ಆಸ್ಪತ್ರೆಗೆ ಹೆಚ್ಚಿನ ವೈದ್ಯ ಸಿಬ್ಬಂದಿ ನೇಮಿಸುವಂತೆ ಒತ್ತಾಯ

KannadaprabhaNewsNetwork | Published : Aug 27, 2024 1:32 AM

ಸಾರಾಂಶ

ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಶ್ರೂಷಕರು, ವೈದ್ಯರ ಕೊರತೆಯಿಂದ ಸಾರ್ವಜನಿಕರಿಗೆ ತುರ್ತು ಸೇವೆ ನೀಡಲು ಸಾಧ್ಯವಾಗುತ್ತಿಲ್ಲ.

ಕನ್ನಡಪ್ರಭ ವಾರ್ತೆ ಶಿರಾ

ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಶ್ರೂಷಕರು, ವೈದ್ಯರ ಕೊರತೆಯಿಂದ ಸಾರ್ವಜನಿಕರಿಗೆ ತುರ್ತು ಸೇವೆ ನೀಡಲು ಸಾಧ್ಯವಾಗುತ್ತಿಲ್ಲ. ಕೂಡಲೇ ಹೆಚ್ಚಿನ ಶುಶ್ರೂಷಕರು, ಡಿ.ಗ್ರೂಪ್ ನೌಕರರು ಹಾಗೂ ವೈದ್ಯರನ್ನು ನೇಮಿಸಬೇಕೆಂದು ಒತ್ತಾಯಿಸಿ ಸೋಮವಾರ ಶಿರಾ ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಹಾಗೂ ಶುಶ್ರೂಷಕರು ತಮ್ಮ ಸೇವೆಗಳನ್ನು ಕೆಲಕಾಲ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.

ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಕಾರಿ ಡಾ.ಶ್ರೀನಾಥ್ ಮಾತನಾಡಿ, ಶಿರಾ ಸಾರ್ವಜನಿಕ ಆಸ್ಪತ್ರೆಗೆ ದಿನನಿತ್ಯ ಸಾವಿರಕ್ಕೂ ಹೆಚ್ಚು ರೋಗಿಗಳು ಚಿಕಿತ್ಸೆಗೆ ಬರುತ್ತಾರೆ. ಈ ಹಿಂದೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಸುಮಾರು 100 ಹಾಸಿಗೆಗಳಿಗೆ ತಕ್ಕಂತೆ ಸಿಬ್ಬಂದಿ ಹಾಗೂ ವೈದ್ಯರನ್ನು ನೇಮಕ ಮಾಡಲಾಗಿತ್ತು. ನಂತರ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸ್ಥಾಪನೆಯಾದಾಗ ಅಲ್ಲಿ ಸಿಬ್ಬಂದಿ ಕೊರತೆಯಿದ್ದ ಕಾರಣ ಸಾರ್ವಜನಿಕ ಆಸ್ಪತ್ರೆಯ ಎನ್.ಎಚ್.ಎಂ. ಅಡಿ ಕಾರ್ಯ ನಿರ್ವಹಿಸುತ್ತಿದ್ದ ಸುಮಾರು 8 ಶುಶ್ರೂಷಕಾಧಿಕಾರಿಗಳನ್ನು ತಾತ್ಕಾಲಿಕವಾಗಿ ತಾಯಿ ಮಕ್ಕಳ ಆಸ್ಪತ್ರೆಗೆ ನಿಯೋಜಿಸಲಾಗಿತ್ತು ಎಂದರು.

