ಯುಪಿಎಸ್‌ಸಿ ಪರೀಕ್ಷೆ: ಇವರೇ ರಾಜ್ಯದ ಸಾಧಕರು

KannadaprabhaNewsNetwork | Published : Apr 23, 2025 12:35 AM

ಸಾರಾಂಶ

2024ನೇ ಸಾಲಿನ ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್ಸಿ) ಫಲಿತಾಂಶ ಪ್ರಕಟವಾಗಿದ್ದು, ರಾಜ್ಯದ ಹಲವು ಅಭ್ಯರ್ಥಿಗಳು ಕೇಂದ್ರ ಸೇವೆಗೆ ಆಯ್ಕೆಯಾಗಿದ್ದಾರೆ.

2024ನೇ ಸಾಲಿನ ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್ಸಿ) ಫಲಿತಾಂಶ ಪ್ರಕಟವಾಗಿದ್ದು, ರಾಜ್ಯದ ಹಲವು ಅಭ್ಯರ್ಥಿಗಳು ಕೇಂದ್ರ ಸೇವೆಗೆ ಆಯ್ಕೆಯಾಗಿದ್ದಾರೆ. ಈ ಪೈಕಿ, ಕೋಲಾರದ ಎ.ಮಧು ಯಾವುದೇ ಟ್ಯೂಷನ್‌ ಪಡೆಯದೇ ಸ್ವಂತ ಓದಿನಿಂದ ಯಶಸ್ಸು ಸಾಧಿಸಿದರೆ, ಶ್ರೀನಿವಾಸಪುರದ ಮಾಧವಿ ಕೇವಲ ಆನ್‌ಲೈನ್ ಕೋಚಿಂಗ್‌ನಿಂದಲೇ ಗುರಿ ಸಾಧಿಸಿದ್ದಾರೆ. ಸತತ ಶ್ರಮ, ನಿರಂತರ ಅಭ್ಯಾಸದಿಂದ ದೇಶದ ಪ್ರತಿಷ್ಠಿತ ಪರೀಕ್ಷೆಯಲ್ಲಿ ಸಾಧನೆಗೈದ ಕನ್ನಡಿಗರ ಪರಿಶ್ರಮದ ವಿವರ ಇಲ್ಲಿದೆ. ಟ್ಯೂಷನ್‌ ಪಡೆಯದೆ

ಪಾಸಾದ ರೈತನ ಮಗ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 544ನೇ ರ್‍ಯಾಂಕ್ ಪಡೆದಿರುವ ಕೋಲಾರ ತಾಲೂಕು ಇರಗಸಂದ್ರ ಗ್ರಾಮದ ಎ. ಮಧು, ಕೃಷಿ ಕುಟುಂಬಕ್ಕೆ ಸೇರಿದ ಆನಂದ ಗೌಡ ಮತ್ತು ಸುಶೀಲಮ್ಮ ದಂಪತಿ ಮಗ. ದಿ.ಡಿ.ಕೆ.ರವಿ ಅವರ ಸೇವೆಯನ್ನು ಮನಗೊಂಡು ಐಎಎಸ್ ಮಾಡಲು ನಿರ್ಧರಿಸಿದ್ದ ಮಧು, ಬಿಎಸ್ಸಿ ಅಗ್ರಿಕಲ್ಚರ್ ಮಾಡಿ, ಯಾವುದೇ ಇನ್‌ಸ್ಟಿಟ್ಯೂಟ್‌ ಸೇರದೆ ಸ್ವತ: ಓದಿ ಐದನೇ ಪ್ರಯತ್ನದಲ್ಲಿ ಯಶ ಸಾಧಿಸಿದ್ದಾರೆ. ಮುಂದಿನ ದಿನಗಳಲ್ಲಿ ಐಎಎಸ್ ಸೇವೆ ಮಾಡುವ ಬಯಕೆ ಹೊಂದಿದ್ದಾರೆ.

