ಲಕ್ಷ್ಮೇಶ್ವರ: ಪಟ್ಟಣದ 19ನೇ ವಾರ್ಡ್‌ನಲ್ಲಿ ನಗರೋತ್ಥಾನ ಯೋಜನೆಯಡಿಯಲ್ಲಿ ಡಾಂಬರ್ ರಸ್ತೆ ಮಾಡುವ ಸಲುವಾಗಿ ಸಿಸಿ ರಸ್ತೆ ಕಿತ್ತು ಹಾಕಿ ಎರಡು ತಿಂಗಳಾದರೂ ಡಾಂಬರ್ ರಸ್ತೆ ಕಾಮಗಾರಿ ಆರಂಭವಾಗದೆ ಸಾರ್ವಜನಿಕರು ಪರದಾಡುವಂತಾಗಿರುವ ಘಟನೆ ಬೆಳಕಿಗೆ ಬಂದಿದೆ.
ಪುರಸಭೆಯ ಸದಸ್ಯರು ರಸ್ತೆ ಅಗೆಯುವ ಸಂದರ್ಭದಲ್ಲಿ ಶೀಘ್ರದಲ್ಲಿ ಗುಣಮಟ್ಟದ ಡಾಂಬರ್ ರಸ್ತೆ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದ್ದರು. ಆದರೆ ಕಳೆದ ಎರಡು ತಿಂಗಳಿಂದ ಪುರಸಭೆ ಸದಸ್ಯರು ಇತ್ತ ಕಡೆಗೆ ಮುಖ ಕೂಡಾ ಹಾಕಿಲ್ಲ. ಓಟು ಹಾಕಿಸಿಕೊಳ್ಳುವಾಗ ಕೈಕಾಲು ಮುಗಿಯುತ್ತಾರೆ. ಆ ಮೇಲೆ ನಮ್ಮ ಮೇಲೆ ದರ್ಪ ತೋರಿಸುವ ಕಾರ್ಯ ಮಾಡುತ್ತಾರೆ. ತಮ್ಮ ಹೆಂಡತಿ ಮಕ್ಕಳನ್ನು ಇಂತಹ ರಸ್ತೆಯಲ್ಲಿ ಪ್ರತಿನಿತ್ಯ ಅಡ್ಡಾಡಲು ಕಳಿಸಿದರೆ ಗೊತ್ತಾಗುತ್ತದೆ ಜನರ ಗೋಳು ಏನು ಎಂಬುದು. ನಮ್ಮ ಮನೆಯ ಮುಂದೆ ಇರುವ ಗಟಾರು ಬಳಿಯಲು ಬರದಂತೆ ಪೌರ ಕಾರ್ಮಿಕರಿಗೆ ತಾಕೀತು ಮಾಡಿದ್ದಾರೆ ಎಂದು ಬಸಾಪುರ ಓಣಿಯ ಬಸವ್ವ ನಿಂಗಪ್ಪ ಬಿಜಾಪೂರ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಪ್ರೇಮಾ ಬಳಗಾನೂರ ಮಾತನಾಡಿ, ಕಳೆದ ಎರಡು ತಿಂಗಳಿಂದ ಈ ವಾರ್ಡ್‌ನ ಜನರು ನರಕಯಾತನೆ ಅನುಭವಿಸುತ್ತಿದ್ದಾರೆ. ಎರಡು ಮೂರು ಬಾರಿ ಪುರಸಭೆಗೆ ಈ ಕುರಿತು ಮನವಿ ಸಲ್ಲಿಸಿದ್ದರೂ ಯಾರೂ ಕ್ಯಾರೇ ಎನ್ನುತ್ತಿಲ್ಲ. ಇನ್ನೊಂದು ವಾರದಲ್ಲಿ ರಸ್ತೆ ಕಾಮಗಾರಿ ಆರಂಭಿಸದೆ ಹೋದಲ್ಲಿ ಪುರಸಭೆಗೆ ಬೀಗ ಜಡಿದು ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.ಈ ವೇಳೆ ಶಾಂತವ್ವ ಬಸಾಪೂರ, ನೀಲವ್ವ ಗೋಡಿ, ಕೆಂಚವ್ವ ಬಸಾಪೂರ, ಲಕ್ಷ್ಮವ್ವ ಬಸಾಪೂರ, ನಿಂಗಪ್ಪ ರಾಮಗೇರಿ, ಷಣ್ಮುಖ ಬಡಿಗೇರ, ನಿಂಗಪ್ಪ ಗೋಡಿ ಮೊದಲಾದವರು ಇದ್ದರು.
ಪಟ್ಟಣದ 19 ವಾರ್ಡ್‌ನಲ್ಲಿ ನಗರೋತ್ಥಾನ ಯೋಜನೆಯಡಿಯಲ್ಲಿ ಡಾಂಬರ್ ರಸ್ತೆ ನಿರ್ಮಾಣಕ್ಕೆ ಈ ಹಿಂದೆ ಇದ್ದ ರಸ್ತೆ ತೆಗೆದು ಹಾಕಲಾಗಿದೆ. ಸಾರ್ವಜನಿಕರಿಗೆ ಆಗಿರುವ ತೊಂದರೆ ಕುರಿತು ಮಾಹಿತಿ ಬಂದಿದೆ. ನಗರೋತ್ಥಾನ ಕಾಮಗಾರಿಯ ಸಂಪೂರ್ಣ ಜವಾಬ್ದಾರಿ ಜಿಲ್ಲಾಧಿಕಾರಿ ಅಧೀನದಲ್ಲಿ ಇರುತ್ತದೆ. ನಮ್ಮದು ಕೇವಲ ಉಸ್ತುವಾರಿ ಮಾಡುವ ಕಾರ್ಯವಾಗಿದೆ. ಶೀಘ್ರದಲ್ಲಿ ಗುತ್ತಿಗೆದಾರರನ್ನು ಕರೆಯಿಸಿ ವಾರದಲ್ಲಿ ಕಾಮಗಾರಿ ಮಾಡಿ ಮುಗಿಸುವ ಕಾರ್ಯ ಮಾಡುತ್ತೇವೆ ಎಂದು ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ ತಿಳಿಸಿದ್ದಾರೆ.