ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ಇಲ್ಲಿನ ನೇತ್ರಾವತಿ ನದಿಯ ಒಡಲಲ್ಲಿರುವ ಉದ್ಭವ ಲಿಂಗವೇ ಕ್ಷೇತ್ರದಲ್ಲಿನ ಶ್ರೀ ದೇವರ ಮೂಲ ಬಿಂಬವಾಗಿದ್ದು, ಉದ್ಭವಲಿಂಗಕ್ಕೆ ಪೂಜೆ ಸಲ್ಲಿಸುವ ನಿಟ್ಟಿನಲ್ಲಿ ಸರ್ಕಾರದ ಸಹಕಾರವನ್ನು ಪಡೆಯಬೇಕು ಎಂದು ಶುಕ್ರವಾರ ನಡೆಸಿದ ಪ್ರಶ್ನಾ ಚಿಂತನೆಯಲ್ಲಿ ವ್ಯಕ್ತವಾಯಿತು.ತಾಲೂಕಿನ ಬಿಳಿಯೂರು ಎಂಬಲ್ಲಿ ನೇತ್ರಾವತಿ ನದಿಗೆ ಅಣೆಕಟ್ಟು ನಿರ್ಮಿಸಿದ ಪರಿಣಾಮ ಉಪ್ಪಿನಂಗಡಿಯ ವರೆಗೆ ವಿಸ್ತರಿಸಲ್ಪಟ್ಟ ಹಿನ್ನೇರಿನಿಂದಾಗಿ, ಅನಾದಿಕಾಲದಿಂದಲೂ ಪೂಜಿಸಿಕೊಂಡು ಬರಲಾಗುತ್ತಿದ್ದ ನೇತ್ರಾವತಿ ನದಿ ಗರ್ಭದಲ್ಲಿರುವ ಉದ್ಭವ ಲಿಂಗಕ್ಕೆ ಮಖೆ ಜಾತ್ರೆಯ ಸಮಯದಲ್ಲಿ ಪೂಜೆ ಸಲ್ಲಿಸುವುದು ಅಸಾಧ್ಯವಾಗಿದೆ. ಇದರ ಸಾಧಕ ಬಾಧಕಗಳನ್ನು ಕಂಡುಕೊಳ್ಳುವ ಸಲುವಾಗಿ ಉಡುಪಿಯ ಜ್ಯೋತಿಷ್ಯಶಾಸ್ತ್ರ ಪಂಡಿತರಾದ ಗೋಪಾಲಕೃಷ್ಣ ಜೋಯಿಸರ ನೇತೃತ್ವದಲ್ಲಿ ಪ್ರಶ್ನಾ ಚಿಂತನೆಯನ್ನು ನಡೆಸಲಾಯಿತು. ಪ್ರಶ್ನಾ ಚಿಂತನೆಯ ವೇಳೆ ಪುರಾಣ ಪ್ರಸಿದ್ಧ ಉಪ್ಪಿನಂಗಡಿ ಕ್ಷೇತ್ರದಲ್ಲಿ ನದಿ ಗರ್ಭದಲ್ಲಿನ ಉದ್ಭವ ಲಿಂಗವೇ ಶ್ರೀ ದೇವರ ಮೂಲ ಬಿಂಬವಾಗಿದ್ದು, ಸರ್ವ ಕಾಲದಲ್ಲಿಯೂ ಪೂಜೆ ಸಲ್ಲಿಸುವ ಸಲುವಾಗಿ ನದಿ ದಡದಲ್ಲಿ ಸಹಸ್ರಲಿಂಗೇಶ್ವರನಿಗೆ ದೇವಾಲಯವನ್ನು ನಿರ್ಮಿಸಲಾಗಿತ್ತು. ಈ ಕಾರಣಕ್ಕೆ ಉದ್ಭವಲಿಂಗದ ಪೂಜೆಯನ್ನು ನಿರ್ಲಕ್ಷಿಸುವಂತಿಲ್ಲ ಎಂದು ತಿಳಿಸಲಾಯಿತು. ಈ ಸಂಬಂಧ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಬೇಕೆಂದೂ ಪ್ರಶ್ನಾ ಚಿಂತನೆಯಲ್ಲಿ ಸೂಚಿಸಲಾಗಿದೆ. ದೇವಸ್ಥಾನದ ದ್ವಜಾವರೋಹರಣದ ದಿನ ಶ್ರೀ ದೇವರ ಪೇಟೆ ಸವಾರಿಯ ಬಳಿಕ ಅವಭೃತ ಸ್ನಾನ ನಡೆಸುವ ಸ್ಥಳದಲ್ಲೇ ಭಕ್ತಾದಿಗಳು ನಡೆಸುವ ಪಿಂಡ ಪ್ರದಾನಾದಿ ಕಾರ್ಯ, ಅಸ್ಥಿ ವಿಸರ್ಜನೆ ನಡೆಯುತ್ತಿದ್ದು, ಇದು ಶ್ರೀ ದೇವರ ಅವಭೃತ ಸ್ನಾನಕ್ಕೆ ತೊಡಕು ಉಂಟು ಮಾಡುವುದೇ ಎಂಬ ಪ್ರಶ್ನೆ ಕೇಳಲಾಯಿತು. ದಹನ ಕ್ರಿಯೆಯಿಂದ ಲಭಿಸುವ ಅಸ್ಥಿಗೆ ನಿಷೇಧಾತ್ಮಕ ಭಾವನೆ ಸಲ್ಲದು. ಅದು ಅಶುದ್ದತೆಯ ವಸ್ತುವಲ್ಲ. ಅದರಿಂದ ಯಾವುದೇ ರೀತಿಯಲ್ಲಿ ದೇವತಾ ಕಾರ್ಯಕ್ಕೆ ತೊಡಕುಂಟಾಗದು ಎಂದು ತಿಳಿಸಲಾಯಿತು. ಪ್ರಶ್ನಾ ಚಿಂತನೆಯ ವೇಳೆ ಶ್ರೀ ಕ್ಷೇತ್ರದ ಪವಿತ್ರಪ್ರಾಣಿ ವಿಷ್ಣುಮೂರ್ತಿ ಕುದ್ದಣ್ಣಾಯ, ತಂತ್ರಿಗಳಾದ ಕಾರ್ತಿಕ್ ತಂತ್ರಿ, ಆಡಳಿತಾಧಿಕಾರಿ ಪುರಂದರ ಹೆಗ್ಡೆ, ಪ್ರಧಾನ ಅರ್ಚಕ ಕೆ. ಹರೀಶ್ ಉಪಾಧ್ಯಾಯ, ಶಂಕರ ನಾರಾಯಣ ಭಟ್ , ಪ್ರಮುಖರಾದ ಕೆ. ರಾಧಾಕೃಷ್ಣ, ಅರ್ತಿಲ ಕೃಷ್ಣ ರಾವ್, ಸೋಮನಾಥ, ಕರುಣಾಕರ ಸುವರ್ಣ, ಗೋವಿಂದ ಭಟ್, ಡಾ. ಗೋವಿಂದಪ್ರಸಾದ್ ಕಜೆ, ಕಂಗ್ವೆ ವಿಶ್ವನಾಥ ಶೆಟ್ಟಿ, ವಿದ್ಯಾಲಕ್ಷ್ಮೀ ಪ್ರಭು, ದೇವದಾಸ್ ರೈ, ಸುಧಾಕರ ಶೆಟ್ಟಿ, ಹರಿರಾಮಚಂದ್ರ, ಜಯಂತ ಪುರೋಳಿ, ವಿದ್ಯಾಧರ ಜೈನ್, ರಾಮಚಂದ್ರ ಮಣಿಯಾಣಿ, ಜಗದೀಶ್ ಶೆಟ್ಟಿ, ಯತೀಶ್ ಶೆಟ್ಟಿ, ಶರತ್, ಕೈಲಾರ್ ರಾಜಗೋಪಾಲ ಭಟ್, ಕಿಶೋರ್ ಜೋಗಿ, ಶಾಂತರಾಮ ಭಟ್, ನಾಗೇಶ್ ಪ್ರಭು, ದೇವಳದ ವ್ಯವಸ್ಥಾಪಕ ವೆಂಕಟೇಶ್ ರಾವ್, ಪದ್ಮನಾಭ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.
.