ಕನ್ನಡಪ್ರಭ ವಾರ್ತೆ ಹುಳಿಯಾರು
ಇಲ್ಲಿಯ ಪರಿವೀಕ್ಷಣಾ ಮಂದಿರದಲ್ಲಿ ನೂರಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಸುದ್ದಿಗೋಷ್ಠಿ ನಡೆಸಿ ಜಿಲ್ಲೆಯಲ್ಲಿ ಜಾತಿ, ಧರ್ಮದ ತಾರತಮ್ಯ ಮಾಡದೆ ಬಡವ, ಬಲ್ಲಿದ ಎಂದು ಭೇದ ತೋರದೆ ಎಲ್ಲರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಿರುವ ಮುರಳೀಧರ ಹಾಲಪ್ಪಗೆ ಟಿಕೆಟ್ ನೀಡಿದರೆ ಗೆಲುವು ಸುಲಭ ಸಾಧ್ಯ ಎಂದು ಹೇಳಿದರು.
ರಾಜ್ಯ ಸೇವಾದಳ ಸಂಘಟನಾ ಕಾರ್ಯದರ್ಶಿ ಕೃಷ್ಣೇಗೌಡ ಮಾತನಾಡಿ, ಹಾಲಪ್ಪ ಅವರು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ತಮ್ಮ ಟ್ರಸ್ಟ್ ಮೂಲಕ ರೈತ ಪರ ಕಾರ್ಯಕ್ರಮ ಸಂಘಟಿಸಿದ್ದಾರೆ. ಕಷ್ಟ ಎಂದು ಬಂದವರಿಗೆ ಕೈಲಾದ ಸಹಾಯ ಮಾಡಿದ್ದಾರೆ. ಪೊಲೀಸ್ ಅಧಿಕಾರಿಗಳು ಸೇರಿದಂತೆ ಎಲ್ಲಾ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಕಾರ್ಯಕರ್ತರ ಕೆಲಸ ಮಾಡಿಸಿಕೊಟ್ಟಿದ್ದಾರೆ. ಹೀಗೆ ಸ್ಪಂದಿಸುವ ಗುಣಉಳ್ಳವರಿಗೆ ಮೊದಲ ಆದತ್ಯೆಯಲ್ಲಿ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು.ತಾಲೂಕು ಸೇವಾದಳದ ಅಧ್ಯಕ್ಷ ಗೋವಿಂದರಾಜು ಮಾತನಾಡಿ, ಉತ್ತು ಬಿತ್ತಿದವರನ್ನು ಬಿಟ್ಟು ಬೇರೆಯವರು ಫಲ ಕೀಳಲು ಬಿಡುವುದು ಒಳ್ಳೆಯದಲ್ಲ. ಜಿಲ್ಲೆಯ ಮತದಾರರು ಹಾಗೂ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ಮಾಡಿ ಟಿಕೆಟ್ ಕೊಡಬೇಕು. ಯಾವುದೇ ಅಧಿಕಾರ ಇಲ್ಲದಿದ್ದರೂ ಜನರ ಕೂಗಿಗೆ ಸ್ಪಂದಿಸುವ ಗುಣವುಳ್ಳ ಯುವ ಮುಖಂಡ ಹಾಲಪ್ಪಗೆ ಟಿಕೆಟ್ ನೀಡಿ ಗೆಲ್ಲಿಸಿದರೆ, ರಾಜ್ಯದಲ್ಲೇ ತುಮಕೂರನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುತ್ತಾರೆ ಎಂದರು.
ಪಿಎಲ್‌ಡಿ ಬ್ಯಾಂಕು ಮಾಜಿ ಅಧ್ಯಕ್ಷ ಲಿಂಗಣ್ಣ ಮಾತನಾಡಿ ಹಾಲಪ್ಪ ಅವರು ಪಕ್ಷದಿಂದ ಪಕ್ಷಕ್ಕೆ ಅಧಿಕಾರಕ್ಕಾಗಿ ಜಿಗಿಯುವವರಲ್ಲ, ಬೇರೆ ಪಕ್ಷದ ಅಭ್ಯರ್ಥಿಗಳ ಪರ ಮತ ಹಾಕಿಸಿದವರಲ್ಲ, ಪಕ್ಷದ ಶಿಸ್ತಿನ ಸಿಪಾಯಿಯ ತರ ಎಲ್ಲಾ ಚುನಾವಣೆಯಲ್ಲೂ ಎಲ್ಲಾ ಕ್ಷೇತ್ರದಲ್ಲೂ ಗೆಲುವಿಗೆ ಶ್ರಮಿಸಿದ್ದಾರೆ. ಸಾಮಾನ್ಯ ಜನರೂ ಸಹ ನೇರವಾಗಿ ಅವರನ್ನು ಮಾತನಾಡಿಸಿ ಸಹಾಯ ಪಡೆಯಬಹುದಾಗಿದೆ. ದೂರವಾಣಿಯಲ್ಲೇ ಸಮಸ್ಯೆ ಹೇಳಿಕೊಂಡು ಪರಿಹರಿಸಿಕೊಂಡವರು ಸಾಕಷ್ಟು ಮಂದಿ ಇದ್ದಾರೆ. ಇಂತಹ ಸೇವಾಗುಣವುಳ್ಳವರಿಗೆ ಟಿಕೆಟ್ ನೀಡಿದರೆ ಚುನಾವಣೆಯಲ್ಲಿ ಓಡಾಡಲು ಕಾರ್ಯಕರ್ತರಿಗೆ ಹುಮ್ಮಸ್ಸು ಇರುತ್ತದೆ ಎಂದರು.
ಕಿರಣ್ ಕುಮಾರ್ ಜಿಲ್ಲಾ ಸೇವಾದಳ ಅಧ್ಯಕ್ಷ, ಸುಂದರ ಮೂರ್ತಿ, ಕಾರ್ಮಿಕ ಘಟಕ ತಾಲೂಕು ಅಧ್ಯಕ್ಷ ಓಂಕಾರ್ ಮೂರ್ತಿ, ಕೃಷಿಕ ಸಮಾಜದ ತಿಮ್ಮಯ್ಯ, ಮಲ್ಲೇಶಯ್ಯ, ತಾಪಂ ಮಾಜಿ ಅಧ್ಯಕ್ಷ ಶಾರದಗೌಡ, ಮುಖಂಡರಾದ ರಾಜಣ್ಣ ಟಿ., ಪ್ರಮೀಳಮ್ಮ, ಪುಷ್ಪಲತಾ, ದಯಾನಂದ್, ರಂಗಸ್ವಾಮಯ್ಯ, ಪ್ರಸನ್ನಕುಮಾರ್, ಪುನೀತ್ ಹಾಗೂ ಹಲವರು ಉಪಸ್ಥಿತರಿದ್ದರು.