ಕನ್ನಡಪ್ರಭ ವಾರ್ತೆ ಚಿಂತಾಮಣಿ
ಕಂಬಾಲಪಲ್ಲಿ ದಲಿತರ ನರಮೇಧ ನಡೆದು ೨೩ ವರ್ಷಗಳು ಕಳೆದರೂ ಸಂತ್ರಸ್ತರಿಗಾಗಿ ನಿರ್ಮಿಸಿರುವ ಮಿನಿಕಂಬಾಲಪಲ್ಲಿಗೆ ಈವರೆಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸಿಲ್ಲ ಎಂದು ಖಂಡಿಸಿ ಆನೇಕಲ್ ಡಾ.ಬಿ.ಆರ್ ಅಂಬೇಡ್ಕರ್ ಯುವಕರ ಸಂಘ ರಾಜ್ಯ ಸಮಿತಿ ವತಿಯಿಂದ ಚಿಂತಾಮಣಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.ತಾಲೂಕಿನ ಮುಂಗಾನಹಳ್ಳಿ ಹೋಬಳಿಯ ಕಂಬಾಲಪಲ್ಲಿಯಲ್ಲಿ ಒಂದೇ ಕುಟುಂಬದ ೯ ಜನ ದಲಿತರನ್ನು ಹತ್ಯೆ ಮಾಡಲಾಗಿತ್ತು. ಈ ದುರ್ಘಟನೆಯ ಸಂತ್ರಸ್ತ ಕುಟುಂಬಗಳಿಗೆ ಚಿಂತಾಮಣಿ ಬಳಿ ಮಿನಿಕಂಬಾಲಪಲ್ಲಿ ಗ್ರಾಮ ನಿರ್ಮಿಸಲಾಗಿದೆ.
ಗ್ರಾಮಕ್ಕೆ ಸೌಲಭ್ಯ ಕಲ್ಪಿಸಿಲ್ಲಆದರೆ ಈ ಗ್ರಾಮಕ್ಕೆ ಮೂಲಭೂತ ಸೌಲಭ್ಯಗಳಾದ ರಸ್ತೆ, ಚರಂಡಿ, ಶುದ್ದ ಕುಡಿಯುವ ನೀರಿನ ಘಟಕವಿಲ್ಲ. ಶಾಲಾ ಕಟ್ಟಡ, ಅಂಗನವಾಡಿ ಕೇಂದ್ರ, ಶಿಥಿಲಾವಸ್ಥೆಯಲ್ಲಿರುವ ಅಂಬೇಡ್ಕರ್ ಭವನ ದುರಸ್ತಿಗೊಳಿಸಿಲ್ಲ ಎಂದು ಸಂಘ ರಾಜ್ಯ ಸಮಿತಿಯ ರಾಜ್ಯಾಧ್ಯಕ್ಷ ಮರಸೂರು ಡಾ. ಎಂ ಕೃಷ್ಣಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ತಹಸೀಲ್ದಾರ್‌ಗೆ ಮನವಿ ಸಲ್ಲಿಕೆಅಂಬೇಡ್ಕರ್ ಭವನದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯಲ್ಲಿ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ವಿರುದ್ಧ ಧಿಕ್ಕಾರ ಕೂಗಲಾಯಿತು. ಕೂಡಲೇ ಮಿನಿ ಕಂಬಾಲಪಲ್ಲಿ ಗ್ರಾಮಕ್ಕೆ ವಿಶೇಷ ಒತ್ತು ನೀಡಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಿಗಿಸಬೇಕೆಂದು ಒತ್ತಾಯಿಸಿ ತಹಸಿಲ್ದಾರ್ ಸುದರ್ಶನ್ ಯಾದವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಮಿನಿ ಕಂಬಾಲಹಳ್ಳಿ ಗ್ರಾಮಕ್ಕೆ ವಿಶೇಷ ಒತ್ತು ನೀಡುವುದರ ಮುಖೇನ ಸಮರ್ಪಕವಾದ ರಸ್ತೆ, ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ, ಈಗಾಗಲೇ ಶಿಥಿಲಾವಸ್ಥೆಯಲ್ಲಿರುವ ಅಂಬೇಡ್ಕರ್ ಭವನ, ಸರ್ಕಾರಿ ಶಾಲಾ ಕಟ್ಟಡ, ಅಂಗನವಾಡಿ ಕೇಂದ್ರ ಕಟ್ಟಡಗಳ ಒತ್ತುವರಿಯನ್ನು ತೆರವುಗೊಳಿಸಿ, ದುರಸ್ತಿಗೊಳಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು, ಸಂತ್ರಸ್ತರಿಗೆ ಮನೆ, ಜಮೀನು ಸೇರಿದಂತೆ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು. ಸ್ಮಶಾನಕ್ಕೆ ಭೂಮಿ ಮಂಜೂರು ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಈ ಪ್ರತಿಭಟನೆಯಲ್ಲಿ ಆನೇಕಲ್ ಡಾ.ಬಿ.ಆರ್ ಅಂಬೇಡ್ಕರ್ ಯುವಕರ ಸಂಘ ರಾಜ್ಯ ಸಮಿತಿಯ ರಾಜ್ಯಾಧ್ಯಕ್ಷ ಮರಸೂರು ಡಾ. ಎಂ ಕೃಷ್ಣಪ್ಪ, ರಾಜ್ಯ ಗೌರವಾಧ್ಯಕ್ಷ ಕಾಳಯ್ಯ ಆರ್, ಉಪಾಧ್ಯಕ್ಷ ಮಣಿಗಾನಹಳ್ಳಿ ಶ್ರೀನಿವಾಸ, ರಾಜ್ಯ ಪ್ರ. ಕಾರ್ಯದರ್ಶಿ ಉದಯಕವಿ ರವಿಚಂದ್ರ, ಖಜಾಂಚಿ ಶಶಿಕುಮಾರ್, ಚಂದ್ರಶೇಖರ್, ಜೈಭೀಮ್ ಗಣೇಶ್, ರಮೇಶ್,ಮಹಿಳಾ ರಾಜ್ಯಾಧ್ಯಕ್ಷೆ ಬೊಮ್ಮಸಂದ್ರ ರೇಣುಕಾ, ಕನ್ನಡಾಂಬೆ ರಕ್ಷಣಾ ವೇದಿಕೆ ಸಿಂಹ ಘರ್ಜನೆ ಮಹಿಳಾ ರಾಜ್ಯಧ್ಯಕ್ಷೆ ಕೀರ್ತನ ಮಂಜು, ಮಹಿಳೆಯರು ಮತ್ತಿತರರು ಭಾಗವಹಿಸಿದ್ದರು.