ಚಿಕ್ಕಂದಿನಿಂದಲೇ ಐಎಎಸ್ ಮಾಡುವ ಉದ್ದೇಶವನ್ನು ಹೊಂದಿದ್ದೆ. ರವಿ ಅವರ ಸಾಧನೆ ನೋಡಿದಾಗ ನನ್ನ ನಿರ್ಧಾರ ಮತ್ತಷ್ಟು ದೃಢವಾಯಿತು ಎನ್ನುತ್ತಾರೆ ಮಧು.41ನೇ ರ್‍ಯಾಂಕ್‌ ಪಡೆದ ರಾಣೆಬೆನ್ನೂರಿನ ವೈದ್ಯ!ರಾಣಿಬೆನ್ನೂರು: ಹಾವೇರಿ ಜಿಲ್ಲೆ ರಾಣಿಬೆನ್ನೂರು ತಾಲೂಕಿನ ಕೋಡಿಯಾಲ ಹೊಸಪೇಟೆ ಗ್ರಾಮದ ಡಾ.ಸಚಿನ್ ಬಸವರಾಜ ಗುತ್ತೂರು, 41ನೇ ರ‍್ಯಾಂಕ್ ಪಡೆದಿದ್ದಾರೆ. 2019- 20ನೇ ಸಾಲಿನಲ್ಲಿ ಎಂಬಿಬಿಎಸ್ ಪದವಿ ಗಳಿಸಿದ ನಂತರ ದೆಹಲಿಯಲ್ಲಿ ಐಎಎಸ್ ಕೋಚಿಂಗ್ ಪಡೆದಿದ್ದು, ಇದೀಗ ನಾಲ್ಕನೇ ಪ್ರಯತ್ನದಲ್ಲಿ ಉತ್ತೀರ್ಣರಾಗಿದ್ದಾರೆ. ಸಚಿನ್ ಸಹೋದರ ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದು, ತಂದೆ ನಡೆಸುತ್ತಿರುವ ಇಟ್ಟಿಗೆ ಉದ್ದಿಮೆಯಲ್ಲಿ ಕೈಜೋಡಿಸಿದ್ದಾರೆ. ಸಚಿನ್ ತಂದೆ ಬಸವರಾಜಗೆ ಪಿಎಸ್‌ಐ ಆಗುವ ಆಸೆಯಿದ್ದರೂ ಅದು ಕೈಗೂಡಿರಲಿಲ್ಲ. ಇದೀಗ ಮಗ ಐಎಎಸ್ ಪರೀಕ್ಷೆ ಪಾಸು ಮಾಡಿ, ಕೇಂದ್ರ ಸರ್ಕಾರದ ಸೇವೆಗೆ ಸೇರುವ ಮೂಲಕ ತಂದೆಯ ಆಸೆಯನ್ನು ಪೂರೈಸಿದ್ದಾರೆ.ಆನ್‌ಲೈನ್ ಕೋಚಿಂಗ್‌ನಿಂದಲೇ

ಗುರಿ ಸಾಧಿಸಿದ ಡಾ.ಮಾಧವಿಶ್ರೀನಿವಾಸಪುರ: ಕೋಲಾರ ಜಿಲ್ಲೆ ಶ್ರೀನಿವಾಸಪುರದ ಡಾ.ಮಾಧವಿ ಯುಪಿಎಸ್ಸಿಯಲ್ಲಿ 446ನೇ ರ್‍ಯಾಂಕ್‌ ಗಳಿಸಿದ್ದಾರೆ. ರಾಜಾಜಿನಗರ ಇಎಸ್‌ಐ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಎಂಬಿಬಿಎಸ್ ಪದವಿ ಪಡೆದುಕೊಂಡ ಇವರು ಮನೆಯಲ್ಲೇ ಇದ್ದು ನಿರಂತರವಾಗಿ ಆನ್‌ಲೈನ್ ಕೋಚಿಂಗ್ ಪಡೆದುಕೊಂಡು ತಮ್ಮ ಗುರಿ ಸಾಧಿಸಿದ್ದಾರೆ. ತಾಲೂಕಿನ ಮುತಕಪಲ್ಲಿ ಸರ್ಕಾರಿ ಶಾಲೆ ಮುಖ್ಯ ಶಿಕ್ಷಕರಾಗಿರುವ ಡಾ.ಆರ್.ರವಿಕುಮಾರ್ ಹಾಗೂ ಲಕ್ಷ್ಮೀಸಾಗರದಲ್ಲಿ ಸರ್ಕಾರಿ ಶಿಕ್ಷಕಿಯಾಗಿರುವ ನಂದಿನಿ ದಂಪತಿ ಪುತ್ರಿ ಮಾಧವಿ. ತಹಸೀಲ್ದಾರ್ ಆಗಿ ನಿವೃತ್ತರಾಗಿರುವ ದೊಡ್ಡಪ್ಪ ಶ್ರೀನಿವಾಸ್‌ ಅವರ ಸಾಧನೆಯನ್ನೇ ಆದರ್ಶವಾಗಿ ಇಟ್ಟುಕೊಂಡು, ನಿರಂತರ ಸಾಧನೆಯಿಂದ ಇವರು ಗುರಿ ಸಾಧಿಸಿದ್ದಾರೆ. ತಂದೆ, ಮಗಳಿಗೆ ಆಗಾಗ ಸಲಹೆ-ಸೂಚನೆಗಳನ್ನು ನೀಡುತ್ತಿದ್ದು, ಈ ಸಲಹೆಯೇ ತಮ್ಮ ಸಾಧನೆಗೆ ಸಹಾಯಕವಾಯಿತು ಎನ್ನುತ್ತಾರೆ ಅವರು.

