ಹೊರ ಜಿಲ್ಲೆಯವರಿಂದ ನದಿ ಮಾಲಿನ್ಯ । ನೆಲ, ಜಲ ಸಂರಕ್ಷಣಾ ಸಮಿತಿ ಆತಂಕ
ಉಪ್ಪಿನಂಗಡಿ: ಜಲ ಶುದ್ದೀಕರಣಕ್ಕಾಗಿ ನೇತ್ರಾವತಿ ಮತ್ತು ಕುಮಾರಧಾರಾ ನದಿಯಲ್ಲಿ ಮೀನುಗಾರಿಕೆ ನಿಷೇಧಿಸಿ ಸ್ಥಳೀಯಾಡಳಿತ ನದಿ ಶುದ್ಧೀಕರಣಕ್ಕೆ ಕಾಳಜಿ ವಹಿಸುತ್ತಿದ್ದಂತೆಯೇ ನದಿ ಪಾತ್ರದಲ್ಲಿ ಸ್ಪೋಟಕಗಳನ್ನು ಬಳಸಿ ಮೀನು ಹಿಡಿಯುವ ಕೃತ್ಯಗಳು ಅಂಕುಶ ರಹಿತವಾಗಿ ನಡೆಯುತ್ತಿದೆ ಎಂದು ನೆಲ ಜಲ ಸಂರಕ್ಷಣಾ ಸಮಿತಿ ಅಧ್ಯಕ್ಷ ಕೈಲಾರ್ ರಾಜಗೋಪಾಲ ಭಟ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿರುವ ಅವರು, ಹೊರ ಜಿಲ್ಲೆಯ ಮೀನುಗಾರ ಕುಟುಂಬಗಳು ಉಪ್ಪಿನಂಗಡಿ ಪರಿಸರದಲ್ಲಿ ಠಿಕಾಣಿ ಹೂಡಿ ತೆಪ್ಪದಲ್ಲಿ ನದಿಯುದ್ದಕ್ಕೂ ಸಂಚರಿಸಿ ಬಲೆ ಹಾಕಿ ಮೀನು ಹಿಡಿಯುತ್ತಿದ್ದವರನ್ನು ನದಿಯ ಜಲ ಶುದ್ದೀಕರಣದಲ್ಲಿ ಪ್ರಮುಖ ಪಾತ್ರ ವಹಿಸುವ ಮತ್ಸ್ಯ ಸಂಪತ್ತಿನ ರಕ್ಷಣೆಯ ದೃಷ್ಟಿಯಿಂದ ತಡೆಗಟ್ಟಲಾಯಿತು. ಆದರೆ ಸ್ಪೋಟಕಗಳನ್ನು ಬಳಸಿ ಮೀನು ಹಿಡಿಯುವ ಕೃತ್ಯ ನದಿಯ ಆಳವುಳ್ಳ ಪ್ರದೇಶದಲ್ಲಿ ನಿರಂತರ ನಡೆಯುತ್ತಿದೆ. ಇದರಿಂದಾಗಿ ಸ್ಪೋಟಕಕ್ಕೆ ಸಿಲುಕಿ ಅತೀ ಸಣ್ಣ ಗಾತ್ರದ ಮೀನಿನ ಮರಿ ಸಹಿತ ಆ ಭಾಗದಲ್ಲಿರುವ ಮತ್ಯ ಸಂಕುಲವೇ ನಾಶವಾಗುತ್ತಿದೆ ಎಂದು ಮಾಹಿತಿ ನೀಡಿದರು.ನೇತ್ರಾವತಿ ಹಾಗೂ ಕುಮಾರಧಾರಾ ನದಿಯಲ್ಲಿ ಉಪ್ಪಿನಂಗಡಿ ಭಾಗದಲ್ಲಿ ಯಾವುದೇ ಸ್ವರೂಪದಲ್ಲಿ ಮೀನು ಹಿಡಿಯುವುದನ್ನು ಸ್ಥಳೀಯ ಆಡಳಿತ ನಿಷೇಧಿಸಿ ಮೀನುಗಾರರ ತೆಪ್ಪವನ್ನು ಮುಟ್ಟುಗೋಲು ಹಾಕಿಕೊಂಡು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದ ಪರಿಣಾಮ ಕೆಲ ದಿನಗಳ ತನಕ ನದಿ ಮೀನು ಮಾರಾಟ ಪ್ರಕ್ರಿಯೆ ಕಾಣಿಸುತ್ತಿರಲಿಲ್ಲ. ಆದರೆ ಇದೀಗ ಮತ್ತೆ ನದಿ ಮೀನು ಮಾರಾಟಗಾರರು ಉಪ್ಪಿನಂಗಡಿಯಲ್ಲಿ ಕಾಣಿಸಿಕೊಂಡಿದ್ದು, ದೊಡ್ಡ ದೊಡ್ಡ ಗಾತ್ರದ ಮೀನುಗಳನ್ನು ಹಿಡಿದು ತಂದು ಭಾರೀ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ನದಿಯಲ್ಲಿ ಮೀನು ಹಿಡಿಯುವುದನ್ನು ನಿಷೇಧಿಸಿದ ಬಳಿಕ ಇವರಿಗೆ ಎಲ್ಲಿ ಈ ಪ್ರಮಾಣದ ಮೀನುಗಳು ದೊರಕುತ್ತಿದೆ ಎನ್ನುವುದು ಸಹಜವಾಗಿ ಕಾಡುವ ಪ್ರಶ್ನೆಯಾಗಿದೆ.
ನದಿಯ ಪೇಟೆ ಭಾಗವನ್ನು ಹೊರತುಪಡಿಸಿ ಬೇರೆ ಕಡೆಗಳಲ್ಲಿ ಮೀನು ಹಿಡಿದು ತಂದು ಮಾರಾಟ ಮಾಡುತ್ತಿರುವ ಸಾಧ್ಯತೆ ಇದ್ದು, ಇದು ಕೂಡಾ ನದಿಯಲ್ಲಿನ ಮೀನುಗಾರಿಕೆ ನಿಷೇಧಿಸಿದ ಮೂಲ ಉದ್ದೇಶವನ್ನು ಬುಡಮೇಲು ಗೊಳಿಸುವಂತೆ ಮಾಡಿದೆ. ಬಿಳಿಯೂರು ಅಣೆಕಟ್ಟಿನ ಹಿನ್ನೀರು ಸಂಗ್ರಹವಾಗುವ ಪ್ರದೇಶದುದ್ದಕ್ಕೂ ಕೆಲ ವರ್ಷಗಳ ಕಾಲ ಮೀನುಗಾರಿಕೆಯನ್ನು ನಿಷೇಧಿಸುವ ಅನಿವಾರ್ಯತೆ ಇದ್ದು, ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಪರಿಣಾಮಕಾರಿ ಕ್ರಮವನ್ನು ಕೈಗೊಳ್ಳಬೇಕೆಂದು ಕೈಲಾರ್ ಭಟ್ ಅಗ್ರಹಿಸಿದ್ದಾರೆ.