ಕನ್ನಡಪ್ರಭ ವಾರ್ತೆ ಮಂಡ್ಯ
ರಾಜ್ಯ ಸರ್ಕಾರದ ಈ ನಿಲುವಿನಿಂದ ಯುವಜನರ ಸಬಲೀಕರಣವಾಗುತ್ತಿಲ್ಲ. ಗ್ರಾಮೀಣ ಭಾಗದ ಯುವ ಪ್ರತಿಭಾವಂತರು ಅವಕಾಶ ವಂಚಿತರಾಗಿ ಅಡ್ಡದಾರಿ ಹಿಡಿಯುತ್ತಿದ್ದಾರೆ. 2025ರ ಬಜೆಟ್‌ನಲ್ಲಿ ಎಲ್ಲಾ ಕಾರ್ಯಕ್ರಮಗಳನ್ನು ಸೇರಿಸಿ ಪುನಾರಂಭಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಹಿಂದೆಲ್ಲಾ ಗ್ರಾಮಗಳಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿಯೇತರ ಯುವಜನರು ಯುವಕ-ಯುವತಿ ಮಂಡಲಗಳನ್ನು ಸ್ಥಾಪಿಸಿಕೊಂಡು ಗ್ರಾಮದ ಅಭಿವೃದ್ಧಿಗೆ ಶ್ರಮಿಸುತ್ತಿದ್ದರು. ಅಂತಹ ಜನರಿಗೆ ವಿವಿಧ ಕಾರ್ಯಾಗಾರಗಳನ್ನು ರೂಪಿಸಿ ತರಬೇತಿ ನೀಡಲಾಗುತ್ತಿತ್ತು ಎಂದರು.ಯುವಜನರ ಪ್ರತಿಭೆಯನ್ನು ಹೊರಹೊಮ್ಮಿಸುವಲ್ಲಿ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆರಂಭದ ದಿನಗಳಿಂದಲೂ ಯುವ ಸಂಪರ್ಕ ಸಭೆ, ಯುವಚೇತನ, ಯುವ ಪ್ರೇರಣಾ ಮತ್ತು ಯುವ ಸಂವಹನದಂತಹ ವಿಶಿಷ್ಟ ತರಬೇತಿ ಕಾರ್ಯಾಗಾರಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿತ್ತು. ಇವುಗಳಿಂದ ಯುವಜನರು ಪ್ರೇರಿತರಾಗಿ ಗ್ರಾಮದ ಅಭಿವೃದ್ಧಿಯ ಜೊತೆಗೆ ಸಾಂಸ್ಕೃತಿಕ ಮತ್ತು ನೈತಿಕವಾಗಿ ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡು ಸ್ವ-ಉದ್ಯೋಗಿಗಳಾಗಿ ಬದಲಾಗಲು ವೇದಿಕೆ ಕಲ್ಪಿಸಲಾಗುತ್ತಿತ್ತು ಎಂದರು.
ಆದರೆ, ಕಳೆದ ಐದು ವರ್ಷಗಳಿಂದ ಈ ಎಲ್ಲಾ ತರಬೇತಿ ಕಾರ್ಯಕ್ರಮಗಳನ್ನು ರಾಜ್ಯ ಸರ್ಕಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸ್ಥಗಿತಗೊಳಿಸಿರುವುದು ಯುವಜನರ ಬಗೆಗಿನ ಅಸಡ್ಡೆತನವನ್ನು ತೋರ್ಪಡಿಸುತ್ತಿದೆ ಎಂದು ದೂರಿದರು.ಪ್ರತಿ ವರ್ಷ ಜಾನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಯುವಕ-ಯುವತಿ ಮಂಡಳಿಗಳಿಗೆ ಆದ್ಯತೆ ನೀಡಿ ತಾಲೂಕು ಮಟ್ಟದಲ್ಲಿ ಯುವಜನ ಮೇಳವನ್ನು ಸಂಘಟಿಸುವ ಮೂಲಕ 16 ಪ್ರಕಾರದ ಗ್ರಾಮೀಣ ಕಲೆಗಳಿಗೆ ಅವಕಾಶ ಕಲ್ಪಿಸಿ ತಾಲೂಕು, ಜಿಲ್ಲಾ. ವಿಭಾಗ ಹಾಗೂ ರಾಜ್ಯಮಟ್ಟದ ಯುವಜನ ಮೇಳಗಳನ್ನು ಯುವ ಸಬಲೀಕರಣ ಇಲಾಖೆ ಆಯೋಜಿಸಿ ಯುವಜನರಿಗೆ ವೇದಿಕೆ ಮತ್ತು ಅವಕಾಶಗಳನ್ನು ಕಲ್ಪಿಸಿಕೊಡುವ ಅಗತ್ಯವಿದೆ ಎಂದರು.
ಮುಖ್ಯಮಂತ್ರಿಗಳು ಈ ಸಾಲಿನ ಬಜೆಟ್‌ನಲ್ಲಿ ರಾಜ್ಯದ ಯುವಜನರ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಈ ಎಲ್ಲಾ ಕಾರ್ಯಕ್ರಮಗಳನ್ನು ಸೇರಿಸಿ ಯುವ ಸಬಲೀಕರಣ ಇಲಾಖಾಎಗೆ ಕಾಯಕಲ್ಪ ನೀಡುವಂತೆ ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಕೆ.ಜೆ.ಸುರೇಶ್ , ಹನಿಯಂಬಾಡಿ ನಾಗರಾಜು, ಅನುಪಮಾ ಇದ್ದರು.