ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಡಳಿತ ಭವನದಲ್ಲಿ ಪ್ರಗತಿ ಪರಿಶೀಲನಾ ಸಭೆಗಾಗಿ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಚ್.ಮುನಿಯಪ್ಪ ಅವರನ್ನು ತಡೆದ ಚನ್ನರಾಯಪಟ್ಟಣ ಹೋಬಳಿಯ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ರೈತರು ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದ ಘಟನೆ ಬುಧವಾರ ನಡೆಯಿತು.
ಈ ವೇಳೆ ಮಾತನಾಡಿದ ರೈತ ಮುಖಂಡರು, ಇಂದಿನ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಒಂದಲ್ಲೊಂದು ನೆಪ ಹೇಳಿ ಮುಂದೂಡಲಾಗುತ್ತಿದೆ. ಇವರು ಕೂಡ ಹಿಂದಿನ ಸರ್ಕಾರಗಳ ರೀತಿಯಲ್ಲೇ ಬಂಡವಾಳಶಾಹಿಗಳ ಪರವಾಗಿ ವರ್ತಿಸುತ್ತಿದ್ದಾರೆ ಎಂದು ಸಚಿವರಿಗೆ ತೀವ್ರ ತರಾಟೆಗೆ ತೆಗೆದುಕೊಂಡರು.
ಇದಕ್ಕೆ ಉತ್ತರಿಸಲು ಮುಂದಾದ ಮಂತ್ರಿಗಳು, ಬೆಳಗಾವಿ ಅಧಿವೇಶನ ಮುಗಿಯುವುದರೊಳಗಾಗಿ ಈ ಸಮಸ್ಯೆಯನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಸಮಜಾಯಿಸಿ ನೀಡಲು ಮುಂದಾದಾಗ, ರೈತರು ಮತ್ತಷ್ಟು ಕೋಪಗೊಂಡು, ನೀವು ಅಧಿಕಾರಕ್ಕೆ ಬಂದಾಗಿನಿಂದ ಇಂತಹ ಹತ್ತಾರು ಗಡುವುಗಳನ್ನು ನೀಡುತ್ತಲೇ ಬಂದಿದ್ದೀರಿ, ಯಾವ ಬಾರಿಯೂ ಕೊಟ್ಟ ಮಾತಿನಂತೆ ನಡೆದುಕೊಳ್ಳಲೇ ಇಲ್ಲ. ನಾವು ನಿಮ್ಮ ಮನೆಗೆ ಅಲೆಯುತ್ತಲೇ ಇದ್ದೇವೆ. ಇಷ್ಟಾದರೂ ನಮ್ಮ ಸಮಸ್ಯೆ ಬಗೆಹರಿಸಿಲ್ಲ. ಆದ್ದರಿಂದ ನೀವು ಇಂದು ನೀಡುತ್ತಿರುವ ಗಡುವಿನಲ್ಲಿ ಸಮಸ್ಯೆ ಬಗೆಹರಿಸುತ್ತೀರೆಂಬ ಯಾವ ನಂಬಿಕೆಯೂ ನಮಗೆ ಇಲ್ಲ, ಎಂದು ಮಂತ್ರಿಗಳಿಗೆ ತಿರುಗೇಟು ನೀಡಿದರು.ರೈತರ ಆಕ್ರೋಶಕ್ಕೆ ಉತ್ತರಿಸಿದ ಸಚಿವ ಮುನಿಯಪ್ಪ, ರೈತರನ್ನು ಕಡೆಗಣಿಸುವ ಉದ್ದೇಶ ನನಗಿಲ್ಲ. ನಾನೂ ನಿಮ್ಮ ಹೋರಾಟದ ಬಗ್ಗೆ ಸರ್ಕಾರದ ಮುಂದೆ ಮಾತನಾಡುತ್ತಲೇ ಬಂದಿದ್ದೇನೆ. ಆದರೂ ಸಮಸ್ಯೆ ಬಗೆಹರಿಸಲು ಸಾದ್ಯವಾಗದಿರುವುದರ ಬಗ್ಗೆ ನನಗೂ ಬೇಸರವಿದೆ. ಇನ್ನೂ ನಾವು ಕಾಯಿಸಲು ಸಾಧ್ಯವಿಲ್ಲ. ಕೈಗಾರಿಕಾ ಸಚಿವರೊಂದಿಗೆ ಚರ್ಚಿಸಿ ಶೀಘ್ರವಾಗಿ ಕ್ರಮ ಕೈಗೊಳ್ಳಲಾಗುವುದು. ಅದಕ್ಕೂ ಮುಂಚೆ ಕೆಐಎಡಿಬಿ ಅಧಿಕಾರಿಗಳು ಮತ್ತು ರೈತರನ್ನೊಳಗೊಂಡ ಸಭೆಯನ್ನು ಜಿಲ್ಲಾಧಿಕಾರಿಗಳು ನಡೆಸಿ ಆ ಸಭೆಯ ನಿರ್ಣಯಗಳೊಂದಿಗೆ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಸ್ಥಳದಲ್ಲಿಯೇ ಹಾಜರಿದ್ದ ಜಿಲ್ಲಾಧಿಕಾರಿಗಳು ರೈತನಿಯೋಗ ಮತ್ತು ಕೆಐಎಡಿಬಿ ಅಧಿಕಾರಿಗಳ ಸಭೆಯನ್ನು ಡಿಸೆಂಬರ್ 7ರಂದು ನಡೆಸುವುದಾಗಿ ತಿಳಿಸಿ ಪ್ರತಿಭಟನೆಯನ್ನು ಹಿಂಪಡೆಯುವಂತೆ ಮನವಿ ಮಾಡಿಕೊಂಡರು.ಪ್ರತಿಭಟನೆಯಲ್ಲಿ ಹೋರಾಟಗಾರ ಕಾರಳ್ಳಿ ಶ್ರೀನಿವಾಸ್, ವಕೀಲ ಸಿದ್ಧಾರ್ಥ್, ರೈತ ಮುಖಂಡರಾದ ನಲ್ಲಪ್ಪನಹಳ್ಳಿ ನಂಜಪ್ಪ, ಅಶ್ವತ್ಥಪ್ಪ, ಮಾರೇಗೌಡ, ಜಯರಾಮೇಗೌಡ, ಮೋಹನ್, ವೆಂಕಟರಮಣಪ್ಪ, ನಾರಾಯಣಮ್ಮ, ಲಕ್ಷ್ಮಮ್ಮ, ಪ್ರಮೋದ್, ಮುಕುಂದ, ನಂದನ್, ಗೋಪಿನಾಥ್ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.-----------
ಫೋಟೋ-5ಕೆಡಿಬಿಪಿ4- ಬೆಂಗ್ರಾ ಜಿಲ್ಲಾಡಳಿತ ಭವನದ ಮುಂದೆ ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ನೇತೃತ್ವದಲ್ಲಿ ನಡೆಸುತ್ತಿದ್ದ ಪ್ರತಿಭಟನೆ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಅವರಿಗೆ ರೈತರು ಅಹವಾಲು ಮುಂದಿಟ್ಟರು.