ಬಸ್‌ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಪ್ರತಿಭಟನೆ

KannadaprabhaNewsNetwork |  
Published : Dec 06, 2024, 08:59 AM IST
5 ಎಂ.ಅರ್.ಬಿ. 2: ಮುನಿರಾಬಾದಿಗೆ ಸಮರ್ಪಕವಾದ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವಂತೆ ಆಗ್ರಹಿಸಿ  500  ಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿರುವ ದ್ರಶ್ಯ. | Kannada Prabha

ಸಾರಾಂಶ

ಮುನಿರಾಬಾದ ಗ್ರಾಮಕ್ಕೆ ಬಸ್‌ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಸುಮಾರು 500ಕ್ಕೂ ಅಧಿಕ ಶಾಲಾ ವಿದ್ಯಾರ್ಥಿಗಳು ಗುರುವಾರ ಇಲ್ಲಿನ ಬಸ್ ನಿಲ್ದಾಣದ ಮುಂದೆ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಮುನಿರಾಬಾದ

ಹುಲಿಗಿ ಕ್ರಾಸ್‌ನಲ್ಲಿ ನೂತನ ಫ್ಲ್ಯೆಓವರ್ ನಿರ್ಮಾಣವಾಗುತ್ತಿದ್ದು, ಇದರಿಂದ ಮುನಿರಾಬಾದ ಗ್ರಾಮಕ್ಕೆ ಬರುವ ಸಾರಿಗೆ ಬಸ್‌ಗಳ ಸಂಚಾರದಲ್ಲಿ ಭಾರಿ ಅಸ್ತವ್ಯಸ್ತವಾಗಿದೆ. ಇದನ್ನು ಸರಿಪಡಿಸಿ ಮುನಿರಾಬಾದ ಗ್ರಾಮಕ್ಕೆ ಬಸ್‌ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಸುಮಾರು 500ಕ್ಕೂ ಅಧಿಕ ಶಾಲಾ ವಿದ್ಯಾರ್ಥಿಗಳು ಗುರುವಾರ ಇಲ್ಲಿನ ಬಸ್ ನಿಲ್ದಾಣದ ಮುಂದೆ ಪ್ರತಿಭಟನೆ ನಡೆಸಿದರು.

ಈ ಸಂದರ್ಭ ಮಾತನಾಡಿದ ಎಐಡಿಎಸ್‌ಒ ಜಿಲ್ಲಾ ಸಂಚಾಲಕ ಗಂಗರಾಜ, ಮುನಿರಾಬಾದಿನ ಸುಮಾರು 2500 ಮಕ್ಕಳು ವಿವಿಧ ಶಾಲಾ ಮತ್ತು ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇದರಲ್ಲಿ ಸುಮಾರು 1500 ಮಕ್ಕಳು ಹುಲಿಗಿ, ಹೊಸಲಿಂಗಾಪುರ, ಹೊಸಹಳ್ಳಿ, ಕಾಸನಕಂಡಿ, ಹಿಟ್ನಾಳ,ಅಗಳಕೇರ ಹಾಗೂ ಶಿವಪುರ ಗ್ರಾಮಗಳಿಂದ ಪ್ರತಿನಿತ್ಯ ಮುನಿರಾಬಾದಿಗೆ ಆಗಮಿಸಿ ತಮ್ಮ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಹುಲಿಗಿ ಕ್ರಾಸ್‌ನಲ್ಲಿ ನೂತನ ಫ್ಲ್ಯೆಓವರ್ ನಿರ್ಮಾಣವಾಗುತ್ತಿದ್ದು, ಈ ಹಿನ್ನೆಲೆ ಒನ್ ವೇ ಟ್ರಾಫಿಕ್‌ ವ್ಯವಸ್ಥೆ ಮಾಡಲಾಗಿದ್ದು, ಇದನ್ನೇ ನೆಪ ಮಾಡಿಕೊಂಡು ಸಾರಿಗೆ ಬಸ್‌ಗಳು ಮುನಿರಾಬಾದಿಗೆ ಬರದೇ ನೇರವಾಗಿ ಹೊಸಪೇಟೆಗೆ ತೆರಳುತ್ತಿವೆ. ಇದರಿಂದ ಸಾರಿಗೆ ಬಸ್‌ಗಳ ಮೇಲೆ ಅವಲಂಬಿತವಾಗಿರುವ ಗ್ರಾಮೀಣ ಪ್ರದೇಶದ ಶಾಲಾ ಮಕ್ಕಳಿಗೆ ತುಂಬಾ ತೊಂದರೆಯಾಗುತ್ತಿದೆ. ಅವರು ಪ್ರತಿನಿತ್ಯ ಹುಲಿಗಿ, ಲಿಂಗಾಪುರ, ಹೊಸಹಳ್ಳಿ ಗ್ರಾಮಗಳಿಂದ ನಡೆದುಕೊಂಡು ಮುನಿರಾಬಾದಿಗೆ ಬರಬೇಕಾದ ಪರಿಸ್ಥಿತಿ ಬಂದಿದೆ. ಸಾರಿಗೆ ಅಧಿಕಾರಿಗಳು ಸುವ್ಯವಸ್ಥಿತ ಸಾರಿಗೆ ವ್ಯವಸ್ಥೆ ಕಲ್ಪಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಇದು ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತಿದೆ. ಸಾರಿಗೆ ಅಧಿಕಾರಿಗಳು ಈ ಸಮಸ್ಯೆಯನ್ನು 3 ದಿನಗಳಲ್ಲಿ ಬಗೆಹರಿಸದಿದ್ದರೆ ರಾಷ್ಟ್ರೀಯ ಹೆದ್ದಾರಿ 50ಯನ್ನು ಬಂದ್‌ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ನಂತರ ವಿದ್ಯಾರ್ಥಿಗಳು ಹಾಗೂ ಎಐಡಿಎಸ್‌ಒ ಪದಾಧಿಕಾರಿಗಳು ಕೊಪ್ಪಳ ಡಿಪೋ ಮ್ಯಾನೇಜರ್ ಭಟ್ಟೂರು ಅವರಿಗೆ ಮನವಿ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನರೇಗಾ ಮರುಜಾರಿವರೆಗೆ ಹೋರಾಟ : ಸಿಎಂ ಸಿದ್ದರಾಮಯ್ಯ
ಡ್ರಗ್ಸ್‌ ವಿರುದ್ಧ ಸಿಎಂ ತವರಿಂದಲೇ ಹೋರಾಟ : ವಿಜಯೇಂದ್ರ