ಹೆಚ್ಚಿನ ಅನುದಾನಕ್ಕಾಗಿ ಸಿಎಂಗೆ ಶೀಘ್ರ ಮನವಿ: ಎಸ್ಸೆಸ್ಸೆಂ

KannadaprabhaNewsNetwork |  
Published : Jan 27, 2024, 01:18 AM IST
26ಕೆಡಿವಿಜಿ4-ದಾವಣಗೆರೆಯಲ್ಲಿ ಸಚಿವ ಎಸ್.ಎಸ್‌.ಮಲ್ಲಿಕಾರ್ಜುನ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ............26ಕೆಡಿವಿಜಿ5-ದಾವಣಗೆರೆ ಜಿಲ್ಲೆಗೆ ಸದ್ಯ ನಾನೇ ಕೊಡುಗೆ.... ದಾವಣಗೆರೆಯಲ್ಲಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹೊಸ ಲುಕ್‌. | Kannada Prabha

ಸಾರಾಂಶ

ಭದ್ರಾ ಕಾಡಾ ಸಮಿತಿ ಸಭೆ ನಿಗದಿಯಾಗಿದ್ದ ದಿನದಂದು ಹೊರ ರಾಜ್ಯದಲ್ಲಿ ತಾವು ಇದ್ದುದರಿಂದ ಸಭೆಗೆ ಹೋಗಿರಲಿಲ್ಲ. ಅದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ. ಜಿಲ್ಲೆಯ ಅಚ್ಚುಕಟ್ಟು ರೈತರ ಹಿತ ಕಾಯಲು ಬದ್ಧರಿದ್ದೇವೆ. ಈಗಾಗಲೇ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್, ನೀರಾವರಿ, ಬೆಸ್ಕಾಂ ಸೇರಿ ಎಲ್ಲಾ ಅಧಿಕಾರಿಗಳಿಗೆ ಭದ್ರಾ ನಾಲೆಯಲ್ಲಿ ನಿಗದಿತ ಪ್ರಮಾಣದ ನೀರು ಹರಿಯಬೇಕು.

ಕನ್ನಡಪ್ರಭ ವಾರ್ತೆ ದಾವಣಗೆರೆ

ತೀವ್ರ ಬರ ಹಿನ್ನೆಲೆಯಲ್ಲಿ ಬಜೆಟ್‌ನಲ್ಲಿ ಜಿಲ್ಲೆಯ ಕುಡಿಯುವ ನೀರಿನ ವ್ಯವಸ್ಥೆ ಸೇರಿ ಮೂಲಸೌಲಭ್ಯ ಕಲ್ಪಿಸಲು ಹೆಚ್ಚಿನ ಅನುದಾನ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ ಮಾಡಲಾಗುವುದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ತಿಳಿಸಿದರು.

ನಗರದ ಜೆಜೆಎಂ ಕಾಲೇಜಿನ ನೂತನ ಸಭಾಂಗಣದಲ್ಲಿ ಶುಕ್ರವಾರ ಗಣರಾಜ್ಯೋತ್ಸವ ಧ್ವಜಾರೋಹಣದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ. ಭದ್ರಾ ಕಾಡಾ ಸಮಿತಿ ಸಭೆ ನಿಗದಿಯಾಗಿದ್ದ ದಿನದಂದು ಹೊರ ರಾಜ್ಯದಲ್ಲಿ ತಾವು ಇದ್ದುದರಿಂದ ಸಭೆಗೆ ಹೋಗಿರಲಿಲ್ಲ. ಅದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ. ಜಿಲ್ಲೆಯ ಅಚ್ಚುಕಟ್ಟು ರೈತರ ಹಿತ ಕಾಯಲು ಬದ್ಧರಿದ್ದೇವೆ. ಈಗಾಗಲೇ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್, ನೀರಾವರಿ, ಬೆಸ್ಕಾಂ ಸೇರಿ ಎಲ್ಲಾ ಅಧಿಕಾರಿಗಳಿಗೆ ಭದ್ರಾ ನಾಲೆಯಲ್ಲಿ ನಿಗದಿತ ಪ್ರಮಾಣದ ನೀರು ಹರಿಯಬೇಕು. ಅಚ್ಚುಕಟ್ಟು ಕಡೆಯ ಭಾಗಕ್ಕೂ ನೀರು ತಲುಪಿಸಲು ಏನೆಲ್ಲಾ ಅಗತ್ಯ ಕ್ರಮ ಕೈಗೊಳ್ಳಬೇಕೋ ಅದನ್ನು ಮಾಡುವಂತೆ ಸೂಚನೆ ನೀಡಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಆವರಗೊಳ್ಳ ಸಮೀಪದ ಹಿಂದೆ ಹಾಸ್ಟೆಲ್ ಆರಂಭಿಸಿದ್ದೆವು. ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿ ನಿಲಯಗಳನ್ನು ಪ್ರತಿ ತಾಲೂಕಿನಲ್ಲಿ ಸ್ಥಾಪಿಸಲು ಅಗತ್ಯ ಜಮೀನು ನೀಡಿ, ಹಾಸ್ಟೆಲ್ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು. ವಿದ್ಯಾರ್ಥಿಗಳ ಸಂಖ್ಯೆ ಒಂದು ವೇಳೆ ಹೆಚ್ಚಾದರೆ, ಹಾಸ್ಟೆಲ್‌ಗಳಲ್ಲಿ ಸೀಟುಗಳು ಇಲ್ಲದಿದ್ದರೂ ಯಾವುದೇ ವಿದ್ಯಾರ್ಥಿಗಳಿಗೆ ಇಲ್ಲವೆಂದು ಹೇಳುವಂತಿಲ್ಲ. ಅಂತಹ ವಿದ್ಯಾರ್ಥಿಗಳಿಗಾಗಿ ಬಾಡಿಗೆ ಕಟ್ಟಡದಲ್ಲಾದರೂ ಹಾಸ್ಟೆಲ್ ವ್ಯವಸ್ಥೆ ಮಾಡಬೇಕು. ಶಿಕ್ಷಣಕ್ಕೆ ನಮ್ಮ ಆದ್ಯತೆ. ಸಂಬಂಧಿಸಿದ ಎಲ್ಲಾ ಇಲಾಖೆಗೂ ಈ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಿದ್ದೇನೆ ಎಂದು ತಿಳಿಸಿದರು.