ಈಗ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಎನ್.ಎಚ್.ಎಂ. ಮತ್ತು ಎಚ್.ಡಿ.ಯು. ಅಡಿ ಸುಮಾರು 30ಕ್ಕೂ ಹೆಚ್ಚು ಶುಶ್ರೂಷಕಾಧಿಕಾರಿಗಳು ನೇಮಕವಾಗಿದ್ದಾರೆ. ಆದ್ದರಿಂದ ಈ ಹಿಂದೆ ಸಾರ್ವಜನಿಕ ಆಸ್ಪತ್ರೆಯಿಂದ ನಿಯೋಜನೆಯಾಗಿದ್ದ ಶುಶ್ರೂಷಕಾಧಿಕಾರಿಗಳನ್ನು ಮರು ಸಾರ್ವಜನಿಕ ಆಸ್ಪತ್ರೆಗೆ ವರ್ಗಾವಣೆ ಮಾಡಿಕೊಡಬೇಕು. ಶಿರಾದಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿರುವುದರಿಂದ ಹಲವು ಅಪಘಾತಗಳು ನಡೆಯುತ್ತಿದ್ದು, ತುರ್ತು ಚಿಕಿತ್ಸಾ ಘಟಕಕ್ಕೆ ವೈದ್ಯರು ಹಾಗೂ ಶುಶ್ರೂಷಕಾಧಿಕಾರಿಗಳ ಅವಶ್ಯಕತೆ ಹೆಚ್ಚಿದೆ.

ಕೆಲಸದ ಒತ್ತಡ ಹೆಚ್ಚಿರುವುದರಿಂದ ವಾರದ ರಜೆಯನ್ನೂ ಸಹ ಪಡೆಯಲು ಸಾಧ್ಯವಾಗುತ್ತಿಲ್ಲ. ಇದರಿಂದ ಶುಶ್ರೂಷಕಾಧಿಕಾರಿಗಳು ಸಾಮೂಹಿಕ ರಜೆ ಹಾಕುವುದಾಗಿ ಹೇಳುತ್ತಿದ್ದು, ಕೂಡಲೇ ಶಾಸಕರು ಈ ಬಗ್ಗೆ ಗಮನ ಹರಿಸಿ ಸಮಸ್ಯೆ ಪರಿಹರಿಸಬೇಕು. ಇಲ್ಲವೇ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ಸಾರ್ವಜನಿಕ ಆಸ್ಪತ್ರೆಯನ್ನು ಒಟ್ಟಿಗೆ ಸೇರಿಸಿದರೆ ಅನುಕೂಲವಾಗುತ್ತದೆ ಎಂದು ಹೇಳಿದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಸಿದ್ದೇಶ್ವರ್ ಮಾತನಾಡಿ, ಶಿರಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಇರುವ ಶುಶ್ರೂಷಕಾಧಿಕಾರಿಗಳು ದಿನನಿತ್ಯ 8 ರಿಂದ 12 ಗಂಟೆಯವರೆಗೆ ಕೆಲಸ ಮಾಡುತ್ತಿದ್ದಾರೆ. ವಾರದ ರಜೆಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಹಿಂದೆ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಸಾರ್ವಜನಿಕ ಆಸ್ಪತ್ರೆಯಿಂದ ನಿಯೋಜನೆಗೊಂಡಿದ್ದ ಎಲ್ಲಾ ಶುಶ್ರೂಷಕಾಧಿಕಾರಿಗಳನ್ನು ಮರು ಹಂಚಿಕೆ ಮಾಡಿ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲು ಶಾಸಕರು ಹಾಗೂ ಜಿಲ್ಲಾ ಆರೋಗ್ಯಾಕಾರಿಗಳು ಸಹಕರಿಸಬೇಕೆಂದು ಮನವಿ ಮಾಡಿದರು.

ವೈದ್ಯರಾದ ಡಾ.ಗಿರೀಶ್, ಡಾ.ರಾಘವೇಂದ್ರ, ಡಾ.ರಾಜಕುಮಾರ್, ಡಾ. ಪಾಂಡು.ಎಸ್, ಡಾ.ಬಾಬು ರಾಜೇಂದ್ರ ಪ್ರಸಾದ್, ಡಾ.ಶ್ರೀಧರ್ ಸೇರಿದಂತೆ ಸಿಬ್ಬಂದಿ ಭಾಗವಹಿಸಿದ್ದರು.

Share this article