ಕನ್ನಡಪ್ರಭ ವಾರ್ತೆ ಸಿಂಧನೂರು
ನಗರದಲ್ಲಿ ಉಲ್ಬಣಿಸಿರುವ ಕುಡಿಯುವ ನೀರಿನ ಸಮಸ್ಯೆ ಶೀಘ್ರ ಪರಿಹರಿಸುವಂತೆ ಆಗ್ರಹಿಸಿ, ನಗರಾಭಿವೃದ್ಧಿ ಹೋರಾಟ ಸಮಿತಿ ನೇತೃತ್ವದಲ್ಲಿ ವಿವಿಧ ವಾರ್ಡ್‌ಗಳ ನಿವಾಸಿಗಳು ಗುರುವಾರ ನಗರಸಭೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.ನಗರದ ಬಸವ ಸರ್ಕಲ್ನಿಂದ ಬಸ್ ನಿಲ್ದಾಣ, ಗಾಂಧಿ ಸರ್ಕಲ್, ಕನಕದಾಸ ಸರ್ಕಲ್ ಹಾಗೂ ಕಿತ್ತೂರು ರಾಣಿ ಚನ್ನಮ್ಮ ವೃತ್ತದ ಮೂಲಕ ಮುಖ್ಯರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆಯಲ್ಲಿ ಸಾಗಿದ ಪ್ರತಿಭಟನಾಕಾರರು ನಗರಸಭೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರು ಮತ್ತು ಹೋರಾಟಗಾರರ ಮಧ್ಯೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಕೊನೆಗೆ ಪ್ರತಿಭಟನಾಕಾರರು ನಗರಸಭೆ ಗೇಟ್ ತಳ್ಳಿ ಒಳಹೋಗಲು ಪ್ರಯತ್ನಿಸುತ್ತಿದ್ದಂತೆ ಪೊಲೀಸರು ತಡೆದರು. ಈ ಸಂದರ್ಭದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತು.
ನಗರಸಭೆ ಆಡಳಿತಾಧಿಕಾರಿಯಾದ ಡಿಸಿಯವರು ಸ್ಥಳಕ್ಕೆ ಆಗಮಿಸಿ, ಸಮಸ್ಯೆ ಪರಿಹರಿಸುವ ಭರವಸೆ ನೀಡುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿಯುತ್ತಿದ್ದಂತೆ ನಗರಸಭೆ ಪೌರಾಯುಕ್ತರ ಮಂಜುನಾಥ ಗುಂಡೂರು ಸಮಜಾಯಿಷಿ ನೀಡಲು ಪ್ರಯತ್ನಿಸಿದರು. ಇದಕ್ಕೆ ಒಪ್ಪದ ಪ್ರತಿಭಟನಾ ಕಾರರು ನಗರಸಭೆ ಆಡಳಿತ, ಸದಸ್ಯರು ಹಾಗೂ ಶಾಸಕರ ವಿರುದ್ಧ ಧಿಕ್ಕಾರ ಕೂಗಿದರು.ಹೋರಾಟವನ್ನು ಬೆಂಬಲಿಸಿ ಮಕ್ಕಳ ವೈದ್ಯ ಡಾ.ಕೆ.ಶಿವರಾಜ, ಸಮಿತಿಯ ಪ್ರಧಾನ ಸಂಚಾಲಕ ವೀರಭದ್ರಗೌಡ ಅಮರಾಪುರ, ಸಂಚಾಲಕರಾದ ಚಂದ್ರಶೇಖರ ಗೊರಬಾಳ, ಡಿ.ಎಚ್.ಕಂಬಳಿ, ನಾಗರಾಜ್ ಪೂಜಾರ್ ಮಾತನಾಡಿದರು.
ಮನವಿ ಸ್ವೀಕರಿಸಿದ ಪೌರಾಯುಕ್ತ, ನಗರಾಭಿವೃದ್ಧಿ ಹೋರಾಟ ಸಮಿತಿಯ ಬೇಡಿಕೆಗಳ ಅನುಗುಣವಾಗಿ ಕ್ರಮ ಕೈಗೊಳ್ಳಲಾಗುವುದು. ಕುಡಿಯುವ ನೀರಿನ ಕೊರತೆ ಆಗದಂತೆ ಈಗಾಗಲೇ ಕ್ರಮಗಳನ್ನು ಕೈಗೊಳ್ಳಲಾಗಿದೆ. ಊಹಾ ಪೋಹ ಹರಡುವವರ ವದಂತಿ ಯಾರೂ ಕಿವಿಗೊಡಬಾರದು. ಕಾಲುವೆಗೆ ನೀರು ಬರುವವರೆಗೂ ಜೂನ್, ಜುಲೈವರೆಗೆ ನೀರಿನ ನಿರ್ವಹಣೆ ಮಾಡಲು ಖಾಸಗಿ ಕೆರೆಗಳನ್ನು ಪಡೆಯಲಾಗುವುದು. ಈ ಕುರಿತು ಈಗಾಗಲೇ ಕೆಲಸಗಳು ನಡೆಯುತ್ತಿವೆ. ತುರ್ವಿಹಾಳ ಕೆರೆ ತುಂಬಿಸಲು ಕನಿಷ್ಠ 28 ದಿನಗಳು ಬೇಕು. ಆದರೆ ಕಾಲುವೆಯಿಂದ 6 ದಿನ ಮಾತ್ರ ನೀರು ಪೂರೈಕೆ ಮಾಡಲು ಅವಕಾಶ ಸಿಕ್ಕಿದ್ದು, ಇದರಿಂದ ಅಗತ್ಯವಿರುವಷ್ಟು ನೀರು ತುಂಬಿಸಲು ಆಗಿಲ್ಲ. ಈ ನಡುವೆಯೂ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಮೇಲಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದರು.ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಹೋರಾಟ ಸಮಿತಿಯ ಹುಸೇನ್ಸಾಬ್, ಖಾದರ್ ಸುಭಾನಿ, ಸರಸ್ವತಿ ಪಾಟೀಲ್, ಎಚ್.ಜಿ.ಹಂಪಣ್ಣ ಸೇರಿ ಅನೇಕರು ಇದ್ದರು.