ್ರಧಾನ ರಸ್ತೆಯಿಂದ ೨೦೦ ಮೀಟರ್ ದೂರದಲ್ಲಿ ಇತ್ತೀಚೆಗೆ ಭೂಮಿ ಖರೀದಿಸಿದ ಮಂದಿ ನಾಲ್ಕು ಮನೆಗಳುಳ್ಳ ಒಂದು ಹಂತಸ್ತಿನ ಕಟ್ಟಡ ನಿರ್ಮಿಸಿದ್ದರು. ಅದರಲ್ಲಿ ಒಂದು ಮನೆಯಲ್ಲಿ ವಾಸವಾಗಿದ್ದ ಮುಸ್ಲಿಂ ಕುಟುಂಬವೊಂದು ವಾತಾವರಣ ಹಿತಕಾರಿಯಾಗದೆ ನಿರ್ಗಮಿಸಿತ್ತು. ಬಳಿಕ ಖೋಟಾ ನೋಟಿನ ತಂಡ ಎರಡು ತಿಂಗಳ ಹಿಂದೆ ಈ ಮನೆಗೆ ಬಂದಿತ್ತು. ಹಗಲಿನ ಹೊತ್ತು ಯಾವುದೇ ಚಟುವಟಿಕೆ ತೋರದ ಈ ಮಂದಿ ರಾತ್ರಿ ಮಾತ್ರ ಕಟ್ಟಡದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ದಾಳಿ ನಡೆಸಲಾದ ಮನೆಯ ಪರಿಸರ ಪರಿಶೀಲಿಸಿದಾಗ ಖೋಟಾ ನೋಟಿನ ಮುದ್ರಣದ ವೇಳೆ ತಪ್ಪಾಗಿ ಮುದ್ರಿಸಲ್ಪಟ್ಟ ನೋಟುಗಳನ್ನು ಮನೆಯ ಹಿಂಭಾಗದಲ್ಲಿ ಬೆಂಕಿ ಹಚ್ಚಿ ಸುಟ್ಟ ಸ್ಥಿತಿ ಕಂಡು ಬಂದಿತ್ತು. ಮಾತ್ರವಲ್ಲದೆ ಪರಿಸರದಲ್ಲಿ ತುಂಡಾದ ನೋಟುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದೂ ಕೂಡಾ ಕಂಡು ಬಂದಿತ್ತು. ಆರೋಪಿಗಳು ಬಳಸುತ್ತಿದ್ದ ದ್ವಿಚಕ್ರ ವಾಹನಗಳೂ ಕೂಡಾ ಮನೆಯ ಪರಿಸರದಲ್ಲಿದೆ. ಕಾರ್ಯಾಚರಣೆಯಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣಾ ಎಸೈ ಸುತೇಶ್ ಕೆ ಪಿ, ಎಎಸ್ಐ ದಾಮೋದರ ನಾಯ್ಕ್, ಸಿಬ್ಬಂದಿಗಳಾದ ನಂಜುಡಯ್ಯ, ಗಜೇಂದ್ರ ನಾಯ್ಕ್, ಚರಣ್ ಭಾಗವಹಿಸಿದ್ದರು.
ಸ್ಥಳೀಯರ ಮೇಲೆ ನಿಗಾ: ಪರಿಸರದ ಮಂದಿ ಮೀನು ಹಿಡಿಯುವ ಸಲುವಾಗಿ ರಾತ್ರಿ ವೇಳೆ ಈ ಕಟ್ಟಡದ ಸಮೀಪದ ರಸ್ತೆಯಲ್ಲಿ ಸಂಚರಿಸುತ್ತಿದ್ದಾಗ ಕಟ್ಟಡದಲ್ಲಿರುವವರು ಸ್ಥಳೀಯರನ್ನು ನಿಗಾವಿರಿಸುತ್ತಿರುವುದು ಕಂಡು ಬಂದಿತ್ತು. ಇದು ಸಹಜ ಕುತೂಹಲದ ನೋಟವಿರಬಹುದೆಂದು ಸ್ಥಳೀಯರು ಅಂದಾಜಿಸಿದ್ದರೇ ವಿನಃ ಇಲ್ಲೊಂದು ಖೋಟಾ ನೋಟಿನ ಮುದ್ರಾಣಾಲಯ ಕಾರ್ಯಾಚರಿಸುತ್ತಿದ್ದ ಬಗ್ಗೆ ಶಂಕೆ ಮೂಡಿರಲಿಲ್ಲ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.