ಉಪ್ಪಿನಂಗಡಿ: ಕೆಸರು ಗದ್ದೆಯಾದ ರಾಷ್ಟ್ರೀಯ ಹೆದ್ದಾರಿ 75ರ ಸರ್ವಿಸ್‌ ರಸ್ತೆ

KannadaprabhaNewsNetwork |  
Published : Jun 28, 2025, 12:18 AM IST
ಕೆಸರು ಗದ್ದೆಯುಂಟಾಗಿ | Kannada Prabha

ಸಾರಾಂಶ

ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಭಾಗವಾಗಿ ಉಪ್ಪಿನಂಗಡಿ ಹಳೆಗೇಟು ಎಂಬಲ್ಲಿ ಸರ್ವೀಸ್ ರಸ್ತೆಯ ಬದಿ ನಿರ್ಮಿಸಿದ ಚರಂಡಿ ಬದಿಗೆ ಮಣ್ಣು ತುಂಬಿಸುವ ಕಾರ್ಯಕ್ಕೆ ಗುತ್ತಿಗೆದಾರ ಸಂಸ್ಥೆ ಹೊರಟಿದ್ದು ಅವಾಂತರ ಸೃಷ್ಟಿಯಾಗಿದೆ.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಭಾಗವಾಗಿ ಇಲ್ಲಿನ ಹಳೆಗೇಟು ಎಂಬಲ್ಲಿ ಸರ್ವೀಸ್ ರಸ್ತೆಯ ಬದಿ ನಿರ್ಮಿಸಿದ ಚರಂಡಿ ಬದಿಗೆ ಮಣ್ಣು ತುಂಬಿಸುವ ಕಾರ್ಯಕ್ಕೆ ಗುತ್ತಿಗೆದಾರ ಸಂಸ್ಥೆ ಹೊರಟಿದ್ದು ಅವಾಂತರ ಸೃಷ್ಟಿಯಾಗಿದೆ. ಇದರಿಂದಾಗಿ ಈ ಜಡಿ ಮಳೆಗೆ ಮಣ್ಣೆಲ್ಲಾ ಕರಗಿ ರಸ್ತೆಯಿಡೀ ಕೆಸರು ಗದ್ದೆಯುಂಟಾಗಿ ವಾಹನ ಸವಾರರು ಸಂಕಷ್ಟಪಡುವ ಸ್ಥಿತಿ ನಿರ್ಮಾಣವಾಗಿದೆ.

ಉಪ್ಪಿನಂಗಡಿ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಫಥ ಕಾಮಗಾರಿ ಆರಂಭವಾಗಿ ವರ್ಷಗಳು ಉರುಳಿದರೂ ಕಾಮಗಾರಿ ಇನ್ನೂ ಅಪೂರ್ಣ ಸ್ಥಿತಿಯಲ್ಲಿಯೇ ಇದೆ. ಕೂಟೇಲು ಬಳಿಯಿಂದ ಮಠದವರೆಗಿನ ಎತ್ತರಿಸಲ್ಪಟ್ಟ ಹೆದ್ದಾರಿಯಲ್ಲಿ ಈಗ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ಹಳೆಗೇಟಿನಲ್ಲಿ ತಿರುವು ಪಡೆದು ಮರ್ಧಾಳ ಕಡೆಗೆ ಸಂಚರಿಸಬೇಕಾದರೆ ವಾಹನಗಳು ಎತ್ತರಿಸಲ್ಪಟ್ಟ ರಸ್ತೆಯ ಎರಡೂ ಬದಿಯಲ್ಲಿರುವ ಸರ್ವೀಸ್ ರಸ್ತೆಯಲ್ಲಿ ಸಾಗಬೇಕು. ಇಲ್ಲಿ ಒಂದು ಬದಿಯ ಸರ್ವೀಸ್ ರಸ್ತೆಯ ಕಾಮಗಾರಿ ಶೇ.೭೫ ಮುಗಿದಿದ್ದು, ಉಳಿದ ಕಡೆ ರಸ್ತೆ ನಿರ್ಮಾಣವಾಗಬೇಕಿದೆ. ಇನ್ನೊಂದು ಬದಿಯ ಸರ್ವೀಸ್ ರಸ್ತೆಯೂ ಸಂಪೂರ್ಣ ಹದಗೆಟ್ಟಿದ್ದು, ಹೊಂಡ ಗುಂಡಿಗಳಿಂದ ಕೂಡಿದೆ. ಇಲ್ಲಿ ಇನ್ನಷ್ಟೇ ಹೊಸ ರಸ್ತೆ ನಿರ್ಮಾಣವಾಗಬೇಕಿದೆ.

