ಕಾರವಾರ: ಅಂಕೋಲಾ ಮತ್ತು ಕುಮಟಾ ತಾಲೂಕಿನ ನಡುವಿನ ಸಂಪರ್ಕ ಸೇತುವೆಯಾಗಿರುವ ಮಂಜುಗುಣಿ ಗಂಗಾವಳಿ ಸೇತುವೆಯ ಕಾಮಗಾರಿ ಪೂರ್ಣಗೊಳಿಸುವಂತೆ ಆಗ್ರಹಿಸಿ ಜಯಕರ್ನಾಟಕ ಜನಪರ ವೇದಿಕೆ ಮಂಗಳವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.
ಇದು ದೇಶದ ಪ್ರಸಿದ್ಧ ಪ್ರವಾಸಿ ಸ್ಥಳವಾಗಿರುವ ಗೋಕರ್ಣವನ್ನು ಸಂಪರ್ಕಿಸುವ ಸೇತುವೆಯು ಆಗಲಿದೆ. ನಿತ್ಯವೂ ಸಾವಿರಾರು ಜನರು ಶಾಲಾ- ಕಾಲೇಜು ಉದ್ಯೋಗ ಮತ್ತು ಇತರ ಕಾರಣಗಳಿಂದ ಈ ಸೇತುವೆಯ ಸಂಪರ್ಕವನ್ನೇ ಆಶ್ರಯಿಸಿದ್ದಾರೆ. ಸ್ಥಳೀಯರು ಮತ್ತು ವಿವಿಧ ಸಂಘಟನೆಗಳ ಹೋರಾಟದ ಫಲವಾಗಿ ಸೇತುವೆಯ ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ.
ಸೇತುವೆಯ ಎರಡು ಭಾಗಗಳಲ್ಲಿ ರಸ್ತೆ ಸಂಪರ್ಕಗೊಂಡಿಲ್ಲ. ಮಣ್ಣು ಭರಾವು ಮಾಡಿ ತಾತ್ಕಾಲಿಕ ಸಂಪರ್ಕ ಕಲ್ಪಿಸಲಾಗಿದೆ. ಇದರಿಂದ ಸಂಚಾರವು ಸಮರ್ಪಕವಾಗಿಲ್ಲ ಮತ್ತು ಪಾದಚಾರಿಗಳಿಗೂ ಸಾರ್ವಜನಿಕರಿಗೂ ಅಡಚಣೆ ಉಂಟಾಗುತ್ತಿದೆ.ಈ ಹಿನ್ನೆಲೆ ತುರ್ತಾಗಿ ಸೇತುವೆ ಕಾಮಗಾರಿ ಪೂರ್ಣಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಯಿತು. ಮುಂದಿನ ಒಂದು ತಿಂಗಳ ಒಳಗೆ ಸೇತುವೆಯ ಕಾಮಗಾರಿ ಪೂರ್ಣಗೊಳಿಸಬೇಕು ಇಲ್ಲವೇ ಜಿಲ್ಲಾಡಳಿತ ಅಥವಾ ಸಂಬಂಧಿಸಿದ ಜನಪ್ರತಿನಿಧಿಗಳು ಅಧಿಕಾರಿಗಳು ಕಾಮಗಾರಿ ಅಪೂರ್ಣವಾಗಲು ಇರುವ ತೊಡಕುಗಳು ಮತ್ತು ಕಾರಣವನ್ನು ಬಹಿರಂಗಪಡಿಸಬೇಕು. ಇಲ್ಲವಾದಲ್ಲಿ ಸ್ಥಳೀಯ ಗ್ರಾಮಸ್ಥರ ಸಹಕಾರದಿಂದ ಉಗ್ರ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಕುಮಟಾ: ತಾಲೂಕಿನ ಬಾಡದ ಕಾಂಚಿಕಾ ಪರಮೇಶ್ವರಿ ದೇವಾಲಯದಲ್ಲಿ ನೂತನ ನಿರ್ಮಿತ ಪುಷ್ಪರಥ ಲೋಕಾರ್ಪಣೆ ಹಾಗೂ ಉತ್ಸವ ಕಾರ್ಯಕ್ರಮ ಇತ್ತೀಚೆಗೆ ಜರುಗಿತು.ವೇ. ವಿನಾಯಕ ಭಟ್ಟ ನೇತೃತ್ವದಲ್ಲಿ ಎರಡು ದಿನಗಳ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಬಳಿಕ ಧನುರ್ಲಗ್ನದ ಶುಭ ಮುಹೂರ್ತದಲ್ಲಿ ಉದ್ಯಮಿ ದಿನೇಶ ಆರ್. ನಾಯಕ ದಂಪತಿ ಪುಷ್ಪರಥದಲ್ಲಿ ವಿರಾಜಮಾನರಾದ ಕಾಂಚಿಕಾ ಪರಮೇಶ್ವರಿ ರಜತ ಮೂರ್ತಿಯನ್ನು ಪೂಜಿಸಿದರು.