ಹಿರೇಕೆರೂರು: ಯೂರಿಯಾ, ಡಿಎಪಿ ಗೊಬ್ಬರದ ಕೊರತೆ ಉಂಟಾಗಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ. ರೈತರ ಬೆಂಬಲಕ್ಕೆ ನಿಲ್ಲಬೇಕಾದ ಸರ್ಕಾರ ಹಾಗೂ ಅಧಿಕಾರಿಗಳು ರೈತ ಪರ ಕಾರ್ಯವನ್ನು ಮಾಡದೇ ರೈತರ ವಿಷಯದಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಮಾಜಿ ಕೃಷಿ ಸಚಿವ ಬಿ.ಸಿ. ಪಾಟೀಲ ಕಿಡಿಕಾರಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಜ್ಯ ಮತ್ತು ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾಗಿರುವ ಹಿನ್ನೆಲೆ ಬೆಳೆಗಳು ನಾಶವಾಗಿದ್ದು, ರೈತರ ಬದುಕು ಸಂಕಷ್ಟದಲ್ಲಿದೆ. ಜಿಲ್ಲಾ ಉಸ್ತುವಾರಿ ಸಚಿವರು ಇದ್ದರೂ ಉದ್ಘಾಟನೆಗೆ ಸೀಮಿತವಾಗಿದ್ದು, ಬಂದ ಪುಟ್ಟ ಹೋದ ಪುಟ್ಟ ಎಂಬಂತಾಗಿದ್ದಾರೆ. ಜಿಲ್ಲಾಧಿಕಾರಿಗಳು ಸಹ ಯಾವುದೇ ರೀತಿಯಲ್ಲಿ ರೈತರ ಸಂಕಷ್ಟಕ್ಕೆ ನೆರವಾಗುವ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ದೂರಿದ್ದಾರೆ.ಜಿಲ್ಲೆಗೆ 56 ಸಾವಿರ ಮೆಟ್ರಿಕ್ ಟನ್ ಗೊಬ್ಬರದ ಅವಶ್ಯಕತೆ ಇದ್ದು, ಈಗ 55.433 ಸಾವಿರ ಮೆಟ್ರಿಕ್ ಟನ್ ಗೊಬ್ಬರ ಜಿಲ್ಲೆಗೆ ಬಂದಿದೆ. ಜಿಲ್ಲೆಗೆ 13 ಸಾವಿರ ಮೆಟ್ರಿಕ್ ಟನ್ ಯೂರಿಯಾ ಕೊರತೆ ಉಂಟಾಗಿದ್ದು, ಕಾಳಸಂತೆಯಲ್ಲಿ ಗೊಬ್ಬರ ಮಾರಾಟ ನಡೆಯುತ್ತಿದೆ. ಅಲ್ಲದೆ ಕಾಳ ಸಂತೆಯಲ್ಲಿ ಗೊಬ್ಬರ ಖರೀದಿಸಲು ಲಿಂಕ್ ವ್ಯವಸ್ಥೆ ಬಂದಿದ್ದು, ಸಂಕಷ್ಟದಲ್ಲಿರುವ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ರೈತರು ಸಂಕಷ್ಟದಲ್ಲಿದ್ದರೂ ಅಧಿಕಾರಿಗಳಿಗೆ ಇದು ಸುಗ್ಗಿಯ ಕಾಲದಂತಾಗಿದೆ. ಡಿಎಪಿ ಗೊಬ್ಬರ ನಕಲಿ ಗೊಬ್ಬರವಾಗಿ ಮಾರುಕಟ್ಟೆಗೆ ಬಂದಿದೆ ಎಂದು ಆರೋಪಿಸಿದ್ದಾರೆ.