ಮೊದಲೇ ಹೊಂಡ ಗುಂಡಿಗಳಿಂದ ಕೂಡಿರುವ ಈ ರಸ್ತೆಯ ಬದಿಯಲ್ಲಿ ನಿರ್ಮಿಸಿರುವ ಚರಂಡಿಗೆ ಬದಿ ಮಣ್ಣು ತುಂಬಿಸುವ ಕೆಲಸವನ್ನು ಎರಡು ಮೂರು ದಿನಗಳಿಂದ ಕಾಮಗಾರಿ ಗುತ್ತಿಗೆದಾರ ಸಂಸ್ಥೆ ಮಾಡುತ್ತಿದೆ. ಮಣ್ಣನ್ನು ರಸ್ತೆಯಲ್ಲೇ ತಂದು ರಾಶಿ ಹಾಕಿ ಮತ್ತೆ ಅದನ್ನು ಹಿಟಾಚಿ ಮೂಲಕ ಚರಂಡಿ ಬದಿಗೆ ತುಂಬಿಸಲಾಗುತ್ತಿದೆ. ಈಗ ಮಳೆಗಾಲದ ಸಮಯವಾಗಿದ್ದರಿಂದ ಮಣ್ಣೆಲ್ಲಾ ಕರಗಿ ರಸ್ತೆ ಸಂಪೂರ್ಣ ಕೆಸರುಮಯವಾಗಿದ್ದು, ಗದ್ದೆಯಂತಾಗಿದೆ. ಮೊದಲೇ ಸಂಚಾರಕ್ಕೆ ತೊಂದರೆಯಾಗುತ್ತಿರುವ ಈ ರಸ್ತೆಯಲ್ಲಿ ಮಳೆಯ ಸಂದರ್ಭ ಈ ಕಾಮಗಾರಿಯ ಅಗತ್ಯವಿತ್ತೇ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇನ್ನೊಂದು ರಸ್ತೆ ಬಂದ್!: ಒಂದು ಸರ್ವೀಸ್ ರಸ್ತೆಯಲ್ಲಿ ಕೆಸರು, ಹೊಂಡ- ಗುಂಡಿಗಳಿಂದಾಗಿ ಸಂಚಾರಕ್ಕೆ ತೊಂದರೆಯಾಗುತ್ತಿರುವ ಸಂದರ್ಭದಲ್ಲೇ ಕಾಮಗಾರಿಯ ನೆಪದಲ್ಲಿ ಶೇ.೭೫ರಷ್ಟು ರಸ್ತೆಯ ಕಾಮಗಾರಿ ಆಗಿರುವ ಮತ್ತೊಂದು ಸರ್ವೀಸ್ ರಸ್ತೆಯನ್ನು ಜೂ.೨೪ರಂದು ಮುಚ್ಚಲಾಗಿತ್ತು. ಇದರಿಂದಾಗಿ ಮರ್ಧಾಳ ಕಡೆಗೆ ತೆರಳುವ ವಾಹನಗಳೆಲ್ಲಾ ಅನಿವಾರ್ಯವಾಗಿ ಕೆಸರುಗದ್ದೆಯಂತಾಗಿರುವ ಈ ರಸ್ತೆಯಲ್ಲೇ ಸಂಚರಿಸುವ ಪ್ರಸಂಗ ಬಂದೊದಗಿತ್ತು. ಇದರಿಂದಾಗಿ ವಾಹನಗಳು ಹೊಂಡ- ಗುಂಡಿಯಲ್ಲಿ ಬೀಳುತ್ತಾ, ಏಳುತ್ತಾ ಸಾಗುತ್ತಿರುವ ನಡುವೆಯೇ ಈಗ ಕೆಸರಿನಲ್ಲಿ ಜಾರಿಕೊಂಡು ಹೋಗಬೇಕಾದ ಸಂದರ್ಭವೂ ಬಂದೊದಗಿದೆ.

ಕೂಟೇಲು ಬಳಿ ಬಂದ್ ಮಾಡಲಾದ ರಸ್ತೆಯ ಬಗ್ಗೆ ಯಾವುದೇ ಸೂಚನೆ ನೀಡದ್ದರಿಂದ ಕೆಲವು ವಾಹನಗಳು ಈ ರಸ್ತೆಯಲ್ಲಿ ಹಳೆಗೇಟು ತನಕ ಬಂದು ವಾಪಸ್ ತಿರುಗಿಸಿ ಹೋಗುವ ಪರಿಸ್ಥಿತಿಯೂ ನಿರ್ಮಾಣವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