ಕನ್ನಡದಲ್ಲೇ ಪರೀಕ್ಷೆಬರೆದು 462ನೇ ರ್‍ಯಾಂಕ್‌

ತಾಳಿಕೋಟೆ: ಕನ್ನಡ ಮಾಧ್ಯಮದಲ್ಲಿಯೇ ಪರೀಕ್ಷೆ ಬರೆದು, ಯುಪಿಎಸ್‌ಸಿಯಲ್ಲಿ 462ನೇ ಸ್ಥಾನ ಗಿಟ್ಟಿಕೊಂಡಿದ್ದಾರೆ ಡಾ.ಮಹೇಶ ಮಡಿವಾಳರ. ಸತತ ನಾಲ್ಕು ಬಾರಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ವಿಫಲಗೊಂಡಿದ್ದ ಡಾ.ಮಹೇಶ್‌, 5ನೇ ಬಾರಿಗೆ ತಮ್ಮ ಯಶಸ್ಸಿನ ಮೆಟ್ಟಿಲು ಏರಿದ್ದಾರೆ. ವಿಜಯಪುರ ಜಿಲ್ಲೆ ತಾಳಿಕೋಟೆ ತಾಲೂಕಿನ ಮಡಿಕೇಶ್ವರ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಡಳಿತ ವೈದ್ಯಾಧಿಕಾರಿಯಾಗಿ ಇವರು ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ ತಿಳುವಳಿಕೆ ಬರುವ ವೇಳೆಗೆ ತಂದೆ-ತಾಯಿ ಬೇರ್ಪಟ್ಟಿದ್ದರು. ಇವರ ತಾಯಿ ಇವರನ್ನು ಸಾಕಲು ಮನೆಗೆಲಸಗಳಿಗೆ ತೆರಳುತ್ತಿದ್ದರು. ಎಸ್‌ಎಸ್‌ಎಲ್‌ಸಿವರೆಗೂ ಇವರು ಕನ್ನಡ ಮಾಧ್ಯಮದಲ್ಲಿಯೇ ಓದಿದ್ದಾರೆ. ತಮ್ಮ ಸೇವಾವಧಿಯ ನಂತರ ದಿನದಲ್ಲಿ 6 ರಿಂದ 10 ಘಂಟೆಗಳ ಕಾಲ ಓದುತ್ತಿದ್ದರು. ಸತತ ನಾಲ್ಕು ಬಾರಿ ವಿಫಲರಾಗಿದ್ದ ಇವರು, ಐದನೇ ಬಾರಿಗೆ ಕನ್ನಡ ಮಾಧ್ಯಮದಲ್ಲಿಯೇ ಪರೀಕ್ಷೆ ಬರೆದು ಪಾಸ್ ಆಗಿದ್ದಾರೆ. ಈ ಮೂಲಕ ತಮ್ಮ ಗುರಿಯನ್ನು ತಲುಪಿದ್ದಾರೆ.