ರಾಜ್ಯ ಸರ್ಕಾರ ಕೂಡಲೇ ರೈತರಿಗೆ ಬೆಳೆಹಾನಿ ಕುರಿತಾಗಿ ಪರಿಹಾರವನ್ನು ಘೋಷಿಸಬೇಕು. ರೈತರು ಆತ್ಮಸ್ಥೈರ್ಯದಿಂದ ಇರಬೇಕು ಎಂದಿದ್ದಾರೆ.ಶಿವಪುರ ಸರ್ಕಾರಿ ಶಾಲೆಗೆ ಸಾಮಗ್ರಿ ವಿತರಣೆ
ಹಾನಗಲ್ಲ: ಶಾಸಕ ಶ್ರೀನಿವಾಸ ಮಾನೆ ಅವರ ಮಹತ್ವಾಕಾಂಕ್ಷೆಯ 50- 50 ಯೋಜನೆಯಡಿ ತಾಲೂಕಿನ ಶಿವಪುರ(ಕಾಮನಹಳ್ಳಿ ಕಾಲನಿ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನಾನಾ ಸಾಮಗ್ರಿಗಳನ್ನು ವಿತರಿಸಲಾಯಿತು.ಒಟ್ಟು ₹46 ಸಾವಿರ ವೆಚ್ಚದಲ್ಲಿ 5 ಮ್ಯಾಗ್ನೆಟಿಕ್ ಗ್ರೀನ್ ಬೋರ್ಡ್, ಒಂದು ಲೈಬ್ರರಿ ಬುಕ್ ಅಲ್ಮೆರಾ ಇನ್ನಿತರ ಪೀಠೋಪಕರಣ ಹಾಗೂ ಪಾಠೋಪಕರಣ ಸಾಮಗ್ರಿಗಳನ್ನು ವಿತರಿಸಲಾಯಿತು.
ಒಟ್ಟು ವೆಚ್ಚದಲ್ಲಿ ಅರ್ಧ ಹಣವನ್ನು ಶಾಸಕ ಶ್ರೀನಿವಾಸ ಮಾನೆ ವೈಯಕ್ತಿಕವಾಗಿ ಭರಿಸಿದ್ದು, ಇನ್ನರ್ಧ ಹಣವನ್ನು ಗ್ರಾಮಸ್ಥರು, ಶಾಲೆಯ ಹಳೆಯ ವಿದ್ಯಾರ್ಥಿಗಳು ಭರಿಸಿದ್ದಾರೆ. ಇದೇ ಯೋಜನೆಯಡಿ ಕಳೆದ ಶೈಕ್ಷಣಿಕ ವರ್ಷದ ಅಂತ್ಯದವರೆಗೆ ತಾಲೂಕಿನ 97 ಸರ್ಕಾರಿ ಶಾಲೆಗಳಿಗೆ ಒಟ್ಟು ₹2 ಕೋಟಿ ವೆಚ್ಚದಲ್ಲಿ ಸೌಲಭ್ಯ ಕಲ್ಪಿಸಿ, ಕಲಿಕಾ ಪೂರಕ ವಾತಾವರಣ ಸೃಷ್ಟಿಸಲಾಗಿದೆ.ಪ್ರಮುಖರಾದ ಸುರೇಶ ವಡ್ಡರ, ಗಿರೀಶ ವಡ್ಡರ, ಇಸಾಕ್‌ಅಹ್ಮದ್ ಶಿರಗೋಡ, ಕುತುಬುದ್ದೀನ್ ಜನಗೇರಿ, ನಿಂಗಪ್ಪ ಹೆಗಡೆ, ಮಂಜುನಾಥ ಕವಣೆ, ಅಶೋಕಗೌಡ ಪಾಟೀಲ, ಮುಖ್ಯಶಿಕ್ಷಕಿ ವಿಜಯಲಕ್ಷ್ಮಿ ಶಿರಪಂಥಿ, ಅನಿಲಕುಮಾರ ಗೊಣ್ಣೆಣ್ಣನವರ, ತನುಜಾ ಎಚ್.ಬಿ., ಮಂಜುಳಾ ಶಿರಮಾಪುರ, ಲತಾ ಕುಂಬಾರ, ಶೈಲಾ ಮಲಗುಂದ ಸೇರಿದಂತೆ ಗ್ರಾಪಂ ಮತ್ತು ಎಸ್‌ಡಿಎಂಸಿ ಸದಸ್ಯರು, ಗ್ರಾಮಸ್ಥರು ಇದ್ದರು.