ಜನತಾ ದರ್ಶನಕ್ಕೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಾಲ್ಕೈದು ಅರ್ಜಿಗಳ ಹೊರತುಪಡಿಸಿದರೆ, ಉಳಿದೆಲ್ಲಾ ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ. ಶೀಘ್ರವೇ ಮತ್ತೆ ಜನತಾ ದರ್ಶನ ಆಯೋಜಿಸಲು ಸ್ಥಳ, ದಿನಾಂಕ ನಿಗದಿಪಡಿಸಲು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ರಿಗೆ ಸೂಚನೆ ನೀಡಿದರು.

.................

ಬಿಜೆಪಿಯವರು ಯೋಜನೆಗಳೆಲ್ಲ ಕೆಡಿಸಿದ್ದಾರೆ

ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿ ಕಳಪೆ ಬಗ್ಗೆ ಆರೋಪ ಹಿನ್ನೆಲೆಯಲ್ಲಿ ಎಲ್ಲಾ ಕಾಮಗಾರಿಗಳ ತನಿಖೆ ಕೈಗೊಳ್ಳಲಾಗಿದೆ. ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು. ಹಿಂದಿನ 5 ವರ್ಷದಲ್ಲಿ ಬಿಜೆಪಿಯವರು ನಾವು ಮಾಡಿದ್ದ ಯೋಜನೆಗಳೆಲ್ಲ ಕೆಡಿಸಿದ್ದಾರೆ. ಅದನ್ನು ಸರಿಪಡಿಸಲು ಕನಿಷ್ಠ 2 ವರ್ಷ ಬೇಕು. ಬಿಜೆಪಿ ಕೈಗೊಂಡ ಕಾಮಗಾರಿಗಳಲ್ಲಿ ಕೆಲ ಕಳಪೆಯಾಗಿದ್ದರೆ, ಮತ್ತೆ ಕೆಲವು ಅವೈಜ್ಞಾನಿಕವಾಗಿದೆ. ಹಿಂದೆ ಖಾಸಗಿ ಬಸ್ ನಿಲ್ದಾಣ(ಹಳೆ ಬಸ್ಸು ನಿಲ್ದಾಣ)ಕ್ಕೆ ವ್ಯವಸ್ಥಿತ ಪ್ಲಾನ್ ಮಾಡಿದ್ದೆವು. ಬಿಜೆಪಿಯವರು ಮಾಡಿದ ಖಾಸಗಿ ಬಸ್‌ ನಿಲ್ದಾಣದಲ್ಲಿ ಬಸ್‌ ತಿರುಗಿಸಲೂ ಜಾಗವಿಲ್ಲ ಎಂದು ಸಚಿವ ಮಲ್ಲಿಕಾರ್ಜುನ ಅಸಮಾಧಾನ ವ್ಯಕ್ತಪಡಿಸಿದರು.

.............

ಡಾ.ಪ್ರಭಾ ಸ್ಪರ್ಧೆ ನಿರ್ಧರಿಸಿಲ್ಲ

ದಾವಣಗೆರೆ ಲೋಕಸಭಾ ಕ್ಷೇತ್ರ ಚುನಾವಣೆಗೆ ಡಾ.ಪ್ರಭಾ ಸ್ಪರ್ಧೆ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಕಾಂಗ್ರೆಸ್‌ ಪಕ್ಷವೆಂದರೆ ಒಂದು ದೊಡ್ಡ ಸಂಸಾರವಿದ್ದಂತೆ. ಯಾವುದೇ ವಿಚಾರವಿದ್ದರೂ ನಾವೆಲ್ಲಾ ಕುಳಿತು, ಚರ್ಚಿಸಿ, ತೀರ್ಮಾನಿಸುತ್ತೇವೆ. ಎಲ್ಲರ ಜೊತೆಗೆ ಚರ್ಚಿಸಿದ ನಂತರವೇ ಸೂಕ್ತ ಅಭ್ಯರ್ಥಿ ಕಣಕ್ಕಿಳಿಸುವ ಬಗ್ಗೆ ತೀರ್ಮಾನಿಸಲಾಗುವುದು.

ಎಸ್.ಎಸ್‌.ಮಲ್ಲಿಕಾರ್ಜುನ, ಜಿಲ್ಲಾ ಉಸ್ತುವಾರಿ ಸಚಿವ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದಿನಿಂದ ನೀರು ದರ ಶೇ.3 ಹೆಚ್ಚಳ
ಇಂದು ವರ್ಣರಂಜಿತ ಬೆಂಗಳೂರು ಕರಗ