ಪ್ರಥಮ ಪ್ರಯತ್ನದಲ್ಲೇ

ಯಶಸ್ವಿಯಾದ ಮನೋವೈದ್ಯಯುಪಿಎಸ್ಸಿ ಪರೀಕ್ಷೆಯಲ್ಲಿ 615ನೇ ರ್‍ಯಾಂಕ್‌ ಪಡೆದಿರುವ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು ಮಾದೇನಹಳ್ಳಿ ಗ್ರಾಮದ ಡಾ.ದಯಾನಂದ ಸಾಗರ್, ಶಿವಮೊಗ್ಗದ ಸುಬ್ಬಯ್ಯ ಆಸ್ಪತ್ರೆಯಲ್ಲಿ ಮನೋವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಾದೇನಹಳ್ಳಿ ಗ್ರಾಮದ ಎಸ್.ಲಕ್ಷ್ಮಣ ನಾಯ್ಕ, ಮಂಜುಳಾ ಬಾಯಿಯವರ ಪುತ್ರರಾಗಿರುವ ಡಾ.ದಯಾನಂದ ಸಾಗರ್, ಮನೋಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದಾರೆ.

ನಾಗರೀಕ ಸೇವಾ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲೇ ಡಾ.ದಯಾನಂದ ಸಾಗರ್ ಅವರು ಅಖಿಲಭಾರತ ಮಟ್ಟದಲ್ಲಿ 615ನೇ ರ್‍ಯಾಂಕ್‌ ಗಳಿಸಿ, ಹುಟ್ಟೂರು, ತಾಲೂಕು ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಪೊಲೀಸ್‌, ರೈಲ್ವೇಯಲ್ಲಿ ಕೆಲಸಮಾಡಿದವಗೆ 894ನೇ ರ್‍ಯಾಂಕ್‌ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಚೋರನೂರು ಗ್ರಾಮದ ರೈತ ಅಡಿವೆಪ್ಪ ಮತ್ತು ಮಣಿಯಮ್ಮ ದಂಪತಿಯವರ ಪುತ್ರ ವಿಜಯಕುಮಾರ್, ಯುಪಿಎಸ್ಸಿ ಪರೀಕ್ಷೆಯಲ್ಲಿ 894ನೇ ರ್‍ಯಾಂಕ್‌ ಪಡೆದಿದ್ದಾರೆ.ಕೆಎಸ್‌ಪಿಎಸ್‌ ಪೂರ್ಣಗೊಳಿಸಿ ಡಿವೈಎಸ್ಪಿಯಾಗಿ ಮೈಸೂರಿನಲ್ಲಿ ತರಬೇತಿ ಪಡೆದು, ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಒಂದೂವರೆ ವರ್ಷಗಳ ಕಾಲ ಡಿವೈಎಸ್ಪಿಯಾಗಿ 2022-2023ರಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಬಳಿಕ, 2023ರಲ್ಲಿ ಯುಪಿಎಸ್ಸಿ ಪರೀಕ್ಷೆ ಬರೆದು 953 ರ್‍ಯಾಂಕ್‌ ಪಡೆದು, ಲಖನೌದಲ್ಲಿ ಭಾರತೀಯ ರೈಲ್ವೆ ಇಲಾಖೆಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. 2024ರಲ್ಲಿ ಪುನಃ ಯುಪಿಎಸ್ಸಿ ಪರೀಕ್ಷೆ ಎದುರಿಸಿ 894ನೇ ರ್‍ಯಾಂಕ್‌ ಪಡೆದಿದ್ದಾರೆ.

ಪ್ರಾಥಮಿಕ ಶಿಕ್ಷಣವನ್ನು ಚೋರನೂರು ಗ್ರಾಮದಲ್ಲಿ ಪೂರ್ಣಗೊಳಿಸಿ, ಕೂಡ್ಲಿಗಿ ತಾಲೂಕಿನ ಚಿಕ್ಕಜೋಗಿಹಳ್ಳಿಯ ಜವಾಹರ್‌ ನವೋದಯ ಶಾಲೆಯಲ್ಲಿ ಪ್ರೌಢಶಿಕ್ಷಣ ಪಡೆದಿದ್ದಾರೆ. ಪಿಯು ಶಿಕ್ಷಣವನ್ನು ಹೈದ್ರಾಬಾದ್‌ನ ನಾರಾಯಣ ಜೂನಿಯರ್ ಕಾಲೇಜಿನಲ್ಲಿ ಹಾಗೂ ಎಂಜಿನಿಯರ್ ಪದವಿಯನ್ನು ಬೆಂಗಳೂರಿನ ಆರ್‌ವಿ ಕಾಲೇಜ್ ಆಫ್ ಎಂಜಿನಿಯರಿಂಗ್‌ನಲ್ಲಿ ಪೂರ್ಣಗೊಳಿಸಿದ್ದಾರೆ.

Share this article