ಚನ್ನರಾಯಪಟ್ಟಣ-ಮೈಸೂರು ರಾಜ್ಯ ಹೆದ್ದಾರಿಯಲ್ಲಿನ ಗುಂಡಿ ಮುಚ್ಚಿಸುವಂತೆ ಒತ್ತಾಯ

KannadaprabhaNewsNetwork | Published : Jul 31, 2024 1:09 AM

ಸಾರಾಂಶ

ಟೌನ್‌ ಕ್ಲಬ್ ನಿಂದ ರಸ್ತೆಯಲ್ಲಿ ಬರುವ ನೀರು ರಸ್ತೆಯ ಬದಿಯಲ್ಲಿನ ಮಣ್ಣನ್ನು ಕೊರೆದುಕೊಂಡು ಹೋಗಿದ್ದು 2-3 ಅಡಿಯಷ್ಟು ಆಳವಾದ ಕಂದಕಗಳ ನಿರ್ಮಾಣವಾಗಿದೆ. ಇಲ್ಲಿ ಕಳೆದ ವರ್ಷಗಳಿಂದ 5-6 ಅಪಘಾತಗಳು ಸಂಭವಿಸಿದ್ದು ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಕೆಲವರು ಅಪಘಾತದ ತೀವ್ರತೆಗೆ ಅಂಗವಿಕಲರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪಟ್ಟಣದಲ್ಲಿ ಹಾದುಹೋಗಿರುವ ಚನ್ನರಾಯಪಟ್ಟಣ-ಮೈಸೂರು ರಾಜ್ಯ ಹೆದ್ದಾರಿಯ ರಸ್ತೆ ಬದಿಗಳಲ್ಲಿ ಭಾರೀ ಪ್ರಮಾಣದ ಗುಂಡಿಗಳು ಬಿದ್ದಿದ್ದು ಅವುಗಳನ್ನು ಮುಚ್ಚಿಸುವಂತೆ ತಾಲೂಕು ಎಚ್.ಡಿ.ದೇವೇಗೌಡ ಅಭಿಮಾನಿ ಬಳಗ ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದೆ.

ಈ ಕುರಿತು ಮಾತನಾಡಿರುವ ಬಳಗದ ಅಧ್ಯಕ್ಷ ಗೌರೀಶ್ ಮತ್ತು ಉಪಾಧ್ಯಕ್ಷ ಚಿಕ್ಕೋನಹಳ್ಳಿ ನಾಗರಾಜು, ಮಂಗಳವಾರ ಸಂಜೆ ಮೈಸೂರು ರಸ್ತೆಯ ಹಾದನೂರು ಗ್ರಾಮದ ಬಳಿ ಪಿಕಪ್ ವಾಹನ ರಸ್ತೆಯಲ್ಲಿದ್ದ ಗುಂಡಿ ತಪ್ಪಿಸಲು ಹೋಗಿ ಮಗುಚಿ ಬಿದ್ದಿದ್ದು ವಾಹನದಲ್ಲಿದ್ದವರು ಕೂದಲೆಳೆಯ ಅಂತರದಲ್ಲಿ ಸಾವಿನಿಂದ ಪಾರಾಗಿದ್ದಾರೆ. ಕೆಲವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಪಟ್ಟಣದ ಟೌನ್‌ಕ್ಲಬ್‌ನಿಂದ ಅಂಬಾರಿ ಹೋಟೆಲ್‌ವರೆಗೆ ಅದರಲ್ಲೂ ಟ್ರಂಡ್ಸ್ ಮುಂಭಾಗ ಮುಖ್ಯರಸ್ತೆ ಬದಿಯಲ್ಲಿ ಮಂಡಿಯುದ್ದದ ಕೊರಕಲು ಹಾಗೂ ಗುಂಡಿಗಳು ಉಂಟಾಗಿವೆ.

ಟೌನ್‌ಕ್ಲಬ್ ನಿಂದ ರಸ್ತೆಯಲ್ಲಿ ಬರುವ ನೀರು ರಸ್ತೆಯ ಬದಿಯಲ್ಲಿನ ಮಣ್ಣನ್ನು ಕೊರೆದುಕೊಂಡು ಹೋಗಿದ್ದು 2-3 ಅಡಿಯಷ್ಟು ಆಳವಾದ ಕಂದಕಗಳ ನಿರ್ಮಾಣವಾಗಿದೆ. ಇಲ್ಲಿ ಕಳೆದ ವರ್ಷಗಳಿಂದ 5-6 ಅಪಘಾತಗಳು ಸಂಭವಿಸಿದ್ದು ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಕೆಲವರು ಅಪಘಾತದ ತೀವ್ರತೆಗೆ ಅಂಗವಿಕಲರಾಗಿದ್ದಾರೆ. ಚಿಕ್ಕಣ್ಣಗೌಡ ಸಮುದಾಯಭವನದ ಎದುರು ಹಾಗೂ ಕಾಗುಂಡಿ ಹಳ್ಳದ ಸೇತುವೆಯ ಸಮೀಪದಲ್ಲಿರುವ ಗುಂಡಿಗಳು ಹಲವರನ್ನು ಬಲಿ ಪಡೆದಿದೆ.

ಪ್ರತಿದಿನ ಸಾವಿರಾರು ದ್ವಿಚಕ್ರ ವಾಹನಗಳ ಹಾಗೂ ಸಾರ್ವಜನಿಕರು ಹಿಡಿಶಾಪ ಹಾಕುವಷ್ಟು ಮಟ್ಟಿಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕೆಲಸ ನಿರ್ವಹಿಸುತ್ತಿದ್ದಾರೆ. ಕನಿಷ್ಠ ಗುಂಡಿಗಳನ್ನು ಮುಚ್ಚುವ ಮನಸ್ಸನ್ನು ಮಾಡದೇ ದಿವ್ಯಮೌನ ವಹಿಸಿ ನಿದ್ರೆಗೆ ಜಾರಿರುವಂತೆ ಕಾಣುತ್ತಿದೆ.

ಈ ಬಗ್ಗೆ ಕನ್ನಡಪರ ಸಂಘಟನೆಗಳು ಕಚೇರಿ ಎದುರು ಪ್ರತಿಭಟನೆ ನಡೆಸಿದರೂ ಕ್ಯಾರೇ ಎನ್ನದ ಇಲಾಖೆ ಅಧಿಕಾರಿಗಳು ಕೂಡಲೇ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡದಿದ್ದರೆ ಕಚೇರಿ ಬಳಿ ಶಾಮಿಯಾನ ಹಾಕಿ ಅನಿರ್ದಿಷ್ಟಾವಧಿ ಧರಣಿ ಕೂರುವುದಾಗಿ ತಾಲೂಕು ಎಚ್.ಡಿ.ದೇವೇಗೌಡ ಅಭಿಮಾನಿ ಬಳಗ ಎಚ್ಚರಿಕೆ ನೀಡಿದೆ.

